ನಮ್ಮ ಪಕ್ಷದಲ್ಲಿ ಕುಟುಂಬ ರಾಜಕಾರಣ ಪದ್ಧತಿ ಇದೆ: ಎಂ. ಬಿ. ಪಾಟೀಲ

M B Patil
M B Patil
Published on
ಗದಗ: ನಮ್ಮ ಪಕ್ಷದಲ್ಲಿ ಕುಟುಂಬ ರಾಜಕಾರಣ ಪದ್ಧತಿ ಇದೆ, ಆದರೆ ಅದು ಎಲ್ಲಾ ಪಕ್ಷಗಳಲ್ಲಿಯೂ ಇದು ಸಾಮಾನ್ಯ. ಡಾಕ್ಟರ್ ಮಗ ಡಾಕ್ಟರ್, ಇಂಜಿನಿಯರ್ ಮಗ ಇಂಜಿನಿಯರ್ ಆಗುವುದರಲ್ಲಿ ತಪ್ಪೇನಿಲ್ಲ” ಎಂದು ಸಚಿವ ಎಂ. ಬಿ. ಪಾಟೀಲ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಾಗಲಕೋಟೆ ಮತ್ತು ದಾವಣಗೆರೆ ಉಪಚುನಾವಣೆ ಕುರಿತು ಆತ್ಮವಿಶ್ವಾಸ ವ್ಯಕ್ತಪಡಿಸಿದರು. “ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುತ್ತಾರೆ. ಹಿಂದಿನ ಉಪ ಚುನಾವಣೆಗಳಲ್ಲಿಯೂ ಕಾಂಗ್ರೆಸ್ ಗೆದ್ದಿದೆ” ಎಂದರು.
ಬಂಡಾಯ ಅಭ್ಯರ್ಥಿಗಳ ವಿಚಾರಕ್ಕೆ ಸಂಬಂಧಿಸಿದಂತೆ, “ಬಾಗಲಕೋಟೆಯಲ್ಲಿ ಯಾವುದೇ ಅಸಮಾಧಾನ ಇಲ್ಲ. ದಾವಣಗೆರೆಯಲ್ಲಿ ಮುಸ್ಲಿಂ ಸಮುದಾಯದ ಜನಸಂಖ್ಯೆ ಹೆಚ್ಚಿದ್ದು, ಆರಂಭಿಕ ಆಕ್ರೋಶ ಇದ್ದರೂ ಸಾಧಿಕ್ ಫೈಲ್ವಾನ್ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಜಮೀರ್ ಅಹ್ಮದ್ ಪ್ರಚಾರಕ್ಕೆ ಬರುತ್ತಾರೆ” ಎಂದು ಹೇಳಿದರು.
ಉಪಚುನಾವಣೆಯಲ್ಲಿ ಕುಟುಂಬಸ್ಥರಿಗೆ ಟಿಕೆಟ್ ನೀಡುವ ಪದ್ಧತಿ ಬಗ್ಗೆ ಮಾತನಾಡಿದ ಸಚಿವರು, “ನಿಧನ ಹೊಂದಿದ ನಾಯಕರ ಕುಟುಂಬದವರಿಗೆ ಟಿಕೆಟ್ ನೀಡುವುದು ಕಾಂಗ್ರೆಸ್ ಪರಂಪರೆ. ನಾನು ಕೂಡ ನನ್ನ ತಂದೆಯ ನಿಧನದ ನಂತರ ಉಪಚುನಾವಣೆಯಲ್ಲಿ ಟಿಕೆಟ್ ಪಡೆದು ಗೆದ್ದಿದ್ದೇನೆ” ಎಂದು ನೆನಪಿಸಿದರು.
ವಿಜಯೇಂದ್ರ ಅವರ ಸೂಟಿಕೇಸ್ ಆರೋಪಕ್ಕೆ ತಿರುಗೇಟು ನೀಡಿದ ಅವರು, “ಅವರಿಗೆ ಇಂತಹ ಆರೋಪ ಮಾಡುವ ರೂಢಿ ಇದೆ. ಅವರ ತಂದೆಯ ಅವಧಿಯಲ್ಲಿಯೇ ಇಂತಹ ಘಟನೆಗಳು ನಡೆದಿವೆ” ಎಂದು ಟೀಕಿಸಿದರು.
ಟ್ಯಾಕ್ಸ್ ಟೆರೆರಿಸಂ ವಿಚಾರವಾಗಿ, “ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ಗುತ್ತಿಗೆದಾರರಿಗೆ ಸುಮಾರು 1 ಲಕ್ಷ ಕೋಟಿ ರೂ. ಬಾಕಿ ಬಿಲ್ ಉಳಿಸಲಾಗಿದೆ. ಆ ಭಾರವನ್ನು ಈಗಿನ ಸರ್ಕಾರ ಹೊರುತ್ತಿದೆ” ಎಂದು ಆರೋಪಿಸಿದರು.
ಗ್ಯಾಸ್ ಸಿಲಿಂಡರ್ ಅಭಾವದ ಬಗ್ಗೆ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, “ಪ್ರಧಾನಿ ಮೋದಿ ಗಟರ್‌ನಲ್ಲಿ ಗ್ಯಾಸ್ ಕಂಡುಹಿಡಿದಿದ್ದಾರೆಂದು ಹೇಳಿದ್ದರು, ಅವರನ್ನೇ ಕೇಳಿ” ಎಂದು ವ್ಯಂಗ್ಯವಾಡಿದರು.
ವಿದೇಶಾಂಗ ನೀತಿ ಕುರಿತು ಮಾತನಾಡಿದ ಅವರು, “ಇರಾನ್ ನಮ್ಮ ಮಿತ್ರ ರಾಷ್ಟ್ರ. ಭಾರತಕ್ಕೆ ತನ್ನದೇ ಆದ ವಿದೇಶಾಂಗ ನೀತಿ ಇದೆ. ಆದರೆ ಪ್ರಧಾನಿ ಮೋದಿಯವರದು ವಿಭಿನ್ನ ನೀತಿ. ಇಸ್ರೇಲ್ ವಿಚಾರದಲ್ಲಿಯೂ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದರಲ್ಲೂ ಇರಾನ್ ಭಾರತಕ್ಕೆ ವಿರೋಧ ತೋರಿಲ್ಲ. ಹರ್ಮೂಜ್ ಜಲಸಂಧಿಯಿಂದ ನಮ್ಮ ಹಡಗುಗಳು ಸಾಗುತ್ತಿವೆ” ಎಂದು ಹೇಳಿದರು.
ಇದೇ ವೇಳೆ, “ಮೋದಿ ಅಧಿಕಾರಕ್ಕೆ ಬಂದ ಬಳಿಕ ಡಾಲರ್ ಮೌಲ್ಯ 100 ರೂ. ಮಟ್ಟಕ್ಕೆ ಏರಿರುವುದೇ ಸಾಧನೆನಾ?” ಎಂದು ಪ್ರಶ್ನಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net