3 ಕೋಟಿ ವೆಚ್ಚದಲ್ಲಿ ಸೂಡಿ ನಾಗಕುಂಡ ಜೀರ್ಣೋದ್ಧಾರ

Soodi Nagakund
Soodi Nagakund
Published on
ಪ್ರವಾಸೋದ್ಯಮಕ್ಕೆ ಮತ್ತೊಂದು ಗರಿ.
ವಿಜಯವಾಣಿ ಸುದ್ದಿಜಾಲ ಗದಗ
ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ವಲಯಕ್ಕೆ ಮತ್ತೊಂದು ಗತಿ ಸೇರ್ಪಡೆ ಆಗಿದೆ. ಐತಿಹಾಸಿಕ ದೇವಾಲಯಗಳು, ಸ್ಮಾರಕಗಳು ಹಾಗೂ ಪುಷ್ಕರಣಿಗಳಿಗೆ ಆಧುನಿಕ ಸ್ಪರ್ಶ ನೀಡುವುದರ ಜತೆಗೆ ಅದರ ಮಹತ್ವ ಸಾರುತ್ತಿರುವ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಯು ಅಭಿವೃದ್ಧಿ ಪಥದತ್ತ ಮತ್ತೊಂದು ಹೆಜ್ಜೆ ಇಟ್ಟಿದೆ.
ಗಜೇಂದ್ರಗಡ ತಾಲೂಕಿನ ಸೂಡಿ ಗ್ರಾಮದಲ್ಲಿ ಕ್ರಿ.ಶ.1060ರ ಕಲ್ಯಾಣ ಚಾಲುಕ್ಯರ ಅವಧಿಯಲ್ಲಿ ನಿರ್ಮಾಣಗೊಂಡು ಶಿಥಿಲಾವಸ್ಥೆಯಲ್ಲಿದ್ದ ನಾಗಕುಂಡ ಮೆಟ್ಟಿಲು ಬಾವಿಗೆ ಆಧುನಿಕ ಸ್ಪರ್ಶ ನೀಡಲಾಗಿದ್ದು, ಇತಿಹಾಸದ ದಿನಗಳನ್ನು ಪುನಃಸ್ಥಾಪನೆ ಮಾಡಲು ಪ್ರವಾಸೋದ್ಯಮ ಇಲಾಖೆ ಮುಂದಡಿ ಇಟ್ಟಿದೆ.
ಶಿಥಿಲಾವಸ್ಥೆಯಲ್ಲಿದ್ದ ಸೂಡಿಯ ನಾಗಕುಂಡ ಮೆಟ್ಟಿಲು ಬಾವಿ ಅಭಿವೃದ್ಧಿಪಡಿಸಲು ದತ್ತು ಸ್ಮಾರಕ ಯೋಜನೆಯಡಿ ಡೆಕ್ಕನ್ ಹೆರಿಟೇಜ್ ಫೌಂಡೇಶನ್ ಮುಂದೆ ಬಂದಿತ್ತು. ಕಳೆದೊಂದು ವರ್ಷಗಳ ನಿರಂತರ ಪರಿಶ್ರಮದ ಫಲವಾಗಿ 3 ಕೋಟಿ ರೂ. ವೆಚ್ಚದಲ್ಲಿ ನಾಗಕುಂಡ ಮೆಟ್ಟಿಲು ಬಾವಿ ಪುನಃಸ್ಥಾಪನೆ(ಅಭಿವೃದ್ಧಿ) ಮಾಡಲಾಗಿದ್ದು, ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಲಾಗಿದೆ.
ಕಳೆದ ವರ್ಷ ಡೆಕ್ಕನ್ ಹೆರಿಟೇಜ್ ಫೌಂಡೇಶನ್ ದತ್ತು ಸ್ಮಾರಕ ಯೋಜನೆಯಡಿಯಲ್ಲಿ ಕರ್ನಾಟಕ ಸರ್ಕಾರದೊಂದಿಗೆ ಪ್ರವಾಸೋದ್ಯಮ ಸಚಿವ ಎಚ್‌.ಕೆ. ಪಾಟೀಲ ಹಾಗೂ ರೋಣ ಶಾಸಕ ಜಿ.ಎಸ್. ಪಾಟೀಲ ಅವರ ಸಮ್ಮುಖದಲ್ಲಿ ಸೂಡಿಯಲ್ಲಿರುವ ನಾಗಕುಂಡ ಮೆಟ್ಟಿಲು ಬಾವಿ, 10ನೇ ಶತಮಾನದ ಇತರ ಸ್ಮಾರಕಗಳನ್ನು ಪುನಃಸ್ಥಾಪಿಸಲು ಒಪ್ಪಂದಕ್ಕೆ ಸಹಿ ಹಾಕಿತ್ತು. ಹೆರಿಟೇಜ್ ಮ್ಯಾಟರ್ಸ್ ಮತ್ತು ಜಲ ಸಾಕ್ಷರತಾ ಪ್ರತಿಷ್ಠಾನದಿಂದ ಸ್ಮಾರಕವನ್ನು ಅಭಿವೃದ್ಧಿ ಪಡಿಸಲಾಗಿದೆ.
ಇತಿಹಾಸ?
ಕಲ್ಯಾಣ ಚಾಲುಕ್ಯ ಚಕ್ರವರ್ತಿ ಒಂದನೇ ಸೋಮೇಶ್ವರನ ಸೇನಾಧಿಪತಿ ನಾಗದೇವನು ಕ್ರಿ.ಶ. 1060ರಲ್ಲಿ ನಾಗಕುಂಡ ನಿರ್ಮಿಸಿದನು. ನೂರಾರು ವರ್ಷಗಳ ಹಿಂದೆ ನೀರಿನ ಸಂರಕ್ಷಣೆ ಮತ್ತು ಬಳಕೆಗೆ ನೀಡಲಾದ ಪ್ರಾಮುಖ್ಯತೆಗೆ ಈ ಕೆರೆ ಸಾಕ್ಷಿಯಾಗಿದೆ. ಪ್ರಾಚೀನ ಕಾಲದಲ್ಲಿ ಮಳೆಯ ನೀರನ್ನು ವ್ಯರ್ಥ ಮಾಡದೆ ಈ ಕೆರೆಗೆ ತಿರುಗಿಸುತ್ತಿದ್ದ ವ್ಯವಸ್ಥೆ ಆಶ್ಚರ್ಯಕರವಾಗಿದೆ. ಇದು ಧಾರ್ಮಿಕ ಉದ್ದೇಶಗಳಿಗಾಗಿ ಮಾತ್ರವಲ್ಲ ಅಂತರ್ಜಲ ಮಟ್ಟಕಾಪಾಡಿಕೊಳ್ಳಲು ನೀರಿನ ಮರುಪೂರಣ ಘಟಕವಾಗಿಯೂ ಕಾರ್ಯ ನಿರ್ವಹಿಸುತ್ತಿತ್ತು.10ನೇ ಶತಮಾನದಲ್ಲಿ ಬಾವಿಯ ನೀರನ್ನು ಇಲ್ಲಿರುವ ಮಲ್ಲಿಕಾರ್ಜುನ(ನಾಗೇಶ್ವರ) ದೇವಾಲಯದ ಧಾರ್ಮಿಕ ಕಾರ್ಯಗಳಿಗೆ ಬಳಸಲಾಗುತ್ತಿತ್ತು. ಇದಲ್ಲದೆ ಬೇಸಿಗೆಯಲ್ಲೂ ತಂಪಾದ ವಾತಾವರಣ ಕಾಪಾಡಿಕೊಳ್ಳಲು ಇದನ್ನು ನಿರ್ಮಿಸಲಾಗಿದೆ ಎಂದು ಇತಿಹಾಸಕಾರರು ತಿಳಿಸಿದ್ದಾರೆ.
ಕೋಟ್:
ನಾಗಕುಂಡ ಎಂದರೆ ಕಾಳಿಂಗ ಸರ್ಪದ ಕೊಳ ಎಂದರ್ಥ. ಸೂಡಿಯಲ್ಲಿರುವ ಈ ಐತಿಹಾಸಿಕ ಬಾವಿಯನ್ನು ಸುಂದರವಾಗಿ ಕೆತ್ತಲಾಗಿದೆ. ಇದು ಅತ್ಯಂತ ಸುಂದರ ಕೊಳವಾಗಿದೆ. ರಾಜ್ಯ ಸರ್ಕಾರ ಆರಂಭಿಸಿರುವ ಸ್ಮಾರಕಗಳ ದತ್ತು ಯೋಜನೆಯಡಿ ಕಲಾತ್ಮಕ ಕೆತ್ತನೆಯ ಕುಸುರಿಗೆ ಖ್ಯಾತವಾಗಿರುವ ಸೂಡಿಯ ನಾಗಕುಂಡ ಬಾವಿ ದತ್ತು ಪಡೆದು ಅಭಿವೃದ್ಧಿಗೊಳಿಸಿರುವ ಡೆಕ್ಕನ್ ಹೆರಿಟೇಜ್ ಫೌಂಡೇಶನ್ ಕಾರ್ಯ ಶ್ಲಾಘನೀಯ. ಜಿಲ್ಲೆಯಲ್ಲಿರುವ ಅಮೂಲ್ಯವಾದ ಐತಿಹಾಸಿಕ ಸಂಪತ್ತು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ನಿಟ್ಟಿನಲ್ಲಿಇದೊಂದು ಮಹತ್ವವಾದ ಹೆಜ್ಜೆಯಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net