ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೇವೆಯೇ ನನ್ನ ಗುರಿ : ಕಿರಣ್‌ ಕಮತೆ

Gadag JT Math
Gadag JT Math
Published on
ಗದಗ : ಇವನಾರವನೆಂದೆನಿಸದೇ ಇವನಮ್ಮವ ಎಂದೆನಿಸುವ ಬಸವೇಶ್ವರ ತತ್ವವನ್ನು ಅಳವಡಿಸಿಕೊಂಡು, ನನ್ನ ಅಧಿಕಾರ ವ್ಯಾಪ್ತಿಯಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೇವೆಯನ್ನು ತಲುಪಿಸುವುದೇ ನನ್ನ ಗುರಿ ಎಂದು
ಎಂದು ಯುಪಿಎಸ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಹಾಗೂ ದೇಶಕ್ಕೆ ೫೩ನೇ ಶ್ರೇಣಿ ಗಳಿಸಿದ ಕಿರಣ್‌ ಕಮತೆ ನುಡಿದರು.
ಅವರು ದಿ.೦೨ ರಂದು ಗುರುವಾರ ನಗರದ ತೋಂಟದಾರ್ಯ ಮಠದ ೨೦೨೬ನೇ ಜಾತ್ರಾ ಮಹೋತ್ಸವದ ಮಹಾರಥೋತ್ಸವದ ವೇದಿಕೆ ಕಾರ್ಯಕ್ರಮದಲ್ಲಿ ಸಂಮಾನ ಸ್ವೀಕರಿಸಿ ಮಾತನಾಡಿ,
ಬೆಂಗಳೂರಿನಲ್ಲಿ ಇಂಜೀನಿಯರ್‌ ಆಗಿ ಕೆಲಸ ಮಾಡುತ್ತಲೇ ಯುಪಿಎಸ್‌ಸಿ ಪರೀಕ್ಷೆಯ ಕನಸು ಹೊತ್ತು ಲಾಕ್‌ಡೌನ್‌ ಪೂರ್ವದಲ್ಲೇ ತಯಾರಿ ಆರಂಭಿಸಿದೆ. ಯುಪಿಎಸ್‌ಸಿಯ ಯಾವುದೇ ಹಂತದಲ್ಲಿ ಫೇಲಾದರೂ ಮತ್ತೇ ಮೊದಲಿನಿಂದ ಶುರು ಮಾಡಬೇಕು, ಹಾಗಾಗಿ ಇದು ಕ್ಲಿಷ್ಟಕರ ಪರೀಕ್ಷೆಯಾಗಿದ್ದು ನಾನು ಐದು ಬಾರಿ ಪ್ರಯತ್ನಿಸಿ ತೇರ್ಗಡೆ ಹೊಂದದೇ ಇದ್ದರೂ ಆರನೇ ಹಾಗೂ ಕೊನೆಯ ಬಾರಿ ಸತತ ಪರಿಶ್ರಮದಿಂದ ಪ್ರಾಥಮಿಕ, ಮುಖ್ಯ ಪರೀಕ್ಷೆ ಹಾಗೂ ಸಂದರ್ಶನ ಪಾಸಾಗಿ ಕರ್ನಾಟಕಕ್ಕೆ ನಂ.೧ ಹಾಗೂ ದೇಶಕ್ಕೆ ೫೩ನೇ ಶ್ರೇಣಿ ಪಡೆದೆ. ನನ್ನ ಕನಸಿಗೆ ಮಾರ್ಗದರ್ಶನ ನೀಡಿದ ತಂದೆ-ತಾಯಿಗಳು ಹಾಗೂ ಮಿತ್ರರಿಗೆ ನಾನು ಋಣಿಯಾಗಿದ್ದು, ತೋಂಟದಾರ್ಯ ಮಠದ ಆಶೀರ್ವಾದವೂ ನನ್ನ ಬೆನ್ನಿಗಿದೆ. ನಾನು ೯ ಹಾಗೂ ಹತ್ತನೇ ತರಗತಿಯನ್ನು ಗದುಗಿನಲ್ಲೇ ವ್ಯಾಸಂಗ ಮಾಡಿರುವ ಕಾರಣ, ಈ ಜಿಲ್ಲೆಗೂ ನನಗೂ ವಿಶೇಷವಾದ ನಂಟಿದೆ. ಮುಂದೊಂದು ದಿನ ಕರ್ನಾಟಕ ಕೇಡರ್‌ ದೊರೆತು ಗದಗ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ನೇಮಕಗೊಳ್ಳುವ ಕನಸಿದೆ, ಸಾರ್ವಜನಿಕ ಆಡಳಿತದಲ್ಲಿ ಯಾವುದೇ ಹುದ್ದೆ ಸಿಕ್ಕರೂ ಅದನ್ನು ಜನರ ಒಳಿತಿಗಾಗಿ ವಿನಿಯೋಗಿಸಬೇಕೆಂಬುದು ನನ್ನ ಧ್ಯೇಯ ಎಂದರು.
ನ್ಯೂಯಾರ್ಕಿನ ವಿಶ್ವಸಂಸ್ಥೆಯ ವಿಶ್ವರಾಷ್ಟ್ರಗಳ ಅಭಿವೃದ್ಧಿ ಕಾರ್ಯಕ್ರಮ ಸಮಿತಿಯಿಂದ ೨೦೨೫ನೇ ಸಾಲಿನ ಇಕ್ವೇಟರ್ಪ್ರಶಸ್ತಿ ಪುರಸ್ಕೃತರಾದ ಬೀಬಿ ಫಾತಿಮಾ ಸಂಘದ ಅಧ್ಯಕ್ಷೆ ಬೀಬಿಜಾನ್‌ ಹಳೇಮನಿ ಹಾಗೂ ಕೆ.ಎಲ್.ಇ ಸಂಸ್ಥೆಗೆ ನೂತನ ಸದಸ್ಯರಾಗಿ ಆಯ್ಕೆಯಾದ ಮಂಜುನಾಥ ಮುನವಳ್ಳಿ ಇವರನ್ನು ಸನ್ಮಾನಿಸಲಾಯಿತು. ಅದೇ ರೀತಿ ಬೀದರನ ಭಾತಂಬ್ರಾ ವಿರಕ್ತಮಠದ ಡಾ.ಗುರುಬಸವ ಸ್ವಾಮಿಗಳಿಗೆ ʻಸಮಾಜಸೇವಾರತ್ನʼ ಹಾಗೂ ಸಂಖ ವಿರಕ್ತಮಠದ ಶಿವಲಿಂಗೇಶ್ವರ ಸ್ವಾಮಿಗಳವರಿಗೆ ʻಬಸವಚೇತನʼ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು. ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು, ಕಲಬುರ್ಗಿ ರೋಜಾ ಹಿರೇಮಠದ ಕೆಂಚಬಸವ ಶಿವಾಚಾರ್ಯ ಸ್ವಾಮಿಗಳು, ರಟಕಲ್ಲ ಹಿರೇಮಠದ ರೇವಣಸಿದ್ಧ ಶಿವಾಚಾರ್ಯ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ವೇದಿಕೆ ಮೇಲೆ ಮಾಜಿ ಸಚಿವರಾದ ಎಸ್.ಎಸ್‌ ಪಾಟೀಲ, ಸಂಸದರಾದ ಐ.ಜಿ ಸನದಿ, ತೋಂಟದಾರ್ಯ ಮಠದ ಆಡಳಿತಾಧಿಕಾರಿಗಳಾದ ಪ್ರೊ.ಎಸ್.ಎಸ್‌ ಪಟ್ಟಣಶೆಟ್ಟರ, ದೆಹೆಲಿ ಜಾಟವಾ ಸಮಾಜದ ಪ್ರಮುಖರು ಉಪಸ್ಥಿತರಿದ್ದರು. ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷರಾದ ವಿನಾಯಕ ಮಾನ್ವಿ ಸ್ವಾಗತಿಸಿದರು.
ಜಿಲ್ಲ ಕದಳಿ ಮಹಿಳಾ ವೇದಿಕೆ, ನಿಮಿಷಾಂಬಾ ನೃತ್ಯ ವೇದಿಕೆ ಹಾಗೂ ಬಸವೇಶ್ವರ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ವತಿಯಿಂದ ವಚನ ನೃತ್ಯ ಜರುಗಿತು. ಶ್ರೀಮಠದ ಸದ್ಭಕ್ತರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net