ಬೇಡಿಕೆ ಈಡೇರಿಸದಿದ್ದರೆ ಮತ್ತಷ್ಟು ಹೋರಾಟ

Further struggle if demand is not met
Further struggle if demand is not met
Published on
ಕೊರಟಗೆರೆ :: ಕಾರ್ಮಿಕ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ವಿವಿಧ ಸಂಟನೆಗಳ ಕಾರ್ಯಕರ್ತರು ಗ್ರೇಡ್​ -2 ತಹಸೀಲ್ದಾರ್​ ರಾಮ್​ಪ್ರಸಾದ್​ ಮುಖಾಂತರ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ತಾಲೂಕು ರೈತ ಸಂಘ ಅಧ್ಯಕ್ಷ ರಂಗಹನುಮಯ್ಯ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ಮತ್ತು ಕಾರ್ಮಿಕರ ಹಿತಕಾಯದೆ ಕಾಪೋರ್ರೇಟ್​ ಕಂಪನಿಗಳನ್ನು ಬೆಳೆಸುವ ಕಾರ್ಮಿಕ ವಿರೋಧಿ ಕಾನೂನುಗಳನ್ನು ಜಾರಿಗೆ ತರಲು ತಯಾರಿ ಮಾಡಿಕೊಂಡಿದೆ. ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಹೋರಾಟದ ಕಿಚ್ಚು ಇನ್ನಷ್ಟು ಹೆಚ್ಚಲಿದೆ ಎಂದು ಎಚ್ಚರಿಸಿದರು.
ರೈತ ಸಂಘದ ಪ್ರಧಾನ ಕಾರ್ಯದರ್ಶಿ ಶಬ್ಬೀರ್​ ಪಾಷಾ ಮಾತನಾಡಿ, ಕೇಂದ್ರ ಸರ್ಕಾರದ ತಾರತಮ್ಯಗಳಿಂದ ರೈತರು, ಕಾರ್ಮಿಕರು, ಅಂಗನವಾಡಿ ಕಾರ್ಯಕರ್ತೆಯರು, ಬಿಸಿ ಊಟದ ನೌಕರರು ಬೀದಿಗೆ ಬರುತ್ತಿದ್ದಾರೆ, ಕಾರ್ಮಿಕರಿಗೆ ಮುಖ್ಯವಾಗಿ ಬೇಕಿರುವಂತಹ ಕಾನೂನು ಜಾರಿಗೊಳಿಸುವಲ್ಲಿ ಸರ್ಕಾರಗಳು ವಿಫಲವಾಗಿದೆ ಎಂದು ಸರ್ಕಾರದ ವಿರುಧ್ಧ ಕಿಡಿಕಾರಿದರು.
ಸಿಐಟಿಯು ಅಧ್ಯಕ್ಷೆ ವನಜಾಕ್ಷಿ ಮಾತನಾಡಿ, ದೇಶದಾದ್ಯಂತ 27ಲಕ್ಷಕ್ಕೂ ಹೆಚ್ಚಿನ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಮುಷ್ಖರದಲ್ಲಿ ಪಾಲ್ಗೊಂಡಿದ್ದಾರೆ. ಸಿಐಟಿಯು ಎಲ್ಲ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಅಕ್ಷರ ದಾಸೋಹ ಅಧ್ಯಕ್ಷೆ ನಾಗರತ್ನಮ್ಮ ಮಾತನಾಡಿ, ಅಕ್ಷರ ದಾಸೋಹ ನೌಕರರ ಸಮಾನ ಕೆಲಸಕ್ಕೆ ಸಮಾನ ವೇತನ ಸಿಗುತ್ತಿಲ್ಲ. ಸರ್ಕಾರ ಕೂಡಲೇ ಕನಿಷ್ಠ ವೇತನವನ್ನಾದರೂ ಜಾರಿಗೊಳಿಸಿ ನೆರವಾಗಬೇಕಿದೆ ಎಂದು ಹೇಳಿದರು.
ಸಿಐಟಿಯು ಸಂಚಾಲಕಿ ಆದಿಲಕ್ಷ್ಮೀ, ಶಾಯಿಸ್ತಾ ಪರ್ವೀನ್​, ಅಕ್ಷರ ದಾಸೋಹ ಅಧ್ಯಕ್ಷೆ ನಾಗರತ್ನಮ್ಮ, ಸದಸ್ಯರಾದ ನಂಜಮ್ಮ,ವೀಣಾ, ಸುಮಾ, ದೊಡ್ಡಕ್ಕ, ಉಮಾದೇವಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net