ಆಡಳಿತದಲ್ಲಿ ದತ್ತಾಂಶದ ಸಮರ್ಪಕ ಬಳಕೆ ಅತ್ಯಗತ್ಯ: ಸಿ. ಆರ್. ಮುಂಡರಗಿ
ಗದಗ ಜಿಲ್ಲಾಡಳಿತ ಭವನದಲ್ಲಿ ರಾಷ್ಟ್ರೀಯ ಸಂಖ್ಯಾಶಾಸ್ತ್ರ ದಿನಾಚರಣೆ ಆಚರಿಸಲಾಯಿತು. ಸಿ. ಆರ್. ಮುಂಡರಗಿ, ಬಿ.ಎಸ್. ಪಾಟೀಲ, ಎಂ. ವಿ. ಚಳಗೇರಿ, ಯೋಜನಾ ಅಂದಾಜು ಮತ್ತು ಮೌಲ್ಯ ಮಾಪನಾಧಿಕಾರಿ ಬಿ. ಎಲ್. ಕೊಪ್ಪಳ, ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ವಿವಿಧ ಇಲಾಖೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ, ದಕ್ಷತೆ ಹಾಗೂ ಪರಿಣಾಮಕಾರಿ ನಿರ್ಧಾರ ಕೈಗೊಳ್ಳಲು ನಿಖರವಾದ ಅಂಕಿ- ಅಂಶಗಳು ಮತ್ತು ಆಡಳಿತಾತ್ಮಕ ದತ್ತಾಂಶದ ಸಮರ್ಪಕ ಬಳಕೆ ಅತ್ಯಂತ ಅವಶ್ಯಕ ಎಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದಶಿರ್ ಸಿ. ಆರ್. ಮುಂಡರಗಿ ಹೇಳಿದರು.
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಚೇರಿ ವತಿಯಿಂದ ಭಾರತೀಯ ಸಂಖ್ಯಾಶಾಸ್ತ್ರದ ಪಿತಾಮಹ ಪ್ರೊ. ಪಿ. ಸಿ. ಮಹಲನೋಬಿಸ್ ಅವರ ಜನ್ಮದಿನದ ಅಂಗವಾಗಿ ಶುಕ್ರವಾರ ಜಿಲ್ಲಾಡಳಿತ ಭವನದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸಂಖ್ಯಾಶಾಸ್ತ್ರ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,
ಪ್ರಸಕ್ತ ವರ್ಷದ ಧ್ಯೇಯವಾಕ್ಯವಾದ ಆಡಳಿತಾತ್ಮಕ ದತ್ತಾಂಶದ ಸಾಮರ್ಥ್ಯವನ್ನು ಮುಕ್ತಗೊಳಿಸುವುದು ಎಂಬ ಆಶಯವನ್ನು ಪ್ರತಿಯೊಂದು ಸರ್ಕಾರಿ ಕಚೇರಿಯ ಕಾರ್ಯ ವೈಖರಿಯಲ್ಲಿ ಅಳವಡಿಸಿ ಕೊಳ್ಳಬೇಕಿದೆ. ಆಡಳಿತ ಪ್ರಕ್ರಿಯೆಗಳ ಪ್ರತಿಯೊಂದು ಹಂತದಲ್ಲೂ ನಿಖರವಾದ ಅಂಕಿ-ಅಂಶಗಳು ಮತ್ತು ವಿಶ್ವಾಸಾರ್ಹ ದತ್ತಾಂಶಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಾಗ ಮಾತ್ರ ಜನಸ್ನೇಹಿ, ಪಾರದರ್ಶಕ ಹಾಗೂ ಜವಾಬ್ದಾರಿಯುತ ಆಡಳಿತ ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲೆ ಜಯದೇವಿ ಅರಕೇರಿಮಠ ಮಾತನಾಡಿ, ಆಡಳಿತಾತ್ಮಕ ದತ್ತಾಂಶವನ್ನು ಕೇವಲ ದಾಖಲೆಗಳಾಗಿ ಸಂಗ್ರಹಿಸಿ ಇಡುವುದರಿಂದ ಪ್ರಯೋಜನವಿಲ್ಲ. ಅದರ ನೈಜ ಸಾಮರ್ಥ್ಯವನ್ನು ಅನಾವರಣಗೊಳಿಸಿ, ಕಚೇರಿಯ ದೈನಂದಿನ ನಿರ್ಧಾರಗಳಲ್ಲಿ, ಅಭಿವೃದ್ಧಿ ಯೋಜನೆಗಳ ರೂಪುರೇಷೆ ಸಿದ್ಧಪಡಿಸುವಲ್ಲಿ ಹಾಗೂ ದೇಶದ ನೀತಿ ನಿರೂಪಣೆಯಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಎ.ಎ. ಕಂಬಾಳಿಮಠ ಮಾತನಾಡಿ, ಮಾನವ ಅಭಿವೃದ್ಧಿ ಸೂಚ್ಯಂಕ ಸೇರಿದಂತೆ ವಿವಿಧ ಅಭಿವೃದ್ಧಿ ಮಾನದಂಡಗಳನ್ನು ನಿರ್ಧರಿಸುವಲ್ಲಿ ಸಂಖ್ಯಾಶಾಸ್ತ್ರದ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಯೋಜನೆಗಳ ರೂಪಿಸುವಿಕೆ, ಅನುಷ್ಠಾನ ಹಾಗೂ ಮೌಲ್ಯಮಾಪನದಲ್ಲಿ ವೈಜ್ಞಾನಿಕ ದತ್ತಾಂಶಗಳು ಪ್ರಮುಖ ಪಾತ್ರ ವಹಿಸುತ್ತವೆ. ಭಾರತೀಯ ಸಂಖ್ಯಾಶಾಸ್ತ್ರ ಕ್ಷೇತ್ರಕ್ಕೆ ಪ್ರೊ. ಪಿ.ಸಿ. ಮಹಲನೋಬಿಸ್ ನೀಡಿರುವ ಅಮೂಲ್ಯ ಕೊಡುಗೆ ದೇಶದ ಅಭಿವೃದ್ಧಿಯ ಪಥದಲ್ಲಿ ಶಾಶ್ವತವಾಗಿ ಸ್ಮರಣೀಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಬಿ. ಎಸ್. ಪಾಟೀಲ ಮಾತನಾಡಿ, ಇಲಾಖೆಯ ಸಿಬ್ಬಂದಿ ಪ್ರತಿಯೊಬ್ಬರೂ ದತ್ತಾಂಶ ಸಂಗ್ರಹಣೆ ಮತ್ತು ನಿರ್ವಹಣೆಯಲ್ಲಿ ನಿಖರತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ವಿಶ್ವಾಸಾರ್ಹ ಅಂಕಿ-ಅಂಶಗಳ ಆಧಾರದ ಮೇಲೆ ಸಾರ್ವಜನಿಕ ಸೇವೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಹಾಗೂ ಸುಲಭವಾಗಿ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಎಲ್ಲರೂ ಬದ್ಧತೆಯಿಂದ ಕಾರ್ಯ ನಿರ್ವಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಎಂ. ವಿ. ಚಳಗೇರಿ, ಯೋಜನಾ ಅಂದಾಜು ಮತ್ತು ಮೌಲ್ಯಮಾಪನಾಧಿಕಾರಿ ಬಿ. ಎಲ್. ಕೊಪ್ಪಳ, ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ವಿವಿಧ ಇಲಾಖೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.