ವಿಬಿಜಿ ರಾಮ್ ಜಿ ಯೋಜನೆ ವಿಕೆಂದ್ರೀಕರಣ ತತ್ವಕ್ಕೆ ಅಪಾಯ: ಸಚಿವ ಎಚ್. ಕೆ. ಪಾಟೀಲ
ಗದಗ ಕಾಟನ್ ಸೇಲ್ ಸೊಸೈಟಿಯಲ್ಲಿ ಎಚ್.ಕೆ. ಪಾಟೀಲ ಸುದ್ದಿಗೋಷ್ಟಿ ನಡೆಸಿದರು. ಡಿ.ಆರ್. ಪಾಟೀಲ, ಜಿ.ಎಸ್. ಪಾಟೀಲ, ಬಿ. ಆರ್. ಯಾವಗಲ್ಲ, ರಾಮಕೃಷ್ಣ ದೊಡ್ಡಮನಿ, ರಾಮಣ್ಣ ಲಮಾಣಿ ಇತರರು ಇದ್ದರು.
ಸಂವಿಧಾನದ 73, 74ನೇ ತಿದ್ದುಪಡಿ ಉದ್ದೇಶವೇ ವಿಕೇಂದ್ರೀಕರಣ ಮೂಲಕ ಆಡಳಿತ ವ್ಯವಸ್ಥೆ ರೂಪಿಸುವುದಾಗಿದೆ. ಆದರೇ ಕೇಂದ್ರ ಸರ್ಕಾರ ವ್ಯವಸ್ಥೆಯನ್ನು ಕೇಂದ್ರೀಕೃತಗೊಳಿಸುವ ಹುನ್ನಾರ ನಡೆಸಿದೆ. ಗ್ರಾಮಸ್ವರಾಜ್ಯ ಮತ್ತು ವಿಕೇಂದ್ರೀಕರಣ ಆಡಳಿತ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಹತ್ಯೆಮಾಡಿದೆ. ಮನರೇಗಾ ಯೋಜನೆಯನ್ನು ಮರುಸ್ಥಾಪಿಸಲು ಕಾನೂನು ಮೊರೆ ಹೋಗಲಾಗುವುದು ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ನಗರದ ಕಾಟನ್ ಸೇಲ್ ಸೊಸೈಟಿಯಲ್ಲಿ ಗುರುವಾರ ಏರ್ಪಡಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕೇಂದ್ರ ಸರ್ಕಾರ ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಕಾನೂನು ರದ್ದುಗೊಳಿಸಿದ್ದಾರೆ. ಇದು ಕೇವಲ ಹೆಸರಿನ ಬದಲಾವಣೆ ಅಲ್ಲ. ಕಾನೂನು ರದ್ದುಪಡಿಸಿ ವಿಬಿಜಿ ರಾಮ್ ಜಿ ಎಂದು ಹೊಸ ಯೋಜನೆ ಜಾರಿಗೊಳಿಸಿದ್ದಾರೆ. ಇದರಿಂದ ಕೃಷಿ ಕಾಮಿರ್ಕರಿಗೆ, ಸಣ್ಣ ಅತೀ ಸಣ್ಣ ರೈತರಿಗೆ ಕೆಲಸ ನೀಡುವ ನರೇಗಾ ಯೋಜನೆಯ ಹಕ್ಕನ್ನು ಕೇಂದ್ರ ಸರ್ಕಾರ ಕಿತ್ತುಕೊಂಡಿದೆ. ಮನರೇಗಾ ಯೋಜನೆಯಲ್ಲಿ ಗ್ರಾಮಸಭೆಗೆ ಅಧಿಕಾರ ನೀಡಲಾಗಿತ್ತು. ಗ್ರಾಮಸಭೆ ನಿರ್ಣಯಿಸಿದ ಕಾಮಗಾರಿಗಳನ್ನು ಗ್ರಾಪಂ ಮೂಲಕ ಕೈಗೊಳ್ಳುತ್ತಿದ್ದರು. ಮನರೇಗಾ ಯೋಜನೆಯಲ್ಲಿ ಹೊಲ ಬದು, ಶೌಚಾಲಯ ನಿರ್ಮಾಣ, ಕೆರೆ ಹೂಳು ತೆಗೆಯುವುದು, ಕೆರೆ ನಿರ್ಮಾಣ, ರಸ್ತೆ, ಚರಂಡಿ ನಿರ್ಮಾಣ ಸೇರಿದಂತೆ 21 ಅಂಶಗಳನ್ನು ಒಳಪಡಿಸಲಾಗಿತ್ತು. ಆದರೆ ಈ ಗ್ರಾಮಸಭೆಯ ಅಧಿಕಾರವನ್ನು ಕೇಂದ್ರ ಸರ್ಕಾರ ಕಿತ್ತುಕೊಂಡಿದೆ. ಜನತ ಉದ್ಯೋಗದ ಹಕ್ಕನ್ನು ಕೇಂದ್ರ ಸರ್ಕಾರ ಕಸಿದುಕೊಂಡಿದೆ ಎಂದರು.
ಪಂಚಾಯತಿಗಳನ್ನು ಬಲವರ್ಧನೆ ಮಾಡುವ ಪ್ರಯತ್ನಕ್ಕೆ ಹೊಸ ವಿಬಿಜಿ ರಾಮ್ ಜಿ ಯೋಜನೆ ಅಪವಾದ ಆಗಿದೆ. ಆಡಳಿತ ವಿಕೇಂದ್ರೀಕರಣದ ವಿರುದ್ಧ ಈ ಹೊಸ ಯೋಜನೆ ಜಾರಿ ತರಲಾಗಿದೆ. ಹೊಸ ಯೋಜನೆಯಲ್ಲಿ ಗ್ರಾಮಸಭೆ ಅಧಿಕಾರ ಕಿತ್ತುಕೊಂಡು ದೆಹಲಿಯಲ್ಲಿ ಅಧಿಕಾರ ಇಟ್ಟುಕೊಂಡಿದ್ದಾರೆ. ಕೇಂದ್ರದ ಸಮಿತಿಯು ಗ್ರಾಮಗಳ ಕಾಮಗಾರಿಗಳನ್ನು ನಿರ್ಣಯಿಸುವ ವಿಚಾರಗಳು ಹೊಸ ಯೋಜನೆಯಲ್ಲಿ ಒಳಪಡಿಸಲಾಗಿದೆ. ವಿಬಿಜಿ ರಾಮ್ ಜಿ ಯೋಜನೆಯಿಂದ ಭವಿಷ್ಯದಲ್ಲಿ ಗ್ರಾಪಂ ಯೋಜನೆಗಳನ್ನು ನಿರ್ಣಯಿಸುವಂತಿಲ್ಲ. ಹೊಸ ಯೋಜನೆಯಡಿ ಗುತ್ತಿಗೆದಾರ ಅಡಿಯಲ್ಲಿ ರೈತ ಕಾಮಿರ್ಕರು ಕೆಲಸ ಮಾಡುವಂತೆ ಕಾನೂನು ರೂಪಿಸಲಾಗಿದೆ ಎಂದು ಎಚ್.ಕೆ. ಪಾಟೀಲ ಆರೋಪಿಸಿದರು.
ಮನಮೋಹನ್ ಸಿಂಗ್ ಅಧಿಕಾರದ ಅವಧಿಯಲ್ಲಿ ಮನರೇಗಾ ಯೋಜನೆ ಜಾರಿ ತರಲಾಗಿತ್ತು. ಮನರೇಗಾ ಯೋಜನೆಯಿಂದ ಗುಳೆ ಹೋಗುವುದನ್ನು ಕಾಂಗ್ರೆಸ್ ಸರ್ಕಾರ ತಪ್ಪಿಸಿತ್ತು. ಆದರೆ ಹೊಸ ಯೋಜನೆಯಿಂದ ಗುಳೆ ಹೆಚ್ಚಾಗುತ್ತದೆ. ಮನರೇಗಾ ಯೋಜನೆಯಲ್ಲಿ ಉದ್ಯೋಗ, ನಿರುದ್ಯೋಗಿಗಳಿಗೆ ಭತ್ತೆ, ಗ್ರಾಮೀಣ ಅಭಿವೃದ್ಧಿ, ಕೃಷಿ ಅಭಿವೃದ್ಧಿ, ಕೆಲಸ ನೀಡುವ ಸೇರಿದಂತೆ ಹಲವು ವಿಷಯಗಳು ಇದ್ದವು. ಹೊಸ ವಿಬಿಜಿ ರಾಮ್ ಜೀ ಯೋಜನೆಗಳಲ್ಲಿ ಇಂತಹ ಪ್ರಾದೇಶಿಕ ವಿಷಯಗಳನ್ನು ಕೈಬಿಡಲಾಗಿದೆ. ಮುಂಬರುವ ಅಧಿವೇಶನದಲ್ಲಿ ಈ ಬಗ್ಗೆ ಚಚಿರ್ಸಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು. ಮನರೇಗಾ ಯೋಜನೆ ಮರುಸ್ಥಾಪಿಸಲು ಆಗ್ರಹಿಸಲಾಗುವುದು ಎಂದು ಎಚ್.ಕೆ. ಪಾಟೀಲ ಹೇಳಿದರು.
ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಮನರೇಗಾ ಯೋಜನೆ ಹೆಸರು ಬದಲಾಯಿಸುವ ಮೂಲಕ ಕೇಂದ್ರ ಸರ್ಕಾರ ದುಷ್ಠ ಕೆಲಸ ಮಾಡಿದೆ. ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರದ ಸಂದರ್ಭದಲ್ಲಿ ಮಹಾತ್ಮಾ ಗಾಂಧಿ ಹೆಸರಲ್ಲಿ ಈ ಯೋಜನೆ ಆರಂಭಿಸಲಾಗಿತ್ತು. ಕೇಂದ್ರ ಸರ್ಕಾರ ಯೋಜನೆ ಹೆಸರು ತಿದ್ದುಪಡಿ ಮಾಡಿ ಮಹಾತ್ಮಾ ಗಾಂಧಿ ಹೆಸರನ್ನು ತೆಗೆಯಲಾಗಿದೆ. ಈ ತಿದ್ದುಪಡಿ ಯೋಜನೆಯಲ್ಲಿ ಬಡಜನರಿಗೆ ಅನ್ಯಾಯ ಆಗುವ ಅಂಶಗಳನ್ನು ಸೇರಿಸಲಾಗಿದೆ. ಈ ಹಿನ್ನೆಲೆ ಮನರೇಗಾ ಯೋಜನೆ ಬಚಾಮೋ ಆಂದೋಲನವನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದೆ. ಬಡ ಜನರ ಉದ್ಯೋಗ ಕಸಿದುಕೊಳ್ಳುವ ಮನರೇಗಾ ತಿದ್ದುಪಡಿ ಯೋಜನೆಗೆ ಕಾಂಗ್ರೆಸ್ ವಿರೋಧವಿದೆ. ದೇಶದಲ್ಲಿ ಪಂಚಾಯತ್ ರಾಜ ಮತ್ತು ಗಾಂಧಿ ಸ್ವರಾಜ್ ಯೋಜನೆಗಳನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ ಎಂದು ಜಿ. ಎಸ್. ಪಾಟೀಲ ಹೇಳಿದರು.
ಡಿ.ಆರ್. ಪಾಟೀಲ, ಬಿ. ಆರ್. ಯಾವಗಲ್ಲ, ರಾಮಕೃಷ್ಣ ದೊಡ್ಡಮನಿ, ರಾಮಣ್ಣ ಲಮಾಣಿ, ಸುಜಾತಾ ದೊಡ್ಡಮನಿ, ಹುಮಾಯನ್ ಮಾಗಡಿ, ದಶರತ ಗಾಣಿಗೇರ, ಅಶೋಕ ಮಂದಾಲಿ, ಸೋಮನಕಟ್ಟಿಮಠ, ವಿದ್ಯಾದರ ದೊಡ್ಡಮನಿ, ವಿವೇಕ ಯಾವಗಲ್ಲ ಇತರರು ಇದ್ದರು.
ಕೋಟ್:
ಇದು ವಿಬಿಜಿ ರಾಮ್ ಜಿ ಯೋಜನೆಯಲ್ಲ. ಬದಲಾಗಿ ಗೋಡ್ಸೆ ರಾಮ್ ಜಿ ಯೋಜನೆ ಇದಾಗಿದೆ. ಮಹಾತ್ಮಾ ಗಾಂಧಿ ನಮ್ಮ ರಾಷ್ಟ್ರಪಿತ. ಅವರ ಹೆಸರನ್ನು ಅಳಿಸು ಹಾಕಲು ಕಾಂಗ್ರೆಸ್ ಎಂದಿಗೂ ಬಿಡುವುದಿಲ್ಲ.