ಬೇಸಿಗೆಯಲ್ಲಿ ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಪ್ರಖರ ಬಿಸಿಲು ಇರುತ್ತದೆ. ಈ ಸಮಯದಲ್ಲಿ ಮಕ್ಕಳು, ಗಭಿರ್ಣಿಯರು, ವೃದ್ಧರು ಹೊರಗಡೆ ತಿರುಗಾಡಬಾರದು. ಹೆಚ್ಚು ಸಮಯ ಬಿಸಿಲಿನಲ್ಲಿ ಇರುವುದರಿಂದ ದೇಹ ನಿರ್ಜಲೀಕರಣ ಆಗುವುದು ಮಾತ್ರವಲ್ಲದೇ ಕಿಡ್ನಿ ಸ್ಟೋನ್ ನಂತಹ ಸಮಸ್ಯೆಗಳಿಗೂ ಕಾರಣ ಆಗಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ. ಬಿಸಿಲಾಘಾತದಿಂದ ರಕ್ಷಣೆ ಪಡೆಯಲು ದ್ರವ ಪದಾರ್ಥಗಳನ್ನು ಹೆಚ್ಚು ಸೇವಿಸಬೇಕು. ನೀರು, ಒಆರ್ಎಸ್, ಎಳನೀರು, ಕಬ್ಬಿನ ಹಾಲು, ನಿಂಬೆಹಣ್ಣಿನ ಪಾನಕ, ಕಲ್ಲಂಗಡಿ ರಸವನ್ನು ಆಗಾಗ ಸೇವಿಸುವುದರಿಂದ ದೇಹಕ್ಕೆ ಶಕ್ತಿ ಸಿಗುತ್ತದೆ. ಕಾಬೋರ್ನೆಟೆಡ್ ಪಾನೀಯಗಳನ್ನು ತಪ್ಪಿಸುವುದು ಉತ್ತಮ ಎಂಬುದು ವೈದ್ಯರ ಸಲಹೆಯಾಗಿದೆ. ಬೇಸಿಗೆ ಅವಧಿಯಲ್ಲಿ ಒಣ ಪದಾರ್ಥಗಳಿಗಿಂತ ಮಜ್ಜಿಗೆ ಅಥವಾ ಮೊಸರನ್ನ ಹಾಗೂ ಮೆತ್ತನೆಯ ಆಹಾರಗಳನ್ನು ಹೆಚ್ಚು ಸೇವಿಸಬೇಕು. ಹೆಚ್ಚು ಮಸಾಲೆ ಪದಾರ್ಥಗಳಿರುವ ಆಹಾರ ಕಡಿಮೆ ಮಾಡುವುದು ಒಳಿತು ಎಂದು ವೈದ್ಯರು ಸಲಹೆ ನೀಡುತ್ತಾರೆ.