ಸಚಿವ ಎಚ್​ ಕೆ ಪಾಟೀಲ್​ ಅವರಿಗೆ ಫೇಸ್​ಬುಕ್​ನಲ್ಲಿ ಜೀವ ಬೆದರಿಕೆ! ಆರೋಪಿ ಅಂದರ್​

ಗದಗ
ಗದಗ
Published on
ವಿಜಯವಾಣಿ ಸುದ್ದಿಜಾಲ ಗದಗ
ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್​.ಕೆ. ಪಾಟೀಲ ಅವರಿಗೆ ಫೇಸ್​ಬುಕ್​ ಮೂಲಕ ಜೀವ ಬೆದರಿಕೆ ಹಾಕಿದ ಆರೋಪಿಯನ್ನು ಗದಗ ಪೊಲೀಸರು ಬಂಧಿಸಿದ್ದಾರೆ.
ರೋಣ ತಾಲೂಕಿನ ಸೂಡಿ ಗ್ರಾಮದ ವೀರಣ್ಣ ಬೀಳಗಿ ಎಂಬುವನು ಸಚಿವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್​ ಹಾಕಿದ್ದನು. ಸಚಿವರನ್ನು ಅವಹೇಳನಕಾರಿ ಪದಗಳಿಂದ ಕರೆಯುವ ಜೊತೆಗೆ ಸಚಿವರನ್ನು ನಿಲ್ಲಿಸಿ ಎಕೆ-47 ನಿಂದ ಗುಂಡಿನ ಮಳೆಗರೆಯಬೇಕು ಎಂದು ಪೋಸ್ಟ್​ ಹಾಕಿದ್ದನು.
ಈ ಕುರಿತು ಗದಗ ಶಹರ ಕಾಂಗ್ರೆಸ್​ ಸಮಿತಿ ಅಧ್ಯಕ್ಷ ಹಾಗೂ ಕಾಂಗ್ರೆಸ್​ ಮುಖಂಡ ಬಿ.ಬಿ. ಅಸೂಟಿ ಅವರು ನಗರದ ಬೆಟಗೇರಿ ಬಡಾವಣೆ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಪೊಲೀಸರು ತ್ವರಿತವಾಗಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಪೋಸ್ಟ್​ಗಳಿಗೆ ಕಾನೂನು ಕ್ರಮ ಅನಿವಾರ್ಯ ಎಂದು ಪೋಲೀಸರು ಎಚ್ಚರಿಕೆ ನೀಡಿದ್ದಾರೆ. ಇತ್ತೀಚಿಗೆ ಗದಗ ಜಿಲ್ಲಾಡಳಿತ ಭವನಕ್ಕೂ ಬಾಂಬ್​ ಬೆದರಿಕೆಯ ಕರೆಗಳು, ಇ-ಮೇಲ್​ ಹೆಚ್ಚುತ್ತಿರುವ ಸಂದರ್ಭದಲ್ಲಿಯೇ ಕಾನೂನು ಸಚಿವ ಸಚಿವ ಎಚ್​.ಕೆ. ಪಾಟೀಲ ಅವರಿಗೆ ಫೇಸ್​ಬುಕ್​ನಲ್ಲಿ ಜೀವ ಬೆದರಿಕೆ ಹಾಕಿದ್ದು ಅನುಮಾನಕ್ಕೆ ಕಾರಣವಾಗಿದೆ.
ಧ್ವೇಷ ಭಾಷಣ ಮಾಡುವ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಕುರಿತು ಬೆಳಗಾವಿ ಅಧಿವೇಶನದಲ್ಲಿ ಮಸೂದೆ ಮಂಡನೆ ಆಗಿತ್ತು. ಅದಕ್ಕೆ ಪುಷ್ಟಿ ನೀಡುವಂತೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳಕಾರಿ ಪೋಸ್ಟ್​ ಹಾಕಿದ್ದವನನ್ನು ಬಂಧಿಸಿ ಕ್ರಮ ಕೈಗೊಳ್ಳಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net