ಗದಗ ಭಾಗಶಃ ಒಣಭೂಮಿಯನ್ನೇ ಹೊಂದಿರುವ ಈ ಭಾಗದ ರೈತರ ಪಾಲಿಗೆ ₹187 ಕೋಟಿ ವೆಚ್ಚದ ಜಾಲವಾಡಗಿ ಏತ ನೀರಾವರಿ ಯೋಜನೆ ವರದಾನವಾಗಲಿದೆ. ಇದಕ್ಕಾಗಿ ಅಂದಿನ ಸಿಎಂ ಬಸವರಾಜ್ ಬೊಮ್ಮಾಯಿ, ಸಚಿವರಾಗಿದ್ದ ಸಿ.ಸಿ.ಪಾಟೀಲ್, ಶಾಸಕರಾಗಿದ್ದ ಕಳಕಪ್ಪ ಬಂಡಿ, ಮಾಜಿ ಸಂಸದರಾದ ಶಿವಕುಮಾರ್ ಉದಾಸಿ ಅವರು ಸಾಕಷ್ಟು ಶ್ರಮಿಸಿದ್ದರು. ಜೊತೆಗೆ ಅಗತ್ಯವಿರುವ ಅನುದಾನವನ್ನು ಬಿಡುಗಡೆ ಮಾಡಿದ್ದರು. ಆದರೆ, ನಂತರ ಕಾಮಗಾರಿಗೆ ಚಾಲನೆ ಸಿಕ್ಕಿರಲಿಲ್ಲ. ಇದೀಗ ಜಾಲವಾಡಗಿ ಏತ ನೀರಾವರಿ ಯೋಜನೆಯ ಕಾಮಗಾರಿಗೆ ಚಾಲನೆ ಸಿಕ್ಕಿರುವುದು ರೈತಾಪಿ ವಲಯದಲ್ಲಿ ಹರ್ಷ ತಂದಿದೆ. ಜಾಲವಾಡಗಿ ಏತ ನೀರಾವರಿ ಯೋಜನೆಯಡಿ ಗದಗ ಮತಕ್ಷೇತ್ರದ 17 ಪ್ರಮುಖ ಕೆರೆಗಳು ರೋಣ ಮತ್ತು ಶಿರಹಟ್ಟಿ ಮತಕ್ಷೇತ್ರದ ಕೆರೆಗಳನ್ನು ತುಂಬಿಸಲಾಗುತ್ತಿದ್ದು, ಇದರಿಂದ ಈ ಭಾಗದಲ್ಲಿ ಅಂತರ್ಜಲ ಮಟ್ಟ ಗಣನೀಯವಾಗಿ ಹೆಚ್ಚಳವಾಗಲಿದೆ. ಜೊತೆಗೆ ರೈತರ ಕೃಷಿ ಭೂಮಿಗಳಿಗೂ ನೀರು ಸಿಗಲಿದ್ದು, ಅನ್ನದಾತರ ಬದುಕು ಹಸನಾಗಲಿದೆ ಎಂದಿದ್ದಾರೆ.