ಸ್ವಚ್ಛತೆ ದೇವರಿಗೆ ಸಮ; ಘನ ತ್ಯಾಜ್ಯ ನಿರ್ವಹಣೆಯಲ್ಲಿ ಎಲ್ಲರೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ

Gadag DC Office
Gadag DC Office
Published on
ಗದಗ: ಸ್ವಚ್ಛತೆ ದೇವರಿಗೆ ಸಮಾನವಾಗಿದ್ದು, ನಮ್ಮ ದೇಹವನ್ನು ಹೇಗೆ ಸ್ವಚ್ಛವಾಗಿ ಇಟ್ಟುಕೊಳ್ಳುತ್ತೇವೆಯೋ ಅದೇ ರೀತಿ ನಮ್ಮ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಸ್ವಚ್ಛ ವಾತಾವರಣದಿಂದ ಅನಾರೋಗ್ಯವನ್ನು ದೂರವಿಡಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಹೇಳಿದರು.

ನಗರದ ಜಿಲ್ಲಾಡಳಿತ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಹಾಗೂ ನಗರಸಭೆ ಗದಗ-ಬೆಟಗೇರಿ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ ದಲ್ಲಿ ಮಂಗಳವಾರ (ಜೂನ್ 16) ರಂದು ಆಯೋಜಿಸಿದ್ದ ಪೌರಕಾರ್ಮಿಕರಿಗೆ ಹಾಗೂ ಸ್ವಚ್ಛತಾ ಕೆಲಸಗಾರರಿಗೆ ಘನತ್ಯಾಜ್ಯ ವಸ್ತು ನಿರ್ವಹಣೆ ನಿಯಮಗಳು-2026 ಮತ್ತು ಸ್ವಚ್ಛತಾ ಪರಿಕರಗಳ ಬಳಕೆ ಕುರಿತು ತಿಳುವಳಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇಂದಿನ ದಿನಗಳಲ್ಲಿ ಘನ ತ್ಯಾಜ್ಯ ನಿರ್ವಹಣೆ ಅತ್ಯಂತ ಮಹತ್ವದ ವಿಷಯವಾಗಿದ್ದು, ಕಸವನ್ನು ಹಸಿಕಸ, ಒಣಕಸ, ಸ್ಯಾನಿಟರಿ ತ್ಯಾಜ್ಯ ಹಾಗೂ ವಿಶೇಷ ಕಾಳಜಿ ತ್ಯಾಜ್ಯ ಎಂಬ ನಾಲ್ಕು ವಿಭಾಗಗಳಲ್ಲಿ ವಿಂಗಡಿಸಲಾಗುತ್ತಿದೆ.

ತ್ಯಾಜ್ಯವನ್ನು ಮೂಲದಲ್ಲಿಯೇ ಪ್ರತ್ಯೇಕಿಸುವುದರಿಂದ ಅದರ ಸಮರ್ಪಕ ನಿರ್ವಹಣೆ ಸಾಧ್ಯವಾಗುತ್ತದೆ. ಸಾಮಾನ್ಯವಾಗಿ ಹೆಚ್ಚು ನೀರು ಬಳಸುವ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದ ಘನ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಇಂತಹ ಸ್ಥಳಗಳತ್ತ ವಿಶೇಷ ಗಮನ ಹರಿಸಿ ವೈಜ್ಞಾನಿಕ ರೀತಿಯಲ್ಲಿ ತ್ಯಾಜ್ಯ ನಿರ್ವಹಣೆ ಮಾಡಬೇಕಾಗಿದೆ ಎಂದು ಅವರು ಹೇಳಿದರು.

ಘನ ತ್ಯಾಜ್ಯ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಉದ್ದೇಶದಿಂದ ಸರ್ಕಾರ ನಿಯಮಗಳನ್ನು ರೂಪಿಸಿದ್ದು, ಎಲ್ಲರೂ ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ನಗರಗಳ ಬೆಳವಣಿಗೆ ಮತ್ತು ಜನಸಂಖ್ಯೆ ಹೆಚ್ಚಳದೊಂದಿಗೆ ತ್ಯಾಜ್ಯದ ಪ್ರಮಾಣವೂ ಹೆಚ್ಚುತ್ತಿದ್ದು, ಅದರ ವೈಜ್ಞಾನಿಕ ವಿಲೇವಾರಿ ಪರಿಸರ ಸಂರಕ್ಷಣೆ ಮತ್ತು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಅತ್ಯಗತ್ಯವಾಗಿದೆ ಎಂದರು.

ತ್ಯಾಜ್ಯವನ್ನು ಮೂಲದಲ್ಲಿಯೇ ವಿಂಗಡಿಸುವುದು, ಮರುಬಳಕೆ ಹಾಗೂ ಮರುಸಂಸ್ಕರಣೆಗೆ ಆದ್ಯತೆ ನೀಡುವುದರಿಂದ ಸ್ವಚ್ಛ ಮತ್ತು ಆರೋಗ್ಯಕರ ಪರಿಸರ ನಿರ್ಮಾಣ ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಸ್ವಚ್ಛತೆ ಮತ್ತು ಸಾರ್ವಜನಿಕ ಆರೋಗ್ಯ ಕಾಪಾಡುವಲ್ಲಿ ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಕೆಲಸಗಾರರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಅವರು ಪ್ರತಿನಿತ್ಯ ಹಲವಾರು ಸವಾಲಿನ ಪರಿಸ್ಥಿತಿಗಳಲ್ಲಿ ಕಾರ್ಯನಿರ್ವಹಿಸುತ್ತಾರೆ. ತ್ಯಾಜ್ಯ ಸಂಗ್ರಹಣೆ, ಚರಂಡಿ ಸ್ವಚ್ಛತೆ ಹಾಗೂ ತ್ಯಾಜ್ಯ ವಿಂಗಡಣೆ ವೇಳೆ ಆರೋಗ್ಯ ಮತ್ತು ಸುರಕ್ಷತೆಗೆ ಸಂಬಂಧಿಸಿದ ಅಪಾಯಗಳು ಎದುರಾಗುತ್ತವೆ. ಆದ್ದರಿಂದ ಕೈಗವಸು, ಮುಖಗವಸು, ಸುರಕ್ಷತಾ ಬೂಟು, ರಿಫ್ಲೆಕ್ಟಿವ್ ಜಾಕೆಟ್ ಸೇರಿದಂತೆ ಅಗತ್ಯ ರಕ್ಷಣಾ ಸಾಧನಗಳನ್ನು ಕಡ್ಡಾಯವಾಗಿ ಬಳಸಬೇಕು. ಇದರಿಂದ ಅಪಘಾತಗಳು ಮತ್ತು ಸೋಂಕುಜನ್ಯ ಕಾಯಿಲೆಗಳಿಂದ ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಜಿಲ್ಲಾ ಕಾನೂನು ಸೇವಾ ಪ್ರಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ದಿವಾಣಿ ನ್ಯಾಯದೀಶ ಸಿ.ಎಸ್. ಶಿವನಗೌಡ್ರ ಮಾತನಾಡಿ ಸಮಾಜದ ಸ್ವಚ್ಛತೆಗೆ ಶ್ರಮಿಸುವ ಪೌರಕಾರ್ಮಿಕರಿಗಾಗಿ ಇಂತಹ ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಅತ್ಯಂತ ಶ್ಲಾಘನೀಯ. ಪೌರಕಾರ್ಮಿಕರ ಸಮಸ್ಯೆಗಳನ್ನು ಕೇವಲ ದೂರು-ದುಮ್ಮಾನಗಳ ಮೂಲಕ ನೋಡುವುದಕ್ಕಿಂತ, ಅವರ ನಿಜವಾದ ಸಮಸ್ಯೆಗಳೇನು ಮತ್ತು ಅದಕ್ಕೆ ಕಾನೂನಾತ್ಮಕ ಪರಿಹಾರಗಳೇನು ಎಂಬುದನ್ನು ಮನವರಿಕೆ ಮಾಡಿಕೊಡುವುದು ಇಂದಿನ ಅಗತ್ಯವಾಗಿದೆ," ಎಂದು ತಿಳಿಸಿದರು.


"ಪೌರಕಾರ್ಮಿಕರ ಕ್ಷೇಮಾಭಿವೃದ್ಧಿಗಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಸದಾ ಸಿದ್ಧವಿದೆ. ಸರ್ಕಾರದಿಂದ ಸಿಗುವ ಸೌಲತ್ತುಗಳಾದ ಶೇಕಡಾ ೫೦ರಷ್ಟು ಸಹಾಯಧನದೊಂದಿಗೆ ಸಾಲ ಸೌಲಭ್ಯ, ವಸತಿ ಸೌಲಭ್ಯ ಅಥವಾ ಒನ್-ಟೈಮ್ ಅಸಿಸ್ಟೆನ್ಸ್ ಮುಂತಾದ ಯೋಜನೆಗಳ ಲಾಭ ಪಡೆಯಲು ಯಾವುದೇ ತೊಂದರೆಯಾಗಿದ್ದಲ್ಲಿ, ಅಥವಾ ನಿಮ್ಮ ಹಕ್ಕುಗಳ ಉಲ್ಲಂಘನೆಯಾಗಿದ್ದಲ್ಲಿ ಪ್ರಾಧಿಕಾರವನ್ನು ಸಂಪರ್ಕಿಸಬಹುದು. ಪ್ರಾಧಿಕಾರದ 'ಫ್ರಂಟ್ ಆಫೀಸ್' ಮೂಲಕ ಪೌರಕಾರ್ಮಿಕರಿಗೆ ಉಚಿತವಾಗಿ ವಕೀಲರ ಸೌಲಭ್ಯ ಹಾಗೂ ಕಾನೂನು ನೆರವನ್ನು ಒದಗಿಸಲಾಗುವುದು. ನಿಮ್ಮ ಹಕ್ಕುಗಳಿಗಾಗಿ ನ್ಯಾಯಯುತವಾಗಿ ಹೋರಾಡುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಿ," ಎಂದು ಕರೆ ನೀಡಿದರು.

"ನಗರದ ಪ್ರತಿಯೊಬ್ಬ ನಾಗರಿಕನೂ ನೆಮ್ಮದಿಯಿಂದ ಉಸಿರಾಡಲು ಮತ್ತು ಸ್ವಚ್ಛವಾಗಿ ಬದುಕಲು ಪೌರಕಾರ್ಮಿಕರೇ ಕಾರಣ. ಹೀಗಾಗಿ ನಿಮ್ಮ ಆರೋಗ್ಯದ ಕಡೆಗೆ ನೀವು ಹೆಚ್ಚಿನ ಗಮನ ಹರಿಸಬೇಕು. ಯಾವುದೇ ಕಾರಣಕ್ಕೂ ಸುರಕ್ಷತಾ ಉಪಕರಣಗಳಿಲ್ಲದೆ ನೇರವಾಗಿ ಕೈಗಳಿಂದ ಕಸವನ್ನು ಮುಟ್ಟಬೇಡಿ. ಅಧಿಕಾರಿಗಳು ಒದಗಿಸುವ ಮಾಸ್ಕ್, ಗ್ಲೌಸ್ ಸೇರಿದಂತೆ ಆಧುನಿಕ ಯಂತ್ರೋಪಕರಣಗಳನ್ನು ಕಡ್ಡಾಯವಾಗಿ ಬಳಸಿ ಕೆಲಸ ಮಾಡಿ. ಇದರೊಂದಿಗೆ, ನಿಮ್ಮ ಆರೋಗ್ಯ ಮತ್ತು ಮಕ್ಕಳಿಗೆ ಶಿಕ್ಷಣಕ್ಕೆ ಆದ್ಯತೆ ನೀಡಿ ಕಡ್ಡಾಯವಾಗಿ ಉತ್ತಮ ಶಿಕ್ಷಣವನ್ನು ಕೊಡಿಸಿ. ಡಾ. ಬಿ.ಆರ್. ಅಂಬೇಡ್ಕರ್ ಅವರು ಹೇಳಿದಂತೆ ಸಮಾಜದ ಮುಖ್ಯವಾಹಿನಿಗೆ ಬರಲು ಶಿಕ್ಷಣವೇ ಏಕೈಕ ಮಾರ್ಗ. ಮುಂದಿನ ಪೀಳಿಗೆಯು ಸಮಾಜದ ಎಲ್ಲಾ ಉನ್ನತ ಸ್ಥಾನಗಳಲ್ಲಿ ಗುರುತಿಸಿಕೊಳ್ಳುವಂತಾಗಬೇಕು," ಎಂದು ಆಶಯ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಪೌರಕಾರ್ಮಿಕರೊಬ್ಬರು ಕಳೆದ 20 ದಿನಗಳಿಂದ ಸಂಬಳ ಆಗದಿರುವ ಬಗ್ಗೆ ನ್ಯಾಯಾಧೀಶರ ಗಮನಕ್ಕೆ ತಂದಾಗ, ತಕ್ಷಣವೇ ಸ್ಪಂದಿಸಿದ ನ್ಯಾಯಾಧೀಶರು, "ಯಾವುದೇ ತಾಂತ್ರಿಕ ತೊಂದರೆಗಳಿದ್ದಲ್ಲಿ ಅಧಿಕಾರಿಗಳು ಪೌರಕಾರ್ಮಿಕರಿಗೆ ಸೂಕ್ತ ಮಾಹಿತಿ ನೀಡಿ ಅದನ್ನು ಬಗೆಹರಿಸಬೇಕು. ಪೌರಕಾರ್ಮಿಕರ ವೇತನ ಪಾವತಿಯಲ್ಲಿ ವಿಳಂಬ ಧೋರಣೆ ತೋರಬಾರದು. ಒಂದು ವೇಳೆ ಜಿಲ್ಲಾ ಮಟ್ಟದಲ್ಲಿ ಸಮಸ್ಯೆ ಬಗೆಹರಿಯದಿದ್ದರೆ ಅದನ್ನು ರಾಜ್ಯ ಸರ್ಕಾರದ ಗಮನಕ್ಕೆ ತಂದು ಮನವರಿಕೆ ಮಾಡಿಕೊಡಬೇಕು," ಎಂದು ಪುರಸಭೆಯ ಮುಖ್ಯ ಅಧಿಕಾರಿಗೆ (Chief Officer) ಕಟ್ಟುನಿಟ್ಟಿನ ಸೂಚನೆ ನೀಡಿದರು. ಅಲ್ಲದೆ, ಕಸ ವಿಂಗಡಣೆ (ಒಣ ಕಸ ಮತ್ತು ಹಸಿ ಕಸ) ಮಾಡುವುದು ಸಾರ್ವಜನಿಕರ ಕರ್ತವ್ಯವಾಗಿದ್ದು, ಪೌರಕಾರ್ಮಿಕರಿಗೆ ಸಹಕರಿಸುವಂತೆ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಡಾ. ನಂದಾ ಹಣಬರಟ್ಟಿ ಮಾತನಾಡಿ, ಪೌರಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರ ವಿವಿಧ ಸೌಲಭ್ಯಗಳನ್ನು ಜಾರಿಗೊಳಿಸಿದೆ ಎಂದು ತಿಳಿಸಿದರು. ಪೌರಕಾರ್ಮಿಕರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕುವಂತೆ ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ವಸತಿಯುತ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ (Scholarship) ಹಾಗೂ ಪ್ರೋತ್ಸಾಹ ಧನ (Prize Money) ನೀಡುವ ಮೂಲಕ ಉನ್ನತ ಶಿಕ್ಷಣಕ್ಕೆ ಉತ್ತೇಜನ ನೀಡಲಾಗುತ್ತಿದೆ ಎಂದು ಹೇಳಿದರು.

ಪೌರಕಾರ್ಮಿಕರು ದಿನನಿತ್ಯ ವಿರಾಮವಿಲ್ಲದೆ ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಶ್ರಮಿಸುತ್ತಿದ್ದಾರೆ. ಅವರ ಆರೋಗ್ಯದ ಬಗ್ಗೆ ಸರ್ಕಾರ ವಿಶೇಷ ಕಾಳಜಿ ವಹಿಸಿದ್ದು, ನಿಯಮಿತ ಆರೋಗ್ಯ ತಪಾಸಣೆ, ಅಗತ್ಯ ಚಿಕಿತ್ಸಾ ಸೌಲಭ್ಯ ಹಾಗೂ ಸುರಕ್ಷತಾ ಪರಿಕರಗಳನ್ನು ಒದಗಿಸಲಾಗುತ್ತಿದೆ. ಕಾರ್ಮಿಕರು ಈ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ತಮ್ಮ ಸುರಕ್ಷತೆಗೆ ಹೆಚ್ಚಿನ ಗಮನ ನೀಡಬೇಕು ಎಂದು ಸಲಹೆ ನೀಡಿದರು.

ನಿಮ್ಮ ಆರೋಗ್ಯದ ಜೊತೆಗೆ ಸಮಾಜದ ಆರೋಗ್ಯ ರಕ್ಷಣೆಯ ಜವಾಬ್ದಾರಿಯೂ ನಮ್ಮೆಲ್ಲರ ಮೇಲಿದೆ. ಸ್ವಚ್ಛತೆ ಮತ್ತು ಆರೋಗ್ಯಕರ ಪರಿಸರ ನಿರ್ಮಾಣದಲ್ಲಿ ಎಲ್ಲರೂ ಕೈಜೋಡಿಸಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸೋಣ ಎಂದು ಅವರು ಕರೆ ನೀಡಿದರು.

ಪೌರಕಾರ್ಮಿಕರಿಗೆ ಕಾಲಕಾಲಕ್ಕೆ ಸರಿಯಾಗಿ ವೇತನ ಪಾವತಿಯಾಗುತ್ತಿಲ್ಲ. ತಿಂಗಳ ಕೊನೆಯಾದರೂ ಸಂಬಳ ಸಿಗದೆ ಕಾರ್ಮಿಕರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಕನಿಷ್ಠ ವೇತನ ನಂಬಿ ಬದುಕುವ ಕುಟುಂಬಗಳ ಮಾನಸಿಕ ಸ್ಥಿತಿಯನ್ನು ಸರ್ಕಾರ ಅರ್ಥಮಾಡಿಕೊಳ್ಳಬೇಕು ಮತ್ತು ಪ್ರತಿ ತಿಂಗಳು ತಪ್ಪದೇ ಅವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವೇತನ ಜಮಾ ಮಾಡಬೇಕು. ಸರ್ಕಾರ ನೀಡುವ ಗ್ಲೌಸ್, ಶೂ ಹಾಗೂ ಉಡುಪು (ಯೂನಿಫಾರ್ಮ್) ಸೇರಿದಂತೆ ಎಲ್ಲಾ ಸುರಕ್ಷತಾ ಪರಿಕರಗಳನ್ನು ಪೌರಕಾರ್ಮಿಕರು ಕಡ್ಡಾಯವಾಗಿ ಬಳಸಬೇಕು. ತಮ್ಮ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕಾರ್ಮಿಕರು ಈ ವಿಷಯದಲ್ಲಿ ಬೇಜವಾಬ್ದಾರಿತನ ತೋರಬಾರದು.

ಪೌರಕಾರ್ಮಿಕರು ಮಕ್ಕಳು ಕೇವಲ ಇದೇ ವೃತ್ತಿಗೆ ಸೀಮಿತವಾಗದೆ, ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿ ಉನ್ನತ ಶಿಕ್ಷಣ ಪಡೆದು ಕೆ.ಎ.ಎಸ್, ತಹಶೀಲ್ದಾರ್, ಪಿ.ಎಸ್.ಐ ನಂತಹ ಉನ್ನತ ಹುದ್ದೆಗಳನ್ನು ಅಲಂಕರಿಸುವ ಕನಸು ಕಾಣಬೇಕು. ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ರಾಮಕೃಷ್ಣ ಆಶ್ರಮದಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಸಿಗುವ ಶೈಕ್ಷಣಿಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಗದಗ-ಬೆಟಗೇರಿ ನಗರಸಭೆಯ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಮತ್ತು ಒಕಾರುಗಳನ್ನು ಬಿಡಿಸಿಕೊಡುವಲ್ಲಿ ಪೌರಕಾರ್ಮಿಕರ ಹೋರಾಟ ಮತ್ತು ಕೊಡುಗೆ ಅಪಾರವಾಗಿದೆ ಎಂಬುದನ್ನು ಇಲಾಖೆ ನೆನಪಿನಲ್ಲಿಟ್ಟುಕೊಂಡು ಕಾರ್ಮಿಕರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು ಎಂದರು.

1974ರಲ್ಲಿ ಇಡೀ ದೇಶದಲ್ಲೇ ಪ್ರಪ್ರಥಮ ಬಾರಿಗೆ ಮಲಹೊರುವ ಪದ್ಧತಿಯನ್ನು ನಿಷೇಧಿಸಿದ ಕೀರ್ತಿ ಕರ್ನಾಟಕ ಸರ್ಕಾರಕ್ಕೆ ಸಲ್ಲುತ್ತದೆ. ಬಿ. ಬಸವಲಿಂಗಪ್ಪ ಹಾಗೂ ಐ.ಪಿ.ಡಿ. ಸಾಲಪ್ಪನವರ ಕೊಡುಗೆಯನ್ನು ಪೌರಕಾರ್ಮಿಕರು ಎಂದಿಗೂ ಮರೆಯುವಂತಿಲ್ಲ. ಐ.ಪಿ.ಡಿ. ಸಾಲಪ್ಪನವರ ವರದಿ ಸಲ್ಲಿಕೆಯಾಗಿ 35 ವರ್ಷಗಳಾಗಿದ್ದರೂ, ಇಲಾಖೆಗಳು ಅದನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ತರದಿರುವುದು ವಿಷಾದನೀಯ ಎಂದರು.

ಪೌರಕಾರ್ಮಿಕರು ತಮಗೆ ಇಲಾಖೆಯಿಂದ ನೀಡಲಾಗುವ ಗ್ಲೌಸ್, ಶೂ ಸೇರಿದಂತೆ ಎಲ್ಲಾ ಸುರಕ್ಷತಾ ಪರಿಕರಗಳನ್ನು ಕಡ್ಡಾಯವಾಗಿ ಧರಿಸಿ ಕೆಲಸ ಮಾಡಬೇಕು. ಇದು ನಿಮ್ಮ ಆರೋಗ್ಯ ಮತ್ತು ಕಾನೂನಾತ್ಮಕ ಹಕ್ಕುಗಳ ರಕ್ಷಣೆಗೆ ಅತ್ಯಗತ್ಯವಾಗಿದೆ ಎಂದು ಸಮಿತಿಯ ಸದಸ್ಯರು ಮನವಿ ಮಾಡಿದರು.

ಗದಗ ಬೆಟಗೇರಿ ನಗರಸಭೆ AEE ( ಪರಿಸರ ) ಆನಂದ ಬದಿ ಸರ್ವರನ್ನು ಸ್ವಾಗತಿಸಿ ವಂದನಾರ್ಪಣೆ ಸಲ್ಲಿಸಿ ಕಾರ್ಯಕ್ರಮ ನಿರೂಪಿಸಿದರು.

ಈ ಕಾರ್ಯಕ್ರಮದಲ್ಲಿ ಉಪ ವಿಭಾಗಾಧಿಕಾರಿ ಗಂಗಪ್ಪ ಎಂ, ನಗರಾಭಿರುದ್ಧಿ ಕೋಶದ ಯೋಜನಾ ನಿರ್ದೇಶಕ ಬಸವನಗೌಡ ಕೊಟೂರು, ಕಾನೂನು ಸಲಹೆಗಾರ ಎಸ್.ಜಿ ಪಲ್ಲೆದ, ಪೌರಕಾರ್ಮಿಕರ ಸಂಘದ ಅಧ್ಯಕ್ಷ ಹೆಚ್.ಎಂ. ಶೆಟ್ಟಿ, ಸಂಚಾಲಕ ರಮೇಶ ಕೊಳೂರು,ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ಪೌರಕಾರ್ಮಿಕರು, ಸ್ವಚ್ಛತಾ ಕೆಲಸಗಾರರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net