ಜಿಲ್ಲೆಯಲ್ಲಿ ಬುದ್ಧ ವಿಹಾರ ನಿರ್ಮಾಣಕ್ಕೆ 10 ಕೋಟಿ ಮೂಂಜೂರು: ಎಚ್. ಕೆ. ಪಾಟೀಲ
ಗದಗ ಜಿಲ್ಲಾಡಳಿತ ಭವನದಲ್ಲಿ ಬುದ್ಧಜಯಂತಿ ಜರುಗಿತು. ಎಚ್.ಕೆ. ಪಾಟೀಲ, ಎಸ್.ವಿ. ಸಂಕನೂರು, ಡಿ. ಆರ್. ಪಾಟೀಲ, ಅಕ್ಬರಸಾಬ್ ಬಬಚಿರ್, ಬಿ. ಬಿ. ಅಸೂಟಿ, ಅಶೋಕ ಮಂದಾಲಿ, ಡಾ. ದುರಗೇಶ, ಗಂಗಪ್ಪ ಎಂ, ರೋಹನ ಜಗದೀಶ ಇತರರು ಇದ್ದರು.
ನಗರದಲ್ಲಿ ಬೌದ್ಧ ಸಂಸತಿ ಮತ್ತು ವಿಚಾರಧಾರೆಗಳನ್ನು ಉತ್ತೇಜಿಸಲು 10 ಕೋಟಿ ರೂ. ವೆಚ್ಚದಲ್ಲಿ ಭವ್ಯ ಬುದ್ಧ ವಿಹಾರ ನಿರ್ಮಾಣಕ್ಕೆ ಸರ್ಕಾರ ಅನುಮೋದನೆ ನೀಡಿದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಬುದ್ಧ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ಈಗಾಗಲೇ 3 ಕೋಟಿ ರೂ. ಬಿಡುಗಡೆ ಮಾಡಿದೆ. ನಗರದ ಮೆಡಿಕಲ್ ಕಾಲೇಜು ಸಮೀಪದ ಗುಡ್ಡ ಪ್ರದೇಶದಲ್ಲಿ ಬುದ್ಧ ವಿಹಾರ ನಿರ್ಮಾಣ ಕಾರ್ಯ ಶ್ರೀವೇ ಆರಂಭವಾಗಲಿದೆ ಎಂದು ಹೇಳಿದರು.
ಜಗತ್ತಿನಾದ್ಯಂತ ಯುದ್ಧದ ಕಾಮೋರ್ಡಗಳು ಕವಿದಿರುವ ಇಂದಿನ ವಿಷಮ ಪರಿಸ್ಥಿತಿಯಲ್ಲಿ ಭಗವಾನ್ ಬುದ್ಧನ ಶಾಂತಿ, ಅಹಿಂಸೆ ಮತ್ತು ಸಹಬಾಳ್ವೆಯ ಸಂದೇಶಗಳು ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತವಾಗಿವೆ. ರಷ್ಯಾ-ಉಕ್ರೇನ್ ಮತ್ತು ಇಸ್ರೇಲ್ -ಇರಾನ್ ಯುದ್ಧಗಳಿಂದಾಗಿ ವಿಶ್ವದ ಆಥಿರ್ಕತೆಗೂ ಭಾರಿ ಹೊಡೆತ ಬಿದ್ದಿದೆ. ಅಮೆರಿಕದಂತಹ ಮಹಾಶಕ್ತಿಯೂ ಲಕ್ಷಾಂತರ ಕೋಟಿ ಡಾಲರ್ ನಷ್ಟ ಅನುಭವಿಸಿದೆ. ಇಂತಹ ಹಿಂಸಾಚಾರದ ಹಾದಿ ಮನುಕುಲಕ್ಕೆ ಅಪಾಯಕಾರಿಯಾಗಿದೆ. ಬುದ್ಧನ ತತ್ವಗಳು ಯಾವುದೇ ಒಂದು ಧರ್ಮ ಅಥವಾ ಪ್ರದೇಶಕ್ಕೆ ಸೀಮಿತವಲ್ಲ. ಅವು ಇಡೀ ಜಗತ್ತಿನ ಆಸ್ತಿಯಾಗಿವೆ. ಬುದ್ಧ ಎಂದರೆ ಕೇವಲ ಧ್ಯಾನಸ್ಥ ಶಾಂತಿಮೂತಿರ್ ಅಲ್ಲ. ಸಮಾನತೆ ಮತ್ತು ಏಕಾಗ್ರತೆಯ ಪಾಠ ಕಲಿಸಿದ ಮಹಾನ್ ಗುರು. ಗಂಡು- ಹೆಣ್ಣು, ಶ್ರೀಮಂತ- ಬಡವ ಎಂಬ ಭೇದವಿಲ್ಲದ ಸಮ ಸಮಾಜದ ಕನಸನ್ನು ಬುದ್ಧ ಕಂಡಿದ್ದರು ಎಂದು ಅವರು ಹೇಳಿದರು.
ಇಂದಿನ ಜಗತ್ತಿಗೆ ಶಸ್ತ್ರಾಸ್ತ್ರಗಳಿಗಿಂತ ಶಾಂತಿಯ ಸಂದೇಶ ಅಗತ್ಯವಾಗಿದೆ. ಇಂದು ಜಗತ್ತಿಗೆ ಬಂದೂಕು ಬೇಡ, ಬುದ್ಧನ ಶಾಂತಿ ಮಂತ್ರ ಬೇಕು. ಬುದ್ಧನ ತತ್ವಗಳು ಜಗತ್ತಿನಲ್ಲಿ ಸಕಾರಾತ್ಮಕ ಬದಲಾವಣೆಗೆ ದಾರಿದೀಪವಾಗಲಿವೆ ಎಂದರು.
ಭಾರತ ಸಂವಿಧಾನದಲ್ಲಿಯೂ ಬುದ್ಧನ ಸಮಾನತೆ ಮತ್ತು ಮಾನವೀಯತೆಯ ಮೌಲ್ಯಗಳು ಅಡಕವಾಗಿದ್ದು, ಡಾ. ಬಾಬಾಸಾಹೇಬ್ ಅಂಬೇಡ್ಕರ ಅವರು ಬುದ್ಧನ ಚಿಂತನೆಗಳಿಂದ ಪ್ರೇರಿತರಾಗಿ ಸಂವಿಧಾನ ರೂಪಿಸಿದ್ದಾರೆ ಎಂದು ವಿವರಿಸಿದರು.
ಬುದ್ಧನ ಸಾಹಿತ್ಯವನ್ನು ಓದಿ ಅದರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಬುದ್ಧಂ ಶರಣಂ ಗಚ್ಛಾಮಿ ಎಂಬ ಮಾತಿಗೆ ಮಾತ್ರ ಸೀಮಿತವಾಗದೆ, ಬುದ್ಧನ ಚಿಂತನೆಗಳನ್ನು ಅರ್ಥಮಾಡಿಕೊಳ್ಳುವುದು ಅಗತ್ಯ ಎಂದು ಎಚ್.ಕೆ. ಪಾಟೀಲ ಹೇಳಿದರು.
ವಿಧಾನ ಪರಿಷತ್ ಸದಸ್ಯ ಎಸ್. ವಿ. ಸಂಕನೂರು ಮಾತನಾಡಿ, ಶಾಂತಿ, ಅಹಿಂಸೆ ಮತ್ತು ಮಾನವೀಯತೆ ನೆಲೆಸಲು ಬುದ್ಧನ ತತ್ವಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ಬಸವಣ್ಣನ ಸಮಾನತೆಯ ಚಿಂತನೆಗೂ ಬುದ್ಧನ ತತ್ವಗಳೇ ಆಧಾರವಾಗಿವೆ ಎಂದು ಹೇಳಿದರು.
ನಿವೃತ್ತ ಉಪನ್ಯಾಸಕ ಸತೀಶ ಪಾಶಿ ಬುದ್ಧನ ಜೀವನ ಚರಿತ್ರೆಯನ್ನು ವಿವರಿಸಿ, ಸತ್ಯ ಮತ್ತು ಶಾಂತಿಯ ಮೂಲಕ ಜಗತ್ತನ್ನು ಗೆದ್ದ ಮಹಾನ್ ವ್ಯಕ್ತಿ ಬುದ್ಧ ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ವಿದ್ಯಾಥಿರ್ಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಡಿ. ಆರ್. ಪಾಟೀಲ, ಅಕ್ಬರಸಾಬ್ ಬಬಚಿರ್, ಬಿ. ಬಿ. ಅಸೂಟಿ, ಅಶೋಕ ಮಂದಾಲಿ, ಡಾ. ದುರಗೇಶ, ಗಂಗಪ್ಪ ಎಂ, ರೋಹನ ಜಗದೀಶ ಇತರರು ಇದ್ದರು.