ಶಿವಸೇನೆ, ಎನ್‌ಸಿಪಿ, ಎಐಎಡಿಎಂಕೆ, ಎಲ್‌ಜೆಪಿ... ರಾಜಕೀಯ ಇತಿಹಾಸದ 'ಪಕ್ಷ ಇಬ್ಬಾಗ' ಎಂಬ ಮಹಾ ಯುದ್ಧ!...ಗೆಲುವು-ಸೋಲಿನ ರೋಚಕ ಕಥೆ ಇಲ್ಲಿದೆ | Party split

 Party split
Party split
Published on
ಕೊಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ತೃಣಮೂಲ ಕಾಂಗ್ರೆಸ್ (TMC) ಪಕ್ಷವು ಇತಿಹಾಸದಲ್ಲೇ ಅತ್ಯಂತ ದೊಡ್ಡ ಸಂಘರ್ಷವನ್ನು ಎದುರಿಸುತ್ತಿದ್ದು, ಇತ್ತೀಚೆಗಷ್ಟೇ ಪಕ್ಷದಿಂದ ಅಮಾನತುಗೊಂಡಿರುವ ಶಾಸಕರಾದ ರಿತಬ್ರತಾ ಬ್ಯಾನರ್ಜಿ ಮತ್ತು ಸಂದೀಪನ್ ಸಾಹಾ ನೇತೃತ್ವದಲ್ಲಿ ಸುಮಾರು 59 ಶಾಸಕರು ದಂಗೆ ಎದ್ದಿದ್ದಾರೆ.
ಬಂಡಾಯ ಶಾಸಕರ ಸಹಿ ಇರುವ ಅಧಿಕೃತ ಪತ್ರದೊಂದಿಗೆ ಪಶ್ಚಿಮ ಬಂಗಾಳ ವಿಧಾನಸಭೆಗೆ ತೆರಳಿರುವ ಶಾಸಕ ರಿತಬ್ರತಾ ಬ್ಯಾನರ್ಜಿ, ಅದನ್ನು ಸ್ಪೀಕರ್​ ಅವರಿಗೆ ನೀಡಿ ತಾವೇ ನೈಜ ಟಿಎಂಸಿ ಎಂದು ಪ್ರತಿಪಾದಿಸಿದ್ದಾರೆ.
ಭಾರತದ ಪಕ್ಷಾಂತರ ವಿರೋಧಿ ಕಾನೂನಿನ ಪ್ರಕಾರ, ಯಾವುದೇ ಒಂದು ರಾಜಕೀಯ ಪಕ್ಷ ಇಬ್ಬಾಗವಾದರೆ ಆ ಪಕ್ಷದ ಒಟ್ಟು ಶಾಸಕರಲ್ಲಿ ಕನಿಷ್ಠ ಮೂರನೇ ಎರಡರಷ್ಟು (2/3) ಸದಸ್ಯರ ಬೆಂಬಲ ಅತ್ಯಗತ್ಯ. ಟಿಎಂಸಿ ಪಾಲಿಗೆ ಈ ಮ್ಯಾಜಿಕ್ ನಂಬರ್ 54 ಆಗಿದೆ. ಪ್ರಸ್ತುತ ಬಂಡಾಯ ಬಣದ ಬಳಿ 59 ಶಾಸಕರ ಬಲ ಇರುವುದರಿಂದ, ಇವರೆಲ್ಲರೂ ಶಾಸಕ ಸ್ಥಾನದಿಂದ ಅನರ್ಹಗೊಳ್ಳುವ ಭೀತಿಯಿಂದ ಕಾನೂನಾತ್ಮಕವಾಗಿ ಸುರಕ್ಷಿತರಾಗಿದ್ದಾರೆ. ಅಷ್ಟೇ ಅಲ್ಲದೆ, ಈ ಬಣವು ಮೂಲ ಪಕ್ಷ ಮತ್ತು ಅದರ ಅಧಿಕೃತ ಚುನಾವಣಾ ಚಿಹ್ನೆಯ ಮೇಲೂ ಹಕ್ಕು ಸಾಧಿಸಲು ಸಂಪೂರ್ಣ ಅರ್ಹತೆ ಪಡೆಯಲಿದೆ.
ಭಾರತೀಯ ರಾಜಕೀಯ ಇತಿಹಾಸದಲ್ಲಿ ಮೂಲ ಪಕ್ಷದ ನೇತೃತ್ವ ಮತ್ತು ಚುನಾವಣಾ ಚಿಹ್ನೆಗಾಗಿ ಇಂತಹ ಸಂಘರ್ಷ ನಡೆದಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಹಲವು ಪ್ರಾದೇಶಿಕ ಪಕ್ಷಗಳಲ್ಲಿ ಇಂತಹದೇ ದಂಗೆಗಳು ನಡೆದು ಪ್ರಕರಣಗಳು ಸ್ಪೀಕರ್ ಅಂಗಳ, ಚುನಾವಣಾ ಆಯೋಗ ಹಾಗೂ ಸುಪ್ರೀಂ ಕೋರ್ಟ್ ಮೆಟ್ಟಿಲೇರಿವೆ. ಅದರಲ್ಲಿ ಕೆಲವು ಬಂಡಾಯ ಬಣಗಳು ಯಶಸ್ವಿಯಾಗಿ ಪಕ್ಷವನ್ನು ವಶಪಡಿಸಿಕೊಂಡರೆ, ಇನ್ನು ಕೆಲವು ವೈಫಲ್ಯ ಕಂಡ ಇತಿಹಾಸ ಇಲ್ಲಿದೆ.

1. ಶಿವಸೇನೆ (ಮಹಾರಾಷ್ಟ್ರ - 2022)

ಮಹಾರಾಷ್ಟ್ರದಲ್ಲಿ ಹಿಂದುತ್ವ ಸಿದ್ಧಾಂತ ಮತ್ತು ಮೈತ್ರಿ ವಿಚಾರವಾಗಿ ಉಂಟಾದ ಭಿನ್ನಮತದ ಹಿನ್ನೆಲೆಯಲ್ಲಿ 2022 ರಲ್ಲಿ ಶಿವಸೇನೆ ಇಬ್ಬಾಗವಾಗಿತ್ತು. ಕಾಂಗ್ರೆಸ್ ಮತ್ತು ಎನ್‌ಸಿಪಿ ಜೊತೆ ಕೈಜೋಡಿಸಿದ್ದ ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ ವಿರುದ್ಧ ಏಕನಾಥ್ ಶಿಂಧೆ ಬಂಡಾಯ ಸಾರಿದರು. ಬಹುಪಾಲು ಶಾಸಕರನ್ನು ತಮ್ಮತ್ತ ಸೆಳೆದುಕೊಂಡ ಶಿಂಧೆ, ಉದ್ಧವ್ ಸರ್ಕಾರ ಪತನಗೊಳ್ಳುವಂತೆ ಮಾಡಿದರು. ತದನಂತರ ನಡೆದ ಕಾನೂನು ಹೋರಾಟದಲ್ಲಿ, ಚುನಾವಣಾ ಆಯೋಗವು ಬಹುಮತ ಹೊಂದಿದ್ದ ಶಿಂಧೆ ಬಣವನ್ನೇ ಅಸಲಿ ಶಿವಸೇನೆ ಎಂದು ಮಾನ್ಯ ಮಾಡಿ ಪಕ್ಷದ ಹೆಸರು ಮತ್ತು ಬಿಲ್ಲು-ಬಾಣದ ಚಿಹ್ನೆಯನ್ನು ಅವರಿಗೆ ನೀಡಿತು.

2. ಎನ್‌ಸಿಪಿ (ಮಹಾರಾಷ್ಟ್ರ - 2023)

ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದಲ್ಲಿ (NCP) 2023ರಲ್ಲಿ ದಂಗೆ ನಡೆಯಿತು. ನಾಯಕ ಅಜಿತ್ ಪವಾರ್ ತಮ್ಮ ಚಿಕ್ಕಪ್ಪ ಹಾಗೂ ಪಕ್ಷದ ಸಂಸ್ಥಾಪಕ ಶರದ್ ಪವಾರ್ ವಿರುದ್ಧವೇ ಬಂಡಾಯವೆದ್ದು, ಬಹುತೇಕ ಶಾಸಕರೊಂದಿಗೆ ಮಹಾರಾಷ್ಟ್ರದ ಶಿಂಧೆ-ಬಿಜೆಪಿ ಸರ್ಕಾರ ಸೇರಿಕೊಂಡರು. ಇಬ್ಬರೂ ನಾಯಕರು ತಾವೇ ಅಸಲಿ ಎನ್‌ಸಿಪಿ ಎಂದು ಚುನಾವಣಾ ಆಯೋಗದ ಮೆಟ್ಟಿಲೇರಿದ್ದರು. ಅಂತಿಮವಾಗಿ 2024 ರಲ್ಲಿ ಚುನಾವಣಾ ಆಯೋಗವು ಶಾಸಕರ ಬಲ ಹೊಂದಿದ್ದ ಅಜಿತ್ ಪವಾರ್ ಬಣಕ್ಕೆ ಅಧಿಕೃತ ಎನ್‌ಸಿಪಿ ಹೆಸರು ಮತ್ತು ಗಡಿಯಾರದ ಚಿಹ್ನೆಯನ್ನು ನೀಡಿತು.

3. ಎಐಎಡಿಎಂಕೆ (ತಮಿಳುನಾಡು - 2016 ರಿಂದ 2022)

2016 ರಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ನಿಧನದ ಬಳಿಕ ಎಐಎಡಿಎಂಕೆ ಪಕ್ಷದಲ್ಲಿ ಒ ಪನ್ನೀರಸೆಲ್ವಂ (OPS) ಮತ್ತು ಎಡಪ್ಪಾಡಿ ಕೆ. ಪಳನಿಸ್ವಾಮಿ (EPS) ನಡುವೆ ನಾಯಕತ್ವದ ಸಂಘರ್ಷ ಆರಂಭವಾಗಿತ್ತು. ಆರಂಭದಲ್ಲಿ ಇಬ್ಬರೂ ಜಂಟಿಯಾಗಿ ಪಕ್ಷ ಮುನ್ನಡೆಸಿದರೂ, ಅಧಿಕಾರದ ಮೇಲಾಟ ನಿಲ್ಲಲಿಲ್ಲ. 2022 ರಲ್ಲಿ ನಡೆದ ಪಕ್ಷದ ಸಭೆಯಲ್ಲಿ ಇಪಿಎಸ್ (EPS)ರನ್ನು ಏಕೈಕ ಸರ್ವೋಚ್ಚ ನಾಯಕನನ್ನಾಗಿ ಆಯ್ಕೆ ಮಾಡಿ, ಜಂಟಿ ನಾಯಕತ್ವವನ್ನು ರದ್ದುಗೊಳಿಸಲಾಯಿತು. ಒಪಿಎಸ್ ಇದನ್ನು ಕೋರ್ಟ್‌ನಲ್ಲಿ ಪ್ರಶ್ನಿಸಿದರಾದರೂ, ಬಹುತೇಕ ಪದಾಧಿಕಾರಿಗಳು ಮತ್ತು ಶಾಸಕರ ಬೆಂಬಲವಿದ್ದ ಇಪಿಎಸ್ ಪರವಾಗಿಯೇ ತೀರ್ಪುಗಳು ಬಂದವು. ಇದರೊಂದಿಗೆ ಒಪಿಎಸ್ ಬಣ ಸಂಪೂರ್ಣ ಮೂಲೆಗುಂಪಾಯಿತು.

4. ಎಲ್‌ಜೆಪಿ (ಬಿಹಾರ - 2021)

ಬಿಹಾರದ ಪ್ರಭಾವಿ ನಾಯಕ ರಾಮ್ ವಿಲಾಸ್ ಪಾಸ್ವಾನ್ ನಿಧನದ ಬಳಿಕ 2021 ರಲ್ಲಿ ಲೋಕ ಜನಶಕ್ತಿ ಪಕ್ಷದಲ್ಲಿ (LJP) ದೊಡ್ಡ ಬಿರುಕು ಮೂಡಿತು. ಅವರ ಪುತ್ರ ಚಿರಾಗ್ ಪಾಸ್ವಾನ್ ಮತ್ತು ಚಿಕ್ಕಪ್ಪ ಪಶುಪತಿ ಕುಮಾರ್ ಪಾರಸ್ ನಡುವೆ ಪಕ್ಷದ ನೇತೃತ್ವಕ್ಕಾಗಿ ಜಗಳ ಶುರುವಾಯಿತು. ಚುನಾವಣಾ ಆಯೋಗವು ತಕ್ಷಣಕ್ಕೆ ಪಾರಸ್ ನೇತೃತ್ವದ ಬಣಕ್ಕೆ ಮಾನ್ಯತೆ ನೀಡಿತಾದರೂ, ಪಕ್ಷದ ಮೂಲ ಚಿಹ್ನೆಯಾದ ಬಂಗಲೆಯನ್ನು ಫ್ರೀಜ್ (ಸ್ಥಗಿತ) ಮಾಡಿತು. ಹೀಗಾಗಿ ಇದು ಸ್ಪಷ್ಟ ಒಡಕಾಗಿ ಗುರುತಿಸಿಕೊಳ್ಳದೆ, ಎರಡು ಬಣಗಳಿಗೂ ಬೇರೆ ಬೇರೆ ಹೆಸರು ಹಾಗೂ ಹೊಸ ಚಿಹ್ನೆಗಳನ್ನು ನೀಡಿ ವಿಂಗಡಿಸಲಾಯಿತು. ತದನಂತರ ಚಿರಾಗ್ ಪಾಸ್ವಾನ್ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ಕಟ್ಟುವ ಮೂಲಕ ಜನಬೆಂಬಲ ಗಳಿಸಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net