ಮಾ.೬ ರಂದು ರೈತರ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಬೆಂಗಳೂರು ಚಲೋ

Gadag
Gadag
Published on
ಗದಗ: ರೈತರ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ವತಿಯಿಂದ ಮಾ.೬ ರಂದು ಬೆಂಗಳೂರು ಚಲೋ ಹಮ್ಮಿಕೊಂಡಿದೆ ಎಂದು ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ನಟರಾಜ ಸವಡಿ ಹೇಳಿದರು.
ಗುರುವಾರ ನಗರದ ಪತ್ರಿಕಾ ಭವನದಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು, ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದು, ರೈತರ ಪಂಪ್ ಸೆಟ್‌ಗಳಿಗೆ ಉಚಿತ ವಿದ್ಯುತ್ ಪರಿಕರಗಳನ್ನು ಮೊದಲಿನಂತೆ ವಿತರಿಸಬೇಕು. ಆಲಮಟ್ಟಿ ಆಣೆಕಟ್ಟು ಜಲಾಶಯವನ್ನು ೫೧೯ ರಿಂದ ೫೨೪.೨೫೬ ಮೀಟರ್ ದಷ್ಟು ಎತ್ತರಿಸುವುದು, ರೈತರ ಬೆಳೆಗೆ ಸರ್ಕಾರ ಕಾನೂನಾತ್ಮಕ ಬೆಲೆ ನಿಗದಿ ಪಡೆಸುವದು, ಜಲ ಜೀವನ ಮಿಷನ್ ಅಡಿಯಲ್ಲಿ ಪ್ರತಿ ಹಳ್ಳಿಗೂ ನೀರಿನ ಸಮರ್ಪಕ ಪೂರೈಕೆ ಮಾಡಬೇಕು.
ಮಾಲಿನ್ಯ ಕಾರಕ ಕಾರ್ಖಾನೆಗಳ ಸ್ಥಾಪನೆ ಹಾಗೂ ವಿಸ್ತರಣೆಯನ್ನು ಸ್ಥಗಿತಗೊಳಿಸುವುದು ಮತ್ತು ಪರಿಸರ ಸ್ನೇಹಿ ಉದ್ದಿಮೆಗಳ ಸ್ಥಾಪನೆಗೆ ಒತ್ತು ಕೊಡುವುದು, ಉದ್ದಿಮೆ ಜನ್ಯ ಮಾಲಿನ್ಯ ನಿರ್ವಹಣೆಯನ್ನು ಪರಿಸರವಾದಿಗಳಿಗೆ ವಹಿಸುವುದು ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ರೈತ ಮಹಿಳೆ ರೇಖಾ ಜಡಿ ಮಾತನಾಡಿ, ರೈತರ ಹೊಲಗಳಿಗೆ ನದಿ ನೀರನ್ನು ಸಕಾಲಕ್ಕೆ ಸಮರ್ಪಕವಾಗಿ ಪೂರೈಸುವುದು, ಕಾರ್ಖಾನೆಗಳ ಸುತ್ತಮುತ್ತಲು ವಾಯು ಗುಣಮಟ್ಟ ಮಾಪಕಗಳನ್ನು ಅಳವಡಿಸುವುದು, ಕಡಿಮೆ ಮೀಸಲಾತಿ ಸೌಲಭ್ಯ ಪಡೆದ ಕುಟುಂಬಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಮಾಲಿನ್ಯ ನಿಯಂತ್ರಣ ಮಂಡಳಿಯ ಆಡಳಿತಾತ್ಮಕ ಮಾಲಿನ್ಯ ನಿಯಂತ್ರಣಕ್ಕೆ ಕ್ರಮ ವಹಿಸುವುದು, ರೈತರಿಗೆ ಸಾಕಾಗುವಷ್ಟು ಬೀಜಗೊಬ್ಬರಗಳನ್ನು ಸಕಾಲದಲ್ಲಿ ಪೂರೈಸುವದು, ರಾಜ್ಯಮಟ್ಟದ ಕೇಂದ್ರೀಕೃತ ಹಣಕಾಸು ಬಿಲ್ ವಿಲೇವಾರಿ ವ್ಯವಸ್ಥೆ ಜಾರಿಗೆ ತರುಬೇಕು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ವಿಶ್ವನಾಥಯ್ಯ ಹಿರೇಮಠ, ಮಲ್ಲಿಕಾರ್ಜುನ ಹಿರೇಮಠ, ಬಸವರಾಜ ಅಗಸಿಬಾಗಿಲು, ಯಲ್ಲಪ್ಪ ಜಡಿ, ಸಿದ್ದಪ್ಪ ಕಳಗಂಡಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net