ಗದಗ: ಬಸವಾದಿ ಶಿವಶರಣ ಬೃಹತ್ ಹಿಂದೂ ಸಮಾವೇಶ

Gadag Hindu samavesh
Gadag Hindu samavesh
Published on
ವಿಜಯವಾಣಿ ಸುದ್ದಿಜಾಲ ಗದಗ
ಬಸವಾದಿ ಶಿವಶರಣರು ಯಾವುದೇ ಒಂದು ಚೌಕಟ್ಟು ಅಥವಾ ಜಾತಿಗೆ ಸೀಮಿತವಾದವರಲ್ಲ. ಅವರು ಇಡೀ ಹಿಂದೂ ಧರ್ಮವನ್ನು ಶುದ್ಧೀಕರಣಗೊಳಿಸಿದ ಮಹಾಪುರುಷರು ಎಂದು ಕೊಲ್ಹಾಪುರದ ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
ಭಾನುವಾರ ನಗರದ ವಿದ್ಯಾದಾನ ಸಮಿತಿ ಮೈದಾನದಲ್ಲಿ ಹಿಂದೂ ಸರ್ವ ಸಮಾಜಗಳ ಒಕ್ಕೂಟದ ಆಶ್ರಯದಲ್ಲಿ ನಡೆದ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶದ ಸಾನ್ನಿಧ್ಯ ವಹಿಸಿ ಮಾತನಾಡಿದರು.
10 ಕೋಟಿ ಜನರ ಮಾರಣಹೋಮಕ್ಕೆ ಕಾರಣವಾದ ಕಾರ್ಲ್ ಮಾರ್ಕ್ಸ್ ಸಿದ್ಧಾಂತದ ಅನುಯಾಯಿಗಳು ಇಂದು ಬಸವಣ್ಣನವರ ಧ್ವಜದ ಕೆಳಗೆ ಬಂದು ಇತಿಹಾಸವನ್ನು ತಿರುಚುತ್ತಿದ್ದಾರೆ. ಒಂದೇ ಸುಳ್ಳನ್ನು ನೂರು ಬಾರಿ ಹೇಳಿ ನಿಜ ಮಾಡಲು ಹೊರಟಿರುವ ಇಂತಹ ಕಮ್ಯುನಿಸ್ಟ್ ಸಿದ್ಧಾಂತದ ವಿರುದ್ಧ ಹಿಂದೂ ಸಮಾಜ ಜಾಗೃತವಾಗಬೇಕಿದೆ ಎಂದು ಕರೆ ನೀಡಿದರು.
ಬಸವಣ್ಣನವರು ವೇದ, ಆಗಮ, ಪುರಾಣಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದರು ಎಂದು ಕೆಲವರು ತಪ್ಪು ಪ್ರಚಾರ ಮಾಡುತ್ತಿದ್ದಾರೆ. ಆದರೆ, ಶರಣರ ವಚನಗಳಲ್ಲೇ ಭಗವಂತನೇ ವೇದ-ಆಗಮಗಳನ್ನು ರಚಿಸಿದನೆಂಬ ಉಲ್ಲೇಖವಿದೆ. ಬಸವಣ್ಣನವರ ವಚನಗಳಲ್ಲಿ ಪುರಾಣದ 52 ಘಟನೆಗಳ ಪ್ರಸ್ತಾಪವಿದ್ದು, ಶರಣರು ಅದರಲ್ಲಿನ ವಿಜ್ಞಾನವನ್ನು ಗುರುತಿಸಿದ್ದರು. ದೇವನೊಬ್ಬ ನಾಮ ಹಲವು ಎಂದ ಬಸವಣ್ಣನವರು ಪುರಾಣ ವಿರೋಧಿಯಾಗಲು ಹೇಗೆ ಸಾಧ್ಯ ಪ್ರಶ್ನಿಸಿದ ಶ್ರೀಗಳು, ಧರ್ಮ ಒಡೆಯುವವರ ಮುಖವಾಡ ಕಳಚುವುದೇ ಈ ಸಮಾವೇಶದ ಉದ್ದೇಶ ಎಂದರು.
800 ವರ್ಷಗಳ ಹಿಂದೆ ಬಸವಣ್ಣನವರು ಲಿಂಗಾಯತರಾದರು. ಸಮಗಾರ ಹರಳಯ್ಯ, ಹಡಪದ ಅಪ್ಪಣ್ಣ ಅವರ ಸಮಾಜದವರು ಇನ್ನೂ ಅದೇ ಸಾಮಾಜಿಕ ಸ್ಥಿತಿಯಲ್ಲೇ ಉಳಿದಿದ್ದಾರೆ. ಕಳೆದ 800 ವರ್ಷಗಳಲ್ಲಿ ನಾವು ಅವರನ್ನು ಪೂರ್ಣ ಪ್ರಮಾಣದಲ್ಲಿ ಒಪ್ಪಿಕೊಂಡು ಮುನ್ನೆಲೆಗೆ ತಂದಿದ್ದರೆ, ಇಂದು ಇಂತಹ ಸಮಾವೇಶಗಳನ್ನು ಮಾಡುವ ಅಗತ್ಯವೇ ಬರುತ್ತಿರಲಿಲ್ಲ. ಬಸವ ತತ್ವಗಳನ್ನು ಕೇವಲ ಭಾಷಣಕ್ಕೆ ಸೀಮಿತಗೊಳಿಸದೆ ಆಚರಣೆಗೆ ತರಬೇಕಿದೆ ಎಂದರು.
ಇವತ್ತು ಒಂದೇ ಮನೆಯವರು ಒಟ್ಟಿಗೆ ಇರುವುದು ಕಷ್ಟವಾಗಿರುವ ಕಾಲದಲ್ಲಿ, ಗದಗದ 64 ಸಮಾಜಗಳು ಒಂದಾಗಿ ಈ ಸಮಾವೇಶ ನಡೆಸಿರುವುದು ಇಡೀ ದೇಶಕ್ಕೇ ಮಾದರಿಯಾಗಿದೆ. ಬಸವಣ್ಣನವರು, ಎಲ್ಲರೂ ನಮ್ಮವರು ಎಂದು ಸಾರಿದರು. ಆದರೆ, ಇಂದು ಅವರದೇ ಹೆಸರಿನಲ್ಲಿ ಕೆಲವರು ಅತೃಪ್ತ ಆತ್ಮಗಳಂತೆ ದೇಶ ಒಡೆಯುವ ಮತ್ತು ಧರ್ಮವನ್ನು ಛಿದ್ರಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಬಸವ ತತ್ವದ ಹೆಸರಿನಲ್ಲಿ ಕಮ್ಯುನಿಸ್ಟ್ ಧ್ವಜ ಹಿಡಿದು ಹೋರಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ರೈತರ ಸ್ಥಿತಿಗತಿಗಳ ಕುರಿತು ಮಾತನಾಡಿದ ಶ್ರೀಗಳು, ದೇಶದಲ್ಲಿ ಕೋವಿಡ್ ಮಹಾಮಾರಿ ಇರಲಿ ಅಥವಾ ಗಡಿಭಾಗದಲ್ಲಿ ಗುಂಡಿನ ದಾಳಿ ನಡೆಯುತ್ತಿರಲಿ, ನಮ್ಮ ರೈತ ಮಾತ್ರ ಹೊಲದಲ್ಲಿ ದುಡಿಯುತ್ತಿದ್ದ. ಆ ಕಾರಣಕ್ಕಾಗಿಯೇ ದೇಶಕ್ಕೆ ಆಹಾರದ ಕೊರತೆಯಾಗಲಿಲ್ಲ. ಆದರೆ, ಇಂದು ರೈತನ ಬದುಕು ದುಸ್ತರವಾಗಿದೆ. ಪೆಟ್ರೋಲ್ ಬೆಲೆ ಏರಿಕೆಯಾದಾಗ ಸುಮ್ಮನಿರುವ ಸಮಾಜ, ತರಕಾರಿ ಅಥವಾ ಈರುಳ್ಳಿ ಬೆಲೆ ಸ್ವಲ್ಪ ಹೆಚ್ಚಾದರೂ ಕಣ್ಣೀರು ಹಾಕುತ್ತದೆ. ರೈತರು ಇನ್ನು ಮುಂದಾದರೂ ಬುದ್ಧಿವಂತರಾಗಿ ತಮ್ಮ ಹಕ್ಕುಗಳನ್ನು ಕಂಡುಕೊಳ್ಳಬೇಕು ಎಂದು ಕಾಡಸಿದ್ದೇಶ್ವರ ಶ್ರೀಗಳು ಪ್ರತಿಪಾದಿಸಿದರು.
ದೇಶದಲ್ಲಿ ವರ್ಷಕ್ಕೆ ಸುಮಾರು 9 ಲಕ್ಷ ಹಿಂದೂ ಹುಡುಗಿಯರು ಮತಾಂತರವಾಗುತ್ತಿದ್ದಾರೆ. ಗದಗ ಜಿಲ್ಲೆಯಲ್ಲೂ ಮತಾಂತರ ಪ್ರಕರಣಗಳು ವ್ಯವಸ್ಥಿತವಾಗಿ ನಡೆಯುತ್ತಿವೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ, 2050ರ ವೇಳೆಗೆ ಭಾರತದ ಸಂವಿಧಾನವನ್ನು ತೆಗೆದುಹಾಕಿ ಅದರ ಜಾಗದಲ್ಲಿ 'ಷರಿಯತ್ ಕಾನೂನು' ಜಾರಿಗೆ ತರುವ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ ಎಂದರು.
ಲವ್ ಜಿಹಾದ್ ಹೊಸ ರೂಪವಾಗಿ ಟ್ರಾವೆಲ್ ಜಿಹಾದ್ ಶುರುವಾಗಿದೆ. ಇಸ್ಲಾಂನಲ್ಲಿ ಎರಡು ಮುಖಗಳಿವೆ, ಒಂದು ಅಲ್ಲಾನ ಇಸ್ಲಾಂ, ಮತ್ತೊಂದು ಮುಲ್ಲಾಗಳ ಇಸ್ಲಾಂ. ಈ ಮುಲ್ಲಾಗಳ ಇಸ್ಲಾಂ ಸಿದ್ಧಾಂತದವರೇ ಇಡೀ ಜಗತ್ತನ್ನು ತಮ್ಮ ಆಡಳಿತಕ್ಕೆ ತೆಗೆದುಕೊಳ್ಳಬೇಕೆಂದು ಹವಣಿಸುತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಅಲ್ಲಿನ ಮೂಲ ನಿವಾಸಿಗಳು ಗುಳೆ ಹೋಗುತ್ತಿದ್ದು, ಅಂತಹವರು ಈಗ ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ಬಂದು ಆಶ್ರಯ ಪಡೆಯುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಮುಂಡರಗಿಯ ಅನ್ನದಾನೀಶ್ವರ ಸ್ವಾಮೀಜಿ, ಭಾರತ ಎಂದರೆ ಅಧ್ಯಾತ್ಮಿಕ ಜ್ಞಾನದಲ್ಲಿ ಮಿಂದೆದ್ದವರು. ಹಿಂದೂ ಎಂದರೆ ಸಂಸ್ಕೃತಿ ಸಂಸ್ಕಾರವನ್ನು ಅರಿತುಕೊಂಡವರು ಎಂದರ್ಥ. ಸಂಸ್ಕೃತಿ ಸಂಸ್ಕಾರದಿಂದ ಬರುತ್ತದೆ. ಹೀಗಾಗಿ ಇಂಥ ಹಿಂದೂ ಸಂಸ್ಕೃತಿಯ ಬಗ್ಗೆ ಅಪಾರ ಪಾಂಡಿತ್ಯ ಹೊಂದಿರುವ ಕನೇರಿ ಮಠದ ಶ್ರೀಗಳು, ರಾಜ್ಯಾದ್ಯಂತ ಹಿಂದೂ ಸಮಾಜದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ ಎಂದರು.
ಸಮಾವೇಶದಲ್ಲಿ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ, ಹರಿದ್ವಾರದಿಂದ ಆಗಮಿಸಿದ್ದ ಅಮೃತಾನಂದಜೀ ಮಹಾರಾಜ್ ಸಹಿತ 100ಕ್ಕೂ ಮಠಾಧೀಶರು ವೇದಿಕೆ ಮೇಲಿದ್ದರು. ನರಗುಂದ ಶಾಸಕ ಸಿ.ಸಿ. ಪಾಟೀಲ, ವಿಪ ಸದಸ್ಯ ಎಸ್.ವಿ. ಸಂಕನೂರ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ, ಎಚ್.ಎಸ್. ಶಿವನಗೌಡ್ರ, ರವಿ ದಂಡಿನ, ಕಿರಣ ಬೂಮಾ, ವೆಂಕಟೇಶ ಕುಲಕರ್ಣಿ ಇತರರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಇದೇ ಸಂದರ್ಭದಲ್ಲಿ ಡಾ. ಡಿ.ಎ. ಉಪಾಧ್ಯಾಯ ಅವರು ಬರೆದ ಬಸವ ಶೈವದಲ್ಲಿ ಹಿಂದುತ್ವ ಸಂಪುಟ ೨ರ ಗ್ರಂಥ ಹಾಗೂ ಡಾ. ಸಿ. ಶಿವಕುಮಾರ ಸ್ವಾಮೀಜಿ ಅವರು ಬರೆದ ವಚನಾನುಸಂಧಾನ ಗ್ರಂಥಗಳನ್ನು ಶ್ರೀಗಳು ಬಿಡುಗಡೆಗೊಳಿಸಿದರು. ಒಕ್ಕೂಟದ ಅಧ್ಯಕ್ಷ ವಸಂತಗೌಡ ಪೊಲೀಸಪಾಟೀಲ ಸ್ವಾಗತಿಸಿದರು. ಚಂದ್ರು ಬಾಳಿಹಳ್ಳಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬೃಹತ್ ಮೆರವಣಿಗೆ
ಬಸವಾದಿ ಶಿವಶರಣರ ಹಿಂದೂ ಸಮಾವೇಶಕ್ಕು ಮುನ್ನ ಬೃಹತ್ ಮೆರವಣಿಗೆ ನಡೆಯಿತು.‌ ಮೆರವಣಿಗೆ ಭೂಮರೆಡ್ಡಿ ವೃತ್ತದಿಂದ ವಿದ್ಯಾದಾನ ಸಮಿತಿ ಮೈದಾನದ ವರೆಗೆ ನಡೆಯಿತು. ಮೆರವಣಿಗೆಯಲ್ಲಿ ಸಾವಿರಾರು ಮಹಿಳೆಯರು ಕುಂಭ ಹೊತ್ತು ಸಾಗಿದರು. ಅನೇಕ ಜಾನಪದ ಕಲಾ ತಂಡಗಳು ಮೆರವಣಿಯಲ್ಲಿ ಭಾಗವಹಿಸಿದ್ದವಯ.100ಕ್ಕೂ ಹೆಚ್ಚು ಮಠಾಧೀಶರು ಸಹ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿ ಗಮನ ಸೆಳೆದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net