ವಿಜಯಪುರ ನಗರದಲ್ಲಿ ಎಬಿವಿಪಿಯಿಂದ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮುಖಂಡ ಬಸವರಾಜ ಯಾದವಾಡ, ಎಂ.ಎಸ್. ಬಿರಾದಾರ, ಸಂಜು ಕುಲಕರ್ಣಿ ಇತರರಿದ್ದಾರೆ.
ವಿಜಯಪುರ:ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ಎಬಿವಿಪಿ ಉಚಿತವಾಗಿ ಸಿಇಟಿ, ನೀಟ್ ತರಬೇತಿ ನೀಡುತ್ತಿದ್ದು, ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಮುಖಂಡ ಬಸವರಾಜ ಯಾದವಾಡ ಹೇಳಿದರು.
ನಗರದಲ್ಲಿ ಗುರುವಾರ ಎಬಿವಿಪಿಯಿಂದ ಹಮ್ಮಿಕೊಂಡಿದ್ದ ಸ್ಪರ್ಧಾತ್ಮಕ ತರಬೇತಿಗಳ ಉಚಿತ ತರಬೇತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಳೆದ 30 ವರ್ಷಗಳಿಂದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ಉಚಿತ ತರಬೇತಿ ನೀಡುತ್ತಾ ಬಂದಿದೆ. ಇದರಿಂದ ಸಾಕಷ್ಟು ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಕಳೆದ 75 ವರ್ಷಗಳಿಂದ ಇಡೀ ದೇಶದಲ್ಲಿ ಪ್ರತಿಯೊಂದು ಜಿಲ್ಲಾ ಕೇಂದ್ರಗಳಲ್ಲಿಯೂ ತರಬೇತಿ ಕಾರ್ಯಕ್ರಮ ನಡೆಯುತ್ತಿದೆ. ಗ್ರಾಮೀಣ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಇದರಿಂದ ಸಾಕಷ್ಟು ಅನುಕೂಲವಾಗಿದೆ ಎಂದರು.
ಈ ತರಗತಿಗಳು ವಿದ್ಯಾರ್ಥಿಗಳ ಆತ್ಮವಿಶ್ವಾಸವನ್ನು ಹೆಚ್ಚಿಸಿ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಗಳಿಸಲು ಸಹಾಯ ಆಗುತ್ತವೆ. ವಿಜ್ಞಾನ ವಿದ್ಯಾರ್ಥಿಗಳು ತಮ್ಮ ಮುಂದಿನ ಜೀವನದಲ್ಲಿ ಭವಿಷ್ಯವನ್ನು ಉಜ್ವಲ ಮಾಡುವುದಕ್ಕಾಗಿ ಈ ಉಚಿತ ಕ್ಲಾಸ್‌ಗಳನ್ನು ಮಾಡಿಕೊಂಡು ಬರುತ್ತಿದೆ ಎಂದು ಹೇಳಿದರು.
ಜಿಲ್ಲಾ ಪ್ರಮುಖ ಎಂ.ಎಸ್. ಬಿರಾದಾರ ಮಾತನಾಡಿ, ವಿದ್ಯಾರ್ಥಿಗಳು ಈ ತರಗತಿಗಳಿಂದ ಹೆಚ್ಚಿನ ಪ್ರಯೋಜನ ಪಡೆಯಬೇಕು ಮತ್ತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬೇಕು ಎಂದರಲ್ಲದೇ, ಪರೀಕ್ಷಾ ತಂತ್ರಗಳು ಹಾಗೂ ಸಮಯ ನಿರ್ವಹಣೆ ಕುರಿತು ಮಾರ್ಗದರ್ಶನ ನೀಡಿದರು.
ಮಹಾನಗರ ಅಧ್ಯಕ್ಷ ಸಂಜು ಕುಲಕರ್ಣಿ ಮಾತನಾಡಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವ್ಯಕ್ತಿ ನಿರ್ಮಾಣದ ಜೊತೆಗೆ ರಾಷ್ಟ್ರ ಪುನರ್ನಿರ್ಮಾಣ ಬಹಳ ಮಹತ್ವವಾದ ಪಾತ್ರವನ್ನು ವಹಿಸಿದೆ. ಅದರಂತೆ ಇಲ್ಲಿಯ ವಿದ್ಯಾರ್ಥಿಗಳು ಸಹ ಮುಂದೆ ನಿಮ್ಮ ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿ ಪರಿಷತ್‌ನೊಂದಿಗೆ ಜೋಡಣೆಯಾಗಿ ದೇಶ ಸೇವೆಯಲ್ಲಿ ತೊಡಗಬೇಕೆಂದು ತಿಳಿಸಿದರು.
ನಗರ ಸಹ ಕಾರ್ಯದರ್ಶಿ ಶಶಿಕುಮಾರ ಮಾಲಿಪಾಟೀಲ, ಕಾರ್ತಿಕ್, ಸಾವಿತ್ರಿ ಡೋಳ್ಳಿ, ಶಿಲ್ಪಾ ಪಾಟೀಲ, ಪ್ರತೀಕ ಬಾಬರ, ಪ್ರಣಯ ಕುಂಬಾರ ಇತರರಿದ್ದರು. ಬಾಲಾಜಿ ಬಿರಾದಾರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಬಸನಗೌಡ ಕೋನರಡ್ಡಿ ವಂದಿಸಿದರು.