ಕೃಷಿ ಅಂಕಿ- ಅಂಶಗಳ ನಿಖರತೆಗೆ ಇಲಾಖೆಗಳ ನಡುವೆ ಸಮನ್ವಯತೆ ಅತ್ಯಗತ್ಯ: ಜಿಲ್ಲಾಧಿಕಾರಿ ಸಿ. ಎನ್. ಶ್ರೀಧರ
ಗದಗ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಕೃಷಿ ಅಂಕಿ ಅಂಶಗಳ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ ಜರುಗಿತು. ಸಿ.ಎನ್. ಶ್ರಿಧರ, ಡಾ. ದುರಗೇಶ್ ಕೆ. ಆರ್, ಬಸನಗೌಡ ಕೊಟೂರು, ಎ.ಎ. ಕಂಬಾಳಿಮಠ, ರುದ್ರಣ್ಣಗೌಡ ಜಿ. ಜೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
ಜಿಲ್ಲೆಯಲ್ಲಿ ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಗಳಿಗೆ ಸಂಬಂಧಿಸಿದ ಕೃಷಿ ಅಂಕಿ-ಅಂಶಗಳು ಹಾಗೂ ಬೆಳೆ ವಿಸ್ತೀರ್ಣದ ಮಾಹಿತಿ ಅತ್ಯಂತ ನಿಖರವಾಗಿ ಇರಬೇಕು. ಇದಕ್ಕಾಗಿ ಕಂದಾಯ ಸೇರಿದಂತೆ ಎಲ್ಲಾ ಸಂಬಂಧಿತ ಇಲಾಖೆಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಸಿ. ಎನ್. ಶ್ರೀಧರ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಜರುಗಿದ ಕೃಷಿ ಅಂಕಿ ಅಂಶಗಳ ಜಿಲ್ಲಾ ಮಟ್ಟದ ಸಮನ್ವಯ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಂಗಾಮು ಆರಂಭದಿಂದ ಕೊನೆಯವರೆಗೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಅಂಕಿ- ಅಂಶಗಳಲ್ಲಿ ದತ್ತಾಂಶ ಹೊಂದಾಣಿಕೆಯಲ್ಲಿ ಯಾವುದೇ ಗೊಂದಲ ಇರಬಾರದು. ಇಲಾಖೆಗಳು ಪರಸ್ಪರ ಕುಳಿತು ಮಾಹಿತಿಗಳನ್ನು ತಾಳೆ ನೋಡಬೇಕು ಹಾಗೆ ಕ್ಷೇತ್ರ ಮಟ್ಟದ ಬೆಳೆ ಸಮೀಕ್ಷೆ ನಿಖರವಾಗಿ ಇರಬೇಕು. ಖಾಸಗಿ ಜಂಟಿ ಸಮೀಕ್ಷೆದಾರರು ಮತ್ತು ಗ್ರಾಮ ಆಡಳಿತ ಅಧಿಕಾರಿಗಳು ನೀಡುವ ಬೆಳೆ ಸಮೀಕ್ಷೆಯ ಮಾಹಿತಿಯನ್ನು ಮೇಲ್ವಿಚಾರಕರು ಕಡ್ಡಾಯವಾಗಿ ಕ್ಷೇತ್ರ ಮಟ್ಟದಲ್ಲಿ ಪರಿಶೀಲಿಸಬೇಕು. ಇದು ಮೇಲ್ವಿಚಾರಕರ ಜವಾಬ್ದಾರಿ ಆಗಿದೆ ಎಂದರು.
ಬೆಳೆ ಕಟಾವು:
ಬೆಳೆ ಕಟಾವು ಪ್ರಯೋಗಗಳು ಮತ್ತು ಬೆಳೆ ಸಮೀಕ್ಷೆಗಳಲ್ಲಿ ತಪ್ಪು ಮಾಹಿತಿಗಳು ದಾಖಲಾದರೆ, ರೈತರಿಗೆ ಬೆಳೆ ವಿಮೆ ಪಡೆಯುವಾಗ ತೊಂದರೆ ಆಗುತ್ತದೆ. ರೈತರಿಗೆ ಅನ್ಯಾಯ ಆಗದಂತೆ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ತಪ್ಪು ಮಾಹಿತಿಯಿಂದಾಗಿ ವಿಮಾ ಕಂಪನಿಗಳು ಆಕ್ಷೇಪಣೆ ಮಾಡಲು ಅಧಿಕಾರಿಗಳೇ ಕಾರಣ ಆಗಬಾರದು ಎಂದರು.
ಜೋಳ ಕಳವಳ:
ಜಿಲ್ಲೆಯಲ್ಲಿ ಜೋಳದಂತಹ ಸಾಂಪ್ರದಾಯಿಕ ಬೆಳೆಗಳ ವಿಸ್ತೀರ್ಣ ಕಡಿಮೆ ಆಗುತ್ತಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ರೈತರಿಗೆ ಆಥಿರ್ಕವಾಗಿ ಹೆಚ್ಚಿನ ಲಾಭ ತಂದುಕೊಡುವ ಬೆಳೆಗಳ ಬಗ್ಗೆ ಬೆಳೆ ವೈವಿಧ್ಯತೆ ಹಾಗೂ ಪಾಳು ಭೂಮಿ ಬಳಕೆಯ ಮಾಹಿತಿ ನೀಡಬೇಕು. ಜಿಲ್ಲೆಯಲ್ಲಿ ರೇಷ್ಮೆ ಕೃಷಿ ಮತ್ತು ತೋಟಗಾರಿಕಾ ಬೆಳೆಗಳಿಗೆ ಉತ್ತಮ ಅವಕಾಶಗಳಿದ್ದು, ರೈತರಿಗೆ ಮಿಶ್ರ ಬೆಳೆ ಪದ್ಧತಿ ಅಳವಡಿಸಿಕೊಳ್ಳಲು ಪ್ರೋತ್ಸಾಹಿಸಬೇಕು. ಜಿಲ್ಲೆಯ ಪಾಳು ಭೂಮಿಯನ್ನು ಗುರುತಿಸಿ, ಅದನ್ನು ಕೃಷಿ ಯೋಗ್ಯ ಭೂಮಿಯನ್ನಾಗಿ ಪರಿವತಿರ್ಸಿ ಸಮರ್ಪಕವಾಗಿ ಬಳಸಿಕೊಳ್ಳಲು ರೈತರಲ್ಲಿ ಜಾಗೃತಿ ಮೂಡಿಸುವಂತೆ ಕೃಷಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾ ಸಾಂಖ್ಯಿಕ ಸಂಗ್ರಹಣಾ ಅಧಿಕಾರಿ ಬಿ. ಎಸ್. ಪಾಟೀಲ ಮಾತನಾಡಿ, ಜಿಲ್ಲೆಯ ಕೃಷಿ ಅಂಕಿ- ಅಂಶಗಳ ಪ್ರಗತಿ ಹಾಗೂ ಪ್ರಸಕ್ತ ಸಾಲಿನ ಗುರಿಗಳ ಕುರಿತು ಸಭೆಗೆ ಸಮಗ್ರ ಮಾಹಿತಿ ನೀಡಿದರು.
ಈ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ. ಆರ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ ಕೊಟೂರು, ಜಿಪಂ ಯೋಜನಾಧಿಕಾರಿ ಎ.ಎ. ಕಂಬಾಳಿಮಠ, ಭೂ ದಾಖಲೆ ಇಲಾಖೆಯ ಉಪನಿರ್ದೇಶಕ ರುದ್ರಣ್ಣಗೌಡ ಜಿ. ಜೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
ಬಾಕ್ಸ್:
ಸಭೆಯಲ್ಲಿ ಅಧಿಕಾರಿಗಳು ನೀಡಿದ ಮಾಹಿತಿ:
* ಮುಂಗಾರು ಹಂಗಾಮಿನಲ್ಲಿ 3,41,579 ಹೆಕ್ಟೇರ್, ಹಿಂಗಾರು ಹಂಗಾಮಿನಲ್ಲಿ 2,44,198 ಹೆಕ್ಟೇರ್ ಸೇರಿ ಒಟ್ಟು 5,85,777 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ.
* ಪ್ರಸಕ್ತ ಸಾಲಿನಲ್ಲಿ ಮುಂಗಾರಿನಲ್ಲಿ 60,442 ಹೆಕ್ಟೇರ್ ಹಾಗೂ ಹಿಂಗಾರಿನಲ್ಲಿ 57,749 ಹೆಕ್ಟೇರ್ ಸೇರಿದಂತೆ ಒಟ್ಟು 1,18,191 ಹೆಕ್ಟೇರ್ ಪ್ರದೇಶ ನೀರಾವರಿ ಸೌಲಭ್ಯ ಒಳಗೊಂಡಿದೆ.
* ಜಿಲ್ಲೆಯ ಮುಂಗಾರು ಹಂಗಾಮಿನಲ್ಲಿ ಮೆಕ್ಕೆಜೋಳವನ್ನು 1,54,216 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದೆ. ಹೆಸರು 1,06,145 ಹೆಕ್ಟೇರ್, ಶೇಂಗಾ 10,322 ಹೆಕ್ಟೇರ್, ಹತ್ತಿ 6,664 ಹೆಕ್ಟೇರ್ ಹಾಗೂ ಸೂರ್ಯಕಾಂತಿ 3,278 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ.
* ಕಡಲೆ 1,57,903 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗುವ ಮೂಲಕ ಅತಿ ದೊಡ್ಡ ಬೆಳೆಯಾಗಿದೆ. ಜೋಳ 22,172 ಹೆಕ್ಟೇರ್, ಗೋಧಿ 19,500 ಹೆಕ್ಟೇರ್, ಸೂರ್ಯಕಾಂತಿ 14,755 ಹೆಕ್ಟೇರ್ ಹಾಗೂ ಮೆಕ್ಕೆಜೋಳ 3,287 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ.