ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯ: ಐಜಿಪಿ ಸಂದೀಪ ಪಾಟೀಲ

ಗದಗ ನಗರದಲ್ಲಿ ಹಮ್ಮಿಕೊಂಡಿದ್ದ ಮಾದಕ ವ್ಯಸನ ಮುಕ್ತ ಗದಗ ವಾಕಾಥಾನ್​ -2026 ಕಾರ್ಯಕ್ರಮಕ್ಕೆ ಐಜಿಪಿ ಸಂದೀಪ ಪಾಟೀಲ ಸೋಮವಾರ ಚಾಲನೆ ನೀಡಿದರು. ರೋಹನ್​ ಜಗದೀಶ, ಡಿವೈಎಸ್​ಪಿ ಮಹಾಂತೇಶ್​ ಸಜ್ಜನ, ಡಿಎಸ್​ಪಿ ಮುರ್ತುಜಾ ಖಾದ್ರಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
ಗದಗ ನಗರದಲ್ಲಿ ಹಮ್ಮಿಕೊಂಡಿದ್ದ ಮಾದಕ ವ್ಯಸನ ಮುಕ್ತ ಗದಗ ವಾಕಾಥಾನ್​ -2026 ಕಾರ್ಯಕ್ರಮಕ್ಕೆ ಐಜಿಪಿ ಸಂದೀಪ ಪಾಟೀಲ ಸೋಮವಾರ ಚಾಲನೆ ನೀಡಿದರು. ರೋಹನ್​ ಜಗದೀಶ, ಡಿವೈಎಸ್​ಪಿ ಮಹಾಂತೇಶ್​ ಸಜ್ಜನ, ಡಿಎಸ್​ಪಿ ಮುರ್ತುಜಾ ಖಾದ್ರಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
Published on
ವಿಜಯವಾಣಿ ಸುದ್ದಿಜಾಲ ಗದಗ
ಮಾದಕ ವ್ಯಸನ ಮುಕ್ತ ಸಮಾಜವನ್ನು ನಿಮಿರ್ಸುವುದು ಕೇವಲ ಪೊಲೀಸ್​ ಇಲಾಖೆಯಿಂದ ಮಾತ್ರ ಸಾಧ್ಯವಿಲ್ಲ. ಸಾರ್ವಜನಿಕರು ಹಾಗೂ ಯುವಜನತೆ ಕೈಜೋಡಿಸಿದಾಗ ಮಾತ್ರ ಇದನ್ನು ಸಂರ್ಪೂಣವಾಗಿ ಮುಕ್ತಗೊಳಿಸಲು ಸಾಧ್ಯ ಎಂದು ಬೆಳಗಾವಿ ಉತ್ತರ ವಲಯದ ಐಜಿಪಿ ಸಂದೀಪ ಪಾಟೀಲ ಹೇಳಿದರು.
ನಗರದಲ್ಲಿ ಅಂತರರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ಮತ್ತು ಕಳ್ಳಸಾಗಣೆ ವಿರೋಧಿ ದಿನಾಚರಣೆಯ ಅಂಗವಾಗಿ, ಗದಗ ಜಿಲ್ಲಾ ಪೊಲೀಸ್​ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ "ಮಾದಕ ವ್ಯಸನ ಮುಕ್ತ ಗದಗ ವಾಕಥಾನ್​ 2026' ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿ, ಪ್ರತಿಯೊಬ್ಬರಿಗೂ ಜೀವನದಲ್ಲಿ ಡಾಕ್ಟರ್​, ಇಂಜಿನಿಯರ್​, ಪೊಲೀಸ್​ ಅಥವಾ ಕ್ರೀಡಾಪಟು ಆಗಬೇಕೆಂಬ ದೊಡ್ಡ ಕನಸುಗಳಿರುತ್ತವೆ. ಆದರೆ, ಡ್ರಗ್ಸ್​ನಂತಹ ದುಶ್ಚಟಗಳಿಗೆ ಬಲಿಯಾದರೆ ಆ ಎಲ್ಲಾ ಕನಸುಗಳು ನುಚ್ಚು ನೂರಾಗುತ್ತವೆ. ಹೀಗಾಗಿ ಯುವಜನತೆ ಯಾವುದೇ ಕಾರಣಕ್ಕೂ ಇಂತಹ ವ್ಯಸನಗಳಿಗೆ ಒಳಗಾಗಬಾರದು ಎಂದರು.
ಜೂನ್​ 26 ರಂದು ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಇಲಾಖೆಯು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ವಾರ ರ್ಪೂತಿ ವಿಶೇಷ ಅಭಿಯಾನಗಳನ್ನು ಹಮ್ಮಿಕೊಂಡಿದೆ. ಡ್ರಗ್ಸ ಕಾಯ್ದೆಯಡಿ ಕೇವಲ ಮಾರಾಟಗಾರರಷ್ಟೇ ಅಲ್ಲದೇ, ಮಾದಕ ವಸ್ತುಗಳನ್ನು ಸೇವಿಸುವ ಗ್ರಾಹಕರ ಮೇಲೂ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಯುವಕರು ಸ್ನೇಹಿತರ ಒತ್ತಡಕ್ಕೆ ಮಣಿದು ಇಂತಹ ಚಟಗಳಿಗೆ ದಾಸರಾಗಬಾರದು ಎಂದರು.
ಕಳೆದ ಒಂದು ವರ್ಷದಲ್ಲಿ ಗದಗ ಜಿಲ್ಲಾ ಪೊಲೀಸರು ಮಾದಕ ವಸ್ತುಗಳ ತಡೆಗೆ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 27 ಪ್ರಕರಣಗಳನ್ನು ದಾಖಲಿಸಿ, 52 ಆರೋಪಿಗಳನ್ನು ಬಂಧಿಸಲಾಗಿದೆ. ಉತ್ತರ ವಲಯದ 5 ಜಿಲ್ಲೆಗಳಲ್ಲೇ ಪ್ರಥಮ ಬಾರಿಗೆ ಗದಗ ಜಿಲ್ಲೆಯಲ್ಲಿ ಕಾಯ್ದೆಯಡಿ ಅಭ್ಯಾಸ ಬಲ ಉಳ್ಳ ಅಪರಾಧಿಗಳ ವಿರುದ್ಧ ಪ್ರಕರಣ ದಾಖಲಿಸಿ, ಒಂದು ವರ್ಷದವರೆಗೆ ಜೈಲಿಗಟ್ಟುವ ಕಠಿಣ ಕ್ರಮ ಜರುಗಿಸಲಾಗಿದೆ ಎಂದು ಐಜಿಪಿ ಹೇಳಿದರು.
ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ರೋಹನ ಜಗದೀಶ ಮಾತನಾಡಿ ಮಾದಕ ವಸ್ತುಗಳ ರ್ದುಬಳಕೆಯು ಕೇವಲ ಒಬ್ಬ ವ್ಯಕ್ತಿಯನ್ನು ಬಲಿತೆಗೆದುಕೊಳ್ಳುವುದಿಲ್ಲ. ಬದಲಾಗಿ ಅವರ ಇಡೀ ಕುಟುಂಬ ಹಾಗೂ ಯುವ ಪೀಳಿಗೆಯ ಭವಿಷ್ಯದ ಮೇಲೆ ಅತ್ಯಂತ ಗಂಭೀರವಾದ ಪರಿಣಾಮ ಬೀರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಮಾದಕ ವ್ಯಸನದ ವಿರುದ್ಧ ಧ್ವನಿ ಎತ್ತಬೇಕಾಗಿದೆ. ಯಾವುದೇ ಒಂದು ವೈದ್ಯಕಿಯ ಔಷಧಿಯನ್ನೇ ಆಗಲಿ, ಅದನ್ನು ನಿಗದಿತ ಪ್ರಮಾಣಕ್ಕಿಂತ ಅತಿಯಾಗಿ ಬಳಕೆ ಮಾಡಿದರೆ ಅದು ಔಷಧಿಯಾಗಿ ಉಳಿಯದೇ ವಿಷವಾಗಿ ಮಾರ್ಪಡುತ್ತದೆ. ಇತ್ತೀಚಿನ ದಿನಗಳಲ್ಲಿ ಯುವಜನತೆ ಗಾಂಜಾ, ಹಶೀಶ್​, ಆಯಿಲ್​, ಒಪಿಯಾಡ್ಸ್​ ಹಾಗೂ ವಿವಿಧ ಕೆಮಿಕಲ್​ ಡ್ರಗ್ಸಗಳಂತಹ ಮಾದಕ ವ್ಯಸನಗಳಿಗೆ ತುತ್ತಾಗುತ್ತಿದ್ದಾರೆ. ಇವು ನೇರವಾಗಿ ಅಥವಾ ಪರೋಕ್ಷವಾಗಿ ಮನುಷ್ಯನ ಆರೋಗ್ಯ, ಭವಿಷ್ಯ, ಕುಟುಂಬ ಹಾಗೂ ಆಥಿರ್ಕ ಸ್ಥಿತಿಯನ್ನು ಸಂರ್ಪೂಣವಾಗಿ ಹಾನಿ ಮಾಡಿ ಸಾವು-ನೋವಿಗೆ ದೂಡುತ್ತವೆ ಎಂದರು.
ಮಾದಕ ವಸ್ತುಗಳ ವಿರುದ್ಧದ ಹೋರಾಟದಲ್ಲಿ ಸಾರ್ವಜನಿಕರಿಗೆ ಪೊಲೀಸ್​ ಇಲಾಖೆಯು ಸದಾ ಬೆಂಬಲ ನೀಡಲಿದೆ. ಕಳೆದ ಒಂದು ವರ್ಷದಿಂದ ಜಿಲ್ಲೆಯಲ್ಲಿ ಮಾದಕ ವಸ್ತುಗಳ ಮಾರಾಟಗಾರರ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಜರುಗಿಸಿ ಸಾಕಷ್ಟು ಪ್ರಕರಣಗಳನ್ನು ದಾಖಲಿಸಲಾಗಿದೆ. ಅಷ್ಟೇ ಅಲ್ಲದೆ, ಪ್ರಥಮ ಬಾರಿಗೆ ಗದಗ ಜಿಲ್ಲೆಯಲ್ಲಿ ಕುಖ್ಯಾತ ಪೆಡ್ಲರ್​ ಒಬ್ಬನ ವಿರುದ್ಧ ಪ್ರಕರಣ ದಾಖಲಿಸಿ, ಅತ್ಯಂತ ಕಠಿಣ ಶಿಕ್ಷೆ ವಿಧಿಸಿ ಆತನನ್ನು ಜೈಲಿಗೆ ಕಳುಹಿಸಲಾಗಿದೆ. ಸಮಾಜದಲ್ಲಿ ಮಾದಕ ವಸ್ತುಗಳ ಸಂರ್ಪೂಣ ನಿರ್ಮೂಲನೆಗೆ ಸಾರ್ವಜನಿಕರಲ್ಲಿ ವ್ಯಾಪಕ ಜಾಗೃತಿ ಮೂಡಿಸುವುದು ಅತ್ಯಗತ್ಯ. ಮುಂಬರುವ ದಿನಗಳಲ್ಲಿ ಗದಗ ಜಿಲ್ಲೆಯನ್ನು ಸಂರ್ಪೂಣ ನಶೆ ಮುಕ್ತವನ್ನಾಗಿಸಲು ಎಲ್ಲರ ಸಹಕಾರ ಅಗತ್ಯ ಎಂದರು.
ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್​ ಕೆ.ಆರ್​ ಮಾತನಾಡಿ ಕೇವಲ ಕಾನೂನು ಕ್ರಮಗಳಿಂದ ಮಾತ್ರ ಇದನ್ನು ತಡೆಯಲು ಸಾಧ್ಯವಿಲ್ಲ. ಸಮಾಜದಲ್ಲಿ ಮಾದಕ ದ್ರವ್ಯದ ವಿರುದ್ಧ ವ್ಯಾಪಕ ಜನಜಾಗೃತಿ ಮೂಡಿಸುವುದು ಅತ್ಯಂತ ಅಗತ್ಯ ಎಂದರು.
ಇತ್ತೀಚಿನ ದಿನಗಳಲ್ಲಿ ಯುವಜನತೆ ಕೇವಲ ಸಾಂಪ್ರದಾಯಿಕ ಮಾದಕ ವಸ್ತುಗಳಷ್ಟೇ ಅಲ್ಲದೆ, ಅಪಾಯಕಾರಿ ಮೆಡಿಕಲ್​ ಡ್ರಗ್ಸ್​' ಹಾಗೂ ಕೆಮ್ಮಿನ ಸಿರಪ್​ಗಳ ರ್ದುಬಳಕೆಗೆ ಅತಿಯಾಗಿ ದಾಸರಾಗುತ್ತಿದ್ದಾರೆ. ಕೇವಲ ನಶೆಗಾಗಿ ಮತ್ತು ಅತಿಯಾಗಿ ನಿದ್ರೆ ಮಾಡಲು ಇಂತಹ ಸಿರಪ್​ಗಳನ್ನು ಯುವಕರು ಬಳಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಇಂತಹ ನಿಷೇಧಿತ ಹಾಗೂ ರ್ದುಬಳಕೆ ಆಗುವ ಔಷಧಗಳ ಮಾರಾಟದ ಮೇಲೆ ಕಟ್ಟುನಿಟ್ಟಿನ ನಿಗಾವಹಿಸಲು ಈಗಾಗಲೇ ಜಿಲ್ಲಾಸ್ಪತ್ರೆ ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ಸರ್ಕಾರದ ನಿರ್ದೇಶನದಂತೆ ಕಡಕ ಸೂಚನೆ ನೀಡಲಾಗಿದೆ ಎಂದರು.
ಒಂದು ಮನೆಯಲ್ಲಿ ಕೇವಲ ಒಬ್ಬ ವ್ಯಕ್ತಿ ಮಾದಕ ವ್ಯಸನಿಯಾದರೂ, ಅದು ಇಡೀ ಕುಟುಂಬ ಹಾಗೂ ಸುತ್ತಮುತ್ತಲಿನ ವಾತಾವರಣದ ನೆಮ್ಮದಿಯನ್ನು ಕದಡುತ್ತದೆ. ಆದ್ದರಿಂದ ವಿದ್ಯಾಥಿರ್ಗಳು ಹಾಗೂ ಯುವಜನತೆ ಕೇವಲ ಈ ವಾಕಥಾನ್​ನಲ್ಲಿ ಭಾಗವಹಿಸುವುದಷ್ಟೇ ಅಲ್ಲದೆ, ತಮ್ಮ ಗ್ರಾಮ ಹಾಗೂ ಮನೆಗಳಲ್ಲಿ ಯಾರಾದರೂ ವ್ಯಸನಿಗಳಿದ್ದರೆ ಅವರಿಗೆ ತಿಳಿಹೇಳಿ ಜಾಗೃತಿ ಮೂಡಿಸಬೇಕು. ಮಾದಕ ವ್ಯಸನದಿಂದ ಮುಕ್ತಿ ಹೊಂದಲು ಯೋಗ, ಪ್ರಾಣಾಯಾಮ ಧ್ಯಾನ ಮುಂತಾದ ಉತ್ತಮ ಹವ್ಯಾಸಗಳನ್ನು ತಮ್ಮ ಜೀವನಲ್ಲಿ ರೂಢಿಸಿಕೊಳ್ಳಬೇಕು ಎಂದರು.
ಐಎಂಎ ಅಧ್ಯಕ್ಷ ಡಾ. ಪ್ಯಾರಲಾಲ್​ ಮುಲಾನಿ ಮಾತನಾಡಿ ಮಾದಕ ವ್ಯಸನ ಎಂಬುದು ಯುವಜನತೆಯ ಇಡೀ ಜೀವನ ಹಾಗೂ ವೃತ್ತಿ ಬದುಕನ್ನು ನಾಶಪಡಿಸುತ್ತದೆ. ಇಂತಹ ವ್ಯಸನಗಳಿಂದ ಯುವ ಪೀಳಿಗೆಯನ್ನು ರಕ್ಷಿಸಲು ದೈಹಿಕ ಮತ್ತು ಮಾನಸಿಕ ಚಿಕಿತ್ಸೆಗಳ ಜೊತೆಗೆ ಆಪ್ತ ಸಮಾಲೋಚನೆ ನಡೆಸುವುದು ಅತ್ಯಂತ ಪ್ರಮುಖವಾಗಿದೆ ಎಂದರು.
ನಗರದ ಗಾಂಧಿವೃತ್ತದಿಂದ ಆರಂಭವಾಗಿ ರೋಟರಿ ಸರ್ಕಲ್​, ಬೂಮರೆಡ್ಡಿ ವೃತ್ತ, ಹಳೆಡಿಸಿ ಆಫೀಸ್​, ಬಸವೇಶ್ವರ ಮೂತಿರ್ ಭೀಷ್ಮಕೆರೆ ವರೆಗೆ ಬಂದು ತಲುಪಿತು. ವಾಕಥಾನ್​ನಲ್ಲಿ ಡಿವೈಎಸ್​ಪಿ ಮಹಾಂತೇಶ್​ ಸಜ್ಜನ, ಡಿಎಸ್​ಪಿ ಮುರ್ತುಜಾ ಖಾದ್ರಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net