ಜಿಲ್ಲೆಯಲ್ಲಿ ಶೇ. 94.14ರಷ್ಟು ಮತದಾರರ ಮ್ಯಾಪಿಂಗ್​ ರ್ಪೂಣ: ಸಿ. ಎನ್​. ಶ್ರೀಧರ

ಎಸ್​ಐಆರ್​ ಕುರಿತು ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಸಿ.ಎನ್​. ಶ್ರಿಧರ ಸುದ್ದಿಗೋಷ್ಠಿ ನಡೆಸಿದರು. ಡಾ. ದುರಗೇಶ್​ ಕೆ ಆರ್​, ಸಂತೋಷಕುಮಾರ ಹಿರೇಮಠ ಇತರರು ಇದ್ದರು.
ಎಸ್​ಐಆರ್​ ಕುರಿತು ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಸಿ.ಎನ್​. ಶ್ರಿಧರ ಸುದ್ದಿಗೋಷ್ಠಿ ನಡೆಸಿದರು. ಡಾ. ದುರಗೇಶ್​ ಕೆ ಆರ್​, ಸಂತೋಷಕುಮಾರ ಹಿರೇಮಠ ಇತರರು ಇದ್ದರು.
Published on
ಎಸ್​ಐಆರ್​ ಕುರಿತು ಜಿಲ್ಲಾಧಿಕಾರಿ ಸಿ. ಎನ್​. ಶ್ರೀಧರ ಸುದ್ದಿಗೋಷ್ಠಿ
ಜೂ. 30 ರಿಂದ ಜು. 29 ವರೆಗೆ ಬಿಎಲ್​ಓಗಳಿಂದ ಮನೆ-ಮನೆ ಗಣತಿ
ವಿಜಯವಾಣಿ ಸುದ್ದಿಜಾಲ ಗದಗ
ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್​ಐಆರ್​) ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಶೇ.94.14 ರಷ್ಟು ಮತದಾರರ ಮ್ಯಾಪಿಂಗ್​ ರ್ಪೂಣಗೊಳಿಸಲಾಗಿದೆ. ಜಿಲ್ಲೆಯಲ್ಲಿ ಎಸ್​ಐಆರ್​ ಪ್ರಕ್ರಿಯೆಯನ್ನು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಸಿ. ಎನ್​. ಶ್ರೀಧರ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಎಸ್​ಐಆರ್​ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಎಸ್​ಐಆರ್​ ಕುರಿತು ರಾಜ್ಯದಾದ್ಯಂತ ಸಾಕಷ್ಟು ಚರ್ಚೆಗಳು ನಡೆದಿವೆ. ಸಾರ್ವಜನಿಕರಲ್ಲಿ ಉಂಟಾಗಿರುವ ಗೊಂದಲಗಳನ್ನು ನಿವಾರಿಸಲು ಪಾರದರ್ಶಕವಾಗಿ ಎಸ್​ಐಆರ್​ ಪ್ರಕ್ರಿಯೆ ನಡೆಸಲಾಗುವುದು. ಅರ್ಹ ಯಾವೊಬ್ಬ ಮತದಾರನೂ ಪಟ್ಟಿಯಿಂದ ಹೊರಗೆ ಉಳಿಯಬಾರದು. ಮತದಾನದ ಹಕ್ಕಿನಿಂದ ವಂಚಿತ ಆಗಬಾರದು ಎಂದು ಜಿಲ್ಲಾಧಿಕಾರಿ ಸಿ. ಎನ್​. ಶ್ರೀಧರ ಹೇಳಿದರು.
ಕಳೆದ ಆರು ತಿಂಗಳಿಂದ ಎಸ್​ಐಆರ್​ ಅಂಗವಾಗಿ ನಿರಂತರವಾಗಿ ಸಿದ್ಧತೆ ನಡೆಸಲಾಗಿದೆ. ಆಯೋಗದ ಮಾರ್ಗ ಸೂಚಿಯಂತೆ 2002ರ ಮತದಾರರ ಪಟ್ಟಿಯನ್ನು ಮಾನದಂಡವಾಗಿ ಇಟ್ಟುಕೊಂಡು, ಪ್ರಸ್ತುತ ಇರುವ 2025ರ ಮತದಾರರ ಪಟ್ಟಿಯೊಂದಿಗೆ ಹೋಲಿಕೆ ಹಾಗೂ ಮ್ಯಾಪಿಂಗ್​ ಪ್ರಕ್ರಿಯೆ ನಡೆಸಲಾಗಿದೆ. ಬೂತ್​ ಮಟ್ಟದ ಅಧಿಕಾರಿಗಳು (ಬಿಎಲ್​ಒ) ಮನೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಜಿಲ್ಲೆಯಲ್ಲಿ ಈಗಾಗಲೇ ಶೇ 94.14 ರಷ್ಟು ನೈಜ ಮತದಾರರನ್ನು ಗುರುತಿಸಿ, ಕುಟುಂಬಗಳ ಲಿಂಕೇಜ್​ನೊಂದಿಗೆ ಹೊಂದಾಣಿಕೆ ಮಾಡಲಾಗಿದೆ ಎಂದರು.
ವಿಶೇಷ ಪರಿಷ್ಕರಣೆ ಅಂಗವಾಗಿ ಜೂ. 20 ರಿಂದ 29ರವರೆಗೆ ಪೂರ್ವಸಿದ್ಧತೆ, ತರಬೇತಿ ಮತ್ತು ಮುದ್ರಣ ಕಾರ್ಯಗಳು ನಡೆಯಲಿವೆ. ಜೂ. 30 ರಿಂದ ಜು. 29 ರವರೆಗೆ ಬಿಎಲ್​ಒ ಗಳು ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ಹಾಗೂ ಪರಿಶೀಲನೆ ನಡೆಸಲಿದ್ದಾರೆ. ನಂತರ ಆ.5 ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು. ಈ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಾಧ್ಯಮಗಳು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿಗಳು ಕೋರಿದರು.
53004 ಮತದಾರರ ಪತ್ತೆಗಾಗಿ ವಿಶೇಷ ಕಾರ್ಯಾಚರಣೆ:
2025ರ ಜಿಲ್ಲೆಯ ಮತದಾರರ ಪಟ್ಟಿಯ ಪ್ರಕಾರ ಒಟ್ಟು 9,04,994 ಅರ್ಹ ಮತದಾರರಿದ್ದು, ಈ ಪೈಕಿ ಈಗಾಗಲೇ 8,51,991 ಮತದಾರರನ್ನು ಗುರುತಿಸಿ ಮ್ಯಾಪಿಂಗ್​ ಮಾಡಲಾಗಿದೆ. ಇದರಲ್ಲಿ ಕೆಲವರು ಮೃತರಾಗಿರಬಹುದು, ಬೇರೆ ಕಡೆಗೆ ಕಾಯಂ ಆಗಿ ವಲಸೆ ಹೋಗಿರಬಹುದು. ಅಥವಾ ಮತಪಟ್ಟಿಯಲ್ಲಿ ಎರಡು ಬಾರಿ ಹೆಸರು ಸೇರ್ಪಡೆ ಆಗಿರಬಹುದು. ಆದರೆ, ಯಾರನ್ನೂ ಏಕಾಏಕಿ ಪಟ್ಟಿಯಿಂದ ಕೈಬಿಡಲಾಗುವುದಿಲ್ಲ. ಪತ್ತೆಯಾಗದ ಈ 53004 ಮತದಾರರಿಗೆ ನೋಟಿಸ್​ ನೀಡಿ ಪರಿಶೀಲಿಸಲಾಗುವುದು. ಮೃತಪಟ್ಟ ಬಗ್ಗೆ ಅಧಿಕೃತ ಮರಣ ಪ್ರಮಾಣಪತ್ರ ಸಿಗುವವರೆಗೂ ಯಾರ ಹೆಸರನ್ನೂ ಪಟ್ಟಿಯಿಂದ ತೆಗೆದುಹಾಕುವುದಿಲ್ಲ. ಮತದಾರರ ಪತ್ತೆಗಾಗಿ ವಿಶೇಷ ಕಾರ್ಯಾಚರಣೆನಡೆಸಲಾಗುವುದು ಎಂದರು.
ಅಗತ್ಯ ದಾಖಲೆ ಪಡೆದು ಮತಪಟ್ಟಿಗೆ ಸೇರ್ಪಡೆ:
ಕುಟುಂಬದ ಮುಖ್ಯಸ್ಥರ ಹೆಸರು 2002ರ ಮತದಾರರ ಪಟ್ಟಿಯಲ್ಲಿದ್ದರೆ, ಹೊಸದಾಗಿ ಅರ್ಹತೆ ಪಡೆಯುವ ಕುಟುಂಬದ ಇತರೆ ಸದಸ್ಯರ ಹೆಸರನ್ನು ಸೇರ್ಪಡೆ ಮಾಡುವುದು ಸುಲಭವಾಗುತ್ತದೆ. ಮದುವೆಯಾಗಿ ಅಥವಾ ವಲಸೆ ಬಂದು ಇಲ್ಲಿ ನೆಲೆಸಿರುವವರ ಹೆಸರು ಹಳೆಯ ಮತಪಟ್ಟಿಯಲ್ಲಿ ಇಲ್ಲದಿದ್ದರೆ, ಅವರಿಗೆ ಕುಟುಂಬದ ಲಿಂಕೇಜ್​ ಸಿಗುವುದಿಲ್ಲ. ಈ ಹಿಂದೆ ಅವರು ವಾಸವಾಗಿದ್ದ ಸ್ಥಳದಲ್ಲಿನ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಇದ್ದರೆ, ಆ ಮಾಹಿತಿ ಅನುಸಾರ ಹೆಸರು ಸೇರ್ಪಡೆ ಮಾಡಬಹುದು ಎಂದರು.
ಮ್ಯಾಪಿಂಗ್​ ಆಗದೆ ಇರುವವರು ಮನೆ ಗಣತಿ ಫಾರಂ ಜೊತೆ ಚುನಾವಣಾ ಆಯೋಗ ನಿಗದಿಪಡಿಸಿದ ಕೇಂದ್ರ ಅಥವಾ ರಾಜ್ಯ ಸರ್ಕಾರ, ಸಾರ್ವಜನಿಕ ಉದ್ಯಮಗಳು ನಿಯಮಿತ ಉದ್ಯೋಗಿ ಗುರುತಿನ ಚೀಟಿ, ಪಿಂಚಣಿ ಆದೇಶ ಅಥವಾ ಗುರುತಿನ ಚೀಟಿ, ಜು. 1, 1987 ಕ್ಕಿಂತ ಮೊದಲು ಭಾರತದಲ್ಲಿ ಸರ್ಕಾರಿ, ಸ್ಥಳಿಯ ಪ್ರಾಧಿಕಾರ, ಬ್ಯಾಂಕ್​, ಅಂಚೆ ಕಚೇರಿ, ಎಲ್​ಐಸಿ ಉದ್ಯಮಗಳಿಂದ ನೀಡಲಾದ ಯಾವುದೇ ಗುರುತಿನ ಚೀಟಿ, ಪ್ರಮಾಣ ಪತ್ರ ಅಥವಾ ದಾಖಲೆ, ಜನನ ಪ್ರಮಾಣ ಪತ್ರ, ಪಾಸ್​ಪೋರ್ಟ, ಎಸೆಸೆಲ್ಸಿ ಶೈಕ್ಷಣಿಕ ಪ್ರಮಾಣ ಪತ್ರ, ಶಾಶ್ವತ ನಿವಾಸ ಪ್ರಮಾಣ ಪತ್ರ, ಅರಣ್ಯ ಹಕ್ಕು ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ರಾಷ್ಟ್ರೀಯ ನಾಗರಿಕರ ನೋಂದಣಿ, ಕುಟುಂಬ ನೋಂದಣಿ, ಭೂಮಿ ಮನೆ ಹಂಚಿಕೆ ಪ್ರಮಾಣ ಪತ್ರ ಸಲ್ಲಿಸಬಹುದು. ಇದರೊಂದಿಗೆ ಆಧಾರ್​ ಕಾರ್ಡನ್ನು ಗುರುತಿನ ಪುರಾವೆಯಾಗಿ ಮಾತ್ರ ನೀಡಬಹುದು. ಇವುಗಳನ್ನು ಪಡೆದು ಮತಪಟ್ಟಿಗೆ ಸೇರಿಸಲು ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್​ ಕೆ ಆರ್​, ಚುನಾವಣಾ ಶಾಖೆಯ ತಹಸೀಲ್ದಾರ ಸಂತೋಷಕುಮಾರ ಹಿರೇಮಠ ಸೇರಿದಂತೆ ಸಹಾಯಕ ಚುನಾವಣಾ ಅಧಿಕಾರಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net