ಜಿಲ್ಲಾಡಳಿದಿಂದ ಬಸವೇಶ್ವರ ಜಯಂತಿ ಕಾರ್ಯಕ್ರಮ

ಗದಗ ಜಿಲ್ಲಾಡಳಿತ ಭವನದಲ್ಲಿ ಜರುಗಿದ ಬಸವ ಜಯಂತಿ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ಎಸ್​.ವಿ. ಸಂಕನೂರು, ಸಿ.ಎನ್​. ಶ್ರಿಧರ, ದುರಗೇಶ ಕೆ.ಆರ್​, ರೋಹನ್​ ಜಗದೀಶ, ಬಿ.ಬಿ. ಅಸೂಟಿ, ಬಸವರಾಜ ಬಳ್ಳಾರಿ ಸೇರಿದಂತೆ ಇತರರು ಇದ್ದರು.
ಗದಗ ಜಿಲ್ಲಾಡಳಿತ ಭವನದಲ್ಲಿ ಜರುಗಿದ ಬಸವ ಜಯಂತಿ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ಎಸ್​.ವಿ. ಸಂಕನೂರು, ಸಿ.ಎನ್​. ಶ್ರಿಧರ, ದುರಗೇಶ ಕೆ.ಆರ್​, ರೋಹನ್​ ಜಗದೀಶ, ಬಿ.ಬಿ. ಅಸೂಟಿ, ಬಸವರಾಜ ಬಳ್ಳಾರಿ ಸೇರಿದಂತೆ ಇತರರು ಇದ್ದರು.
Published on
ಬಸವಣ್ಣನವರ ತತ್ವಗಳು ಸಾರ್ವಕಾಲಿಕ ಸತ್ಯ: ಎಸ್​. ವಿ. ಸಂಕನೂರು
ವಿಜಯವಾಣಿ ಸುದ್ದಿಜಾಲ ಗದಗ
ಜಗಜ್ಯೋತಿ ಬಸವೇಶ್ವರರು ಕೇವಲ ಒಂದು ಸಮುದಾಯಕ್ಕೆ ಸೀಮಿತ ಆದವರಲ್ಲ. ಅವರು ವಿಶ್ವಮಾನವ. ಅವರ ಕಾಯಕವೇ ಕೈಲಾಸ ಮತ್ತು ದಾಸೋಹ ತತ್ವಗಳು ಇಂದಿನ ಆಧುನಿಕ ಯುಗಕ್ಕೂ ಅತ್ಯಂತ ಪ್ರಸ್ತುತವಾಗಿವೆ. ಬಸವಣ್ಣನವರ ತತ್ವಗಳು ಸಾರ್ವಕಾಲಿಕ ಸತ್ಯ ಅವರ ತತ್ವಗಳುನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿಧಾನ ಪರಿಷತ್​ ಶಾಸಕ ಎಸ್​. ವಿ. ಸಂಕನೂರು ಹೇಳಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಕರ್ನಾಟಕದ ಸಾಂಸತಿಕ ನಾಯಕ ಜಗಜ್ಯೋತಿ ಬಸವೇಶ್ವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಸವಣ್ಣನವರು 12ನೇ ಶತಮಾನದಲ್ಲಿಯೇ ಲಿಂಗ ಸಮಾನತೆ, ಜಾತಿ ಪದ್ಧತಿ ನಿರ್ಮೂಲನೆ ಮತ್ತು ಶೋಷಣೆ ಮುಕ್ತ ಸಮಾಜದ ಕನಸು ಕಂಡವರು. ಅನುಭವ ಮಂಟಪದ ಮೂಲಕ ಅವರು ಪ್ರಜಾಪ್ರಭುತ್ವದ ಅಡಿಪಾಯ ಹಾಕಿದರು. ನಾವು ಕೇವಲ ಅವರ ಫೋಟೋಗಳಿಗೆ ಪೂಜೆ ಮಾಡಿದರೆ ಸಾಲದು, ಅವರ ವಚನಗಳಲ್ಲಿನ ಸಾರವನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇಂದಿನ ಯುವ ಪೀಳಿಗೆಗೆ ಶರಣರ ವಿಚಾರಧಾರೆಗಳನ್ನು ತಲುಪಿಸುವ ಅಗತ್ಯವಿದೆ. ಸಮಾಜದಲ್ಲಿ ಶಾಂತಿ ಮತ್ತು ಸಹಬಾಳ್ವೆ ನೆಲೆಸಬೇಕಾದರೆ ಬಸವ ಪಥವೇ ನಮಗೆ ದಾರಿದೀಪ ಎಂದರು.
ಜಿಲ್ಲಾಧಿಕಾರಿ ಸಿ.ಎನ್​. ಶ್ರೀಧರ ಮಾತನಾಡಿ, ಕಾಯಕವೇ ಕೈಲಾಸ ಎಂಬ ಮಂತ್ರದೊಂದಿಗೆ ಸಮಾಜದಲ್ಲಿ ಸಮಾನತೆ ಮತ್ತು ಶ್ರಮದ ಗೌರವವನ್ನು ಎತ್ತಿ ಹಿಡಿದ ಬಸವಣ್ಣನವರ ವಿಚಾರಧಾರೆಗಳು ಕೇವಲ ಒಂದು ಕಾಲಕ್ಕೆ ಸೀಮಿತವಲ್ಲ. ಅವು ಅಂದಿಗೂ, ಇಂದಿಗೂ ಮತ್ತು ಎಂದಿಗೂ ಪ್ರಸ್ತುತ. ಕಾಯಕವೇ ಕೈಲಾಸ' ಎಂದು ಬೋಧಿಸುವ ಮೂಲಕ ಕೆಲಸದಲ್ಲಿ ದೇವರನ್ನು ಕಾಣುವಂತೆ ಪ್ರೇರೇಪಿಸಿದರು. ದುಡಿದು ತಿನ್ನುವ ಸಂಸತಿ ಮನುಷ್ಯನ ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂಬುದು ಅವರ ದೃಢ ನಂಬಿಕೆ ಆಗಿತ್ತು. ಸಮಾಜದ ವರ್ಗೀಕರಣದ ವಿರುದ್ಧ ಧ್ವನಿ ಎತ್ತಿದ ಬಸವಣ್ಣನವರು ಶ್ರೀಮಂತ ಕುಟುಂಬದಲ್ಲಿ ಜನಿಸಿದರೂ, ಅಂದಿನ ಸಮಾಜದಲ್ಲಿದ್ದ ವೃತ್ತಿ ಆಧಾರಿತ ಮೇಲು- ಕೀಳು ಮತ್ತು ವರ್ಗೀಕರಣದ ವಿರುದ್ಧ ಹೋರಾಡಿದರು. ಪ್ರತಿಯೊಂದು ವೃತ್ತಿಯೂ ತನ್ನದೇ ಆದ ವಿಶಿಷ್ಟತೆ ಮತ್ತು ಗೌರವವನ್ನು ಹೊಂದಿದೆ ಎಂದು ಅವರು ಸಾರಿದರು ಎಂದರು.
ಮೊರಾಜಿರ್ ದೇಸಾಯಿ ವಸತಿ ಪದವಿಪೂರ್ವ ಕಾಲೇಜು ಕನ್ನಡ ಉಪನ್ಯಾಸಕರಾದ ಸೋಮಶೇಖರ ಕನಕಾಚಲ ಮಾತನಾಡಿ ಬಸವೇಶ್ವರರು ಕೇವಲ ಒಂದು ಜಾತಿಗೆ ಅಥವಾ ಧರ್ಮಕ್ಕೆ ಸೀಮಿತ ಆದವರಲ್ಲ. ಅವರು ಇಡೀ ಮಾನವಕುಲದ ಆಸ್ತಿ. ಅವರ ವಚನಗಳ ಸಾರ ಮತ್ತು ತತ್ವಗಳು ಇಂದಿನ ಆಧುನಿಕ ಸಮಾಜಕ್ಕೂ ಅತ್ಯಂತ ಪ್ರಸ್ತುತವಾಗಿವೆ. ಬಸವಣ್ಣನವರು 12ನೇ ಶತಮಾನದಲ್ಲೇ ಸಮಾನತೆ, ಕಾಯಕ ಮತ್ತು ದಾಸೋಹ ತತ್ವಗಳ ಮೂಲಕ ಸಾಮಾಜಿಕ ಕ್ರಾಂತಿ ಮಾಡಿದವರು ಬಸವಣ್ಣನವರು. ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವದ ಅಡಿಪಾಯ ಹಾಕಿದ ಕೀತಿರ್ ಅವರಿಗೆ ಸಲ್ಲುತ್ತದೆ. ಕಾಯಕವೇ ಕೈಲಾಸ ಎಂಬ ತತ್ವವನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದರು.
ಇಂದಿನ ಯುವ ಪೀಳಿಗೆಯು ಬಸವಣ್ಣನವರ ವಚನಗಳನ್ನು ಕೇವಲ ಓದುವುದಲ್ಲದೆ, ಅವುಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಜಾತಿ ವ್ಯವಸ್ಥೆ, ಅಸಮಾನತೆ ತೊಲಗಿ ಸುಂದರ ಸಮಾಜ ನಿರ್ಮಾಣ ಆಗಬೇಕಾದರೆ ಬಸವ ತತ್ವವೇ ದಾರಿದೀಪ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮುದಾಯದ ಸಾಧಕರಿಗೆ ಗೌರವಿಸಿ ಸನ್ಮಾನಿಸಲಾಯಿತು. ಕನ್ನಡ ಮತ್ತು ಸಂಸತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಬಸವರಾಜ ಬಳ್ಳಾರಿ, ಪ್ರೊ. ಬಾಹುಬಲಿ ಜೈನರ, ಡಾ. ಗಿರೀಜಾ ಹಸವಿ, ಡಾ.ತೊಂಟದ ಸಿದ್ದರಾಮ ಶ್ರೀಗಳು, ಬಿ. ಬಿ. ಅಸೂಟಿ, ಡಾ. ದುರಗೇಶ. ಕೆ. ಆರ್​., ಗಂಗಪ್ಪ ಎಂ, ರೋಹನ ಜಗದೀಶ, ಸಿ. ಆರ್​. ಮುಂಡರಗಿ, ವಿನಾಯಕ ಮಾನ್ವಿ ಇತರರು ಇದ್ದರು.
ಕಾರ್ಯಕ್ರಮಕ್ಕೂ ಮುನ್ನ ತೋಂಟದಾರ್ಯ ಸಂಸ್ಥಾನ ಮಠದ ಆವರಣದಲ್ಲಿ ಬಸವೇಶ್ವರರ ಪ್ರತಿಮೆಗೆ ಗೌರವ ಮಾಲಾರ್ಪಣೆಯೊದಿಂಗೆ ಮೆರವಣಿಗೆಗೆ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್​ ಕೆ ಆರ್​ ಚಾಲನೆ ನೀಡಿದರು. ತೋಂಟದಾರ್ಯ ಮಠದಿಂದ ಆರಮಬವಾದ ಮೆರವಣಿಗೆ ಮಹೇಂದ್ರಕರ ವೃತ್ತ, ಟಾಂಗ ಕೂಟ, ಬಸವೇಶ್ವರ ವೃತ್ತ, ಕೆ. ಎಚ್​. ಪಾಟೀಲ ವೃತ್ತ, ಭೂಮರೆಡ್ಡಿ ವೃತ್ತ ಸೇರಿದಂತೆ ವಿವಿಧ ವೃತ್ತಗಳಲ್ಲಿ ಸಾಗಿ ಜಿಲ್ಲಾಡಳಿತ ತಲುಪಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net