ಮಾಜಿ ಶಾಸಕ ಆರ್​.ಜಿ.ವೆಂಕಟಾಚಲಯ್ಯ ವಿಧಿವಶ / DODABALLAPU

ದೊಡ್ಡಬಳ್ಳಾಪುರ ಪ್ರವಾಸಿ ಮಂದಿರದಲ್ಲಿ ಮಾಜಿ ಶಾಸಕ ವೆಂಕಟಾಚಲಯ್ಯ ಪಾರ್ಥಿವ ಶರೀರಕ್ಕೆ ಗಣ್ಯರು ಅಂತಿಮ ನಮನ ಸಲ್ಲಿಸಿದರು. ಸಚಿವ ಕೆ.ಎಚ್​.ಮುನಿಯಪ್ಪ, ಮಾಜಿ ಶಾಸಕ ವೆಂಕಟರಮಣಯ್ಯ, ಬಮುಲ್​ ನಿರ್ದೇಶಕ ಬಿ.ಸಿ.ಆನಂದ್​ ಕುಮಾರ್​, ಮುಖಂಡರಾದ ಜಿ.ಲಕ್ಷಿ$್ಮಪತಿ, ಡಿ.ಸಿ.ಶಶಿಧರ್​, ಅಪ್ಪಿ ವೆಂಕಟೇಶ್​, ಪ್ರೇಮ್​ ಕುಮಾರ್​ ರಮೇಶ್​ ಇದ್ದರು.
ದೊಡ್ಡಬಳ್ಳಾಪುರ ಪ್ರವಾಸಿ ಮಂದಿರದಲ್ಲಿ ಮಾಜಿ ಶಾಸಕ ವೆಂಕಟಾಚಲಯ್ಯ ಪಾರ್ಥಿವ ಶರೀರಕ್ಕೆ ಗಣ್ಯರು ಅಂತಿಮ ನಮನ ಸಲ್ಲಿಸಿದರು. ಸಚಿವ ಕೆ.ಎಚ್​.ಮುನಿಯಪ್ಪ, ಮಾಜಿ ಶಾಸಕ ವೆಂಕಟರಮಣಯ್ಯ, ಬಮುಲ್​ ನಿರ್ದೇಶಕ ಬಿ.ಸಿ.ಆನಂದ್​ ಕುಮಾರ್​, ಮುಖಂಡರಾದ ಜಿ.ಲಕ್ಷಿ$್ಮಪತಿ, ಡಿ.ಸಿ.ಶಶಿಧರ್​, ಅಪ್ಪಿ ವೆಂಕಟೇಶ್​, ಪ್ರೇಮ್​ ಕುಮಾರ್​ ರಮೇಶ್​ ಇದ್ದರು.
Published on
ದೊಡ್ಡಬಳ್ಳಾಪುರ : ಹಿರಿಯ ರಾಜಕೀಯ ಮುತ್ಸದ್ದಿ, ಕ್ಷೇತ್ರದ ಮಾಜಿ ಶಾಸಕ ಆರ್​.ಜಿ.ವೆಂಕಟಾಚಲಯ್ಯ (90) ಶುಕ್ರವಾರ ಬೆಳಗ್ಗೆ ವಯೋಸಹಜ ಕಾರಣದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾದರು.
ತಾಲೂಕಿನ ರಾಜಕೀಯ ಇತಿಹಾಸದಲ್ಲಿ ಆರ್​.ಎಲ್​.ಜಾಲಪ್ಪ ಅವರ ನಿಕಟವರ್ತಿಯಾಗಿ ತಮ್ಮದೇ ಆದ ಅಸ್ತಿತ್ವ ಹೊಂದಿದ್ದ ಅವರು, ಆರ್​.ಜಿ ಎಂದೇ ಗುರುತಿಸಿಕೊಂಡಿದ್ದರು. ಅವರ ನಿಧನದಿಂದಾಗಿ ತಾಲೂಕಿನ ರಾಜಕೀಯದ ಹಿರಿಯ ಕೊಂಡಿ ಕಳಚಿದಂತಾಗಿದೆ.
ಬೆಂಗಳೂರಿನಿಂದ ದೊಡ್ಡಬಳ್ಳಾಪುರಕ್ಕೆ ಪಾರ್ಥೀವ ಶರೀರ ತರುವಾಗ ನಗರದ ರೈಲ್ವೆ ನಿಲ್ದಾಣ, ಪ್ರವಾಸಿ ಮಂದಿರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಶುಕ್ರವಾರ ಸಂಜೆ ಹಣಬೆಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಮೃತರಿಗೆ ಮೂವರು ಪುತ್ರಿಯರು ಇದ್ದಾರೆ.
ಶಾಸಕರಾಗಿ ಸೇವೆ : 1996ರಲ್ಲಿ ಆರ್​.ಎಲ್​.ಜಾಲಪ್ಪ ಲೋಕಸಭಾ ಸದಸ್ಯರಾಗಿ ಆಯ್ಕೆಯಾದಾಗ ದೊಡ್ಡಬಳ್ಳಾಪುರ ಕ್ಷೇತ್ರಕ್ಕೆ ಮರು ಚುನಾವಣೆ ನಡೆಯಿತು. ಆ ವೇಳೆ ಜಿಪಂ ಸದಸ್ಯರಾಗಿ ರಾಜಕೀಯ ಅನುಭವವಿದ್ದ ಆರ್​.ಜಿ. ವೆಂಕಟಾಚಲಯ್ಯ ಜನತಾದಳದಿಂದ ಶಾಸಕರಾಗಿ ಮರು ಚುನಾವಣೆಯಲ್ಲಿ ವಿಜೇತರಾದರು. ನಂತರ ನಡೆದ ರಾಜಕೀಯ ಬದಲಾವಣೆಯಲ್ಲಿ ಆರ್​.ಎಲ್​.ಜಾಲಪ್ಪ ಜನತಾದಳ ತೊರೆದು ಕಾಂಗ್ರೆಸ್​ ಸೇರಿದ್ದರು. ಹೀಗಾಗಿ 1999ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಆರ್​.ಜಿ.ವೆಂಕಟಾಚಲಯ್ಯ ಅವರೂ ಕಾಂಗ್ರೆಸ್​ನಿಂದ ಸ್ಪರ್ಧಿಸಿ ಪರಾಜಿತರಾದರು. 2008ರ ಮರುಚುನಾವಣೆಯಲ್ಲೂ ಸ್ಪರ್ಧಿಸಿ ಪರಾಭವಗೊಂಡರು.
ವಿವಿಧ ಸ್ಥಾನಗಳು : ಆರ್​.ಜಿ.ವೆಂಕಟಾಚಲಯ್ಯ ಪಿಎಲ್​ಡಿ ಬ್ಯಾಂಕ್​, ಜಿಲ್ಲಾ ಬ್ಯಾಂಕ್​, ಜಿಪಂ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾಣ ನಿಲ್ದಾಣ ಪ್ರಾಧಿಕಾರ (ಬಯಾಪ) ಅಧ್ಯಕ್ಷರಾಗಿ, ಕೆಪಿಸಿಸಿ ಸದಸ್ಯರಾಗಿ ಹಾಗೂ ಶಾಸಕರಾಗಿ ಸೇವೆ ಸಲ್ಲಿಸಿದ್ದರು. 2008ರಲ್ಲಿ ಜೆ.ನರಸಿಂಹಸ್ವಾಮಿ ಅವರು ಆಪರೇಷನ್​ ಕಮಲದ ಮೂಲಕ ಕಾಂಗ್ರೆಸ್​ ತೊರೆದು ಬಿಜೆಪಿ ಸೇರ್ಪಡೆಯಾದಾಗ ನಡೆದ ವಿಧಾನಸಭಾ ಮರು ಚುನಾವಣೆಯಲ್ಲಿ ಕಾಂಗ್ರೆಸ್​ನಿಂದಲೇ ಸ್ಪರ್ಧಿಸಿ ಪರಾಭವಗೊಂಡಿದ್ದರು. ಈ ಚುನಾವಣೆಯನ್ನು ಗುರು&ಶಿಷ್ಯರ ನಡುವಿನ ಚುನಾವಣೆ ಕಾಳಗ ಎಂದೇ ಬಿಂಬಿಸಲಾಗಿತ್ತು. ಆರ್​.ಎಲ್​.ಜಾಲಪ್ಪ ಅವರು ಶಾಸಕರಾಗಿ, ಸಂಸತ್​ ಸದಸ್ಯರಾಗಿದ್ದರೂ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಆರ್​.ಜಿ. ಅವರು ಎಲ್ಲ ಆಡಳಿತದ ಹೊಣೆ ನಿಭಾಯಿಸುತ್ತಿದ್ದರು.
ನಮ್ಮೂರ ನ್ಯಾಯ ದೇವರು: ಹಣಬೆ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಯಾವುದೇ ಕೌಟುಂಬಿಕ ಕಲಹ, ಅಣ್ಣ&ತಮ್ಮಂದಿರ ಆಸ್ತಿ ವಿವಾದ ಏನೇ ಬಂದರೂ ಮೊದಲು ಜನ ನ್ಯಾಯ ಕೇಳಲು ಆರ್​.ಜಿ. ಅವರ ಬಳಿಗೆ ಬರುತ್ತಿದ್ದರು. ಇಂತಹ ನೂರಾರು ನ್ಯಾಯ ಬಗೆಹರಿಸುವ ಮೂಲಕ ಜನರು ಪೊಲೀಸ್​ ಠಾಣೆ, ನ್ಯಾಯಾಲಯದ ಮೆಟ್ಟಿಲು ಹತ್ತುವುದನ್ನು ತಪ್ಪಿಸುತ್ತಿದ್ದರು. ಬ್ರಾಹ್ಮಣ ಸಮುದಾಯದವರಾದರೂ ಎಂದೂ ಜಾತಿ ಆಧಾರಿತ ರಾಜಕಾರಣ ಮಾಡದೆ ದಲಿತರು, ಹಿಂದುಳಿದವರ ಪರ ಕಾಳಜಿವಹಿಸಿ, ಎಲ್ಲರೊಂದಿಗೆ ಬೆರೆಯುತ್ತಿದ್ದರು.
ದು@ಖದ ನಡುವೆಯೂ ಸಾಮಾಜಿಕ ಸೇವೆ : ವೆಂಕಟಾಚಲಯ್ಯ ಅವರ ಪತ್ನಿ 2021ರ ಮೇ ನಲ್ಲಿ ನಿಧನರಾದರು. ನಿಧನರಾದ 5 ದಿನಗಳ ಅಂತರದಲ್ಲಿಯೇ ಮಗ ಶ್ರೀವತ್ಸ (ಗುಂಡಣ್ಣ) ಅಕಾಲಿಕಮರಣ ಆರ್​.ಜಿ ಅವರನ್ನು ದು@ಖ ಸಾಗರದರಲ್ಲಿ ಮುಳುಗಿಸಿತ್ತು. ಆದರೂ ನೋವು ಸಹಿಸಿಕೊಂಡು ಎಂದಿನಂತೆ ಸಾಮಾಜಿಕ ಸೇವೆ ಮಾಡಿಕೊಂಡು ಮಾದರಿಯಾಗಿದ್ದರು ಎಂದು ಗ್ರಾಮದ ಹಿರಿಯರು ಸ್ಮರಿಸಿದರು.
ಗಣ್ಯರ ಸಂತಾಪ : ಆರ್​.ಜಿ.ವೆಂಕಟಾಚಲಯ್ಯ ನಿಧನಕ್ಕೆ ಸಿಎಂ ಡಿಕೆ ಶಿವಕುಮಾರ್​ ತಮ್ಮ ಎಕ್ಸ್​ ಖಾತೆಯಲ್ಲಿ ಸಂತಾಪ ಸೂಚಿಸಿದ್ದಾರೆ. ಮಾಜಿ ಸಿಎಂ ವೀರಪ್ಪ ಮೊಯ್ಲಿ, ಸಚಿವ ಕೆ.ಎಚ್​.ಮುನಿಯಪ್ಪ, ಮಾಜಿ ಸ್ಪೀಕರ್​ ರಮೇಶ್​ ಕುಮಾರ್​, ಶಾಸಕ ಧೀರಜ್​ ಮುನಿರಾಜು, ಮಾಜಿ ಶಾಸಕ ವೆಂಕಟರಮಣಯ್ಯ, ಬಮುಲ್​ ನಿರ್ದೇಶಕ ಬಿ.ಸಿ.ಆನಂದ್​ ಕುಮಾರ್​, ಜೆಡಿಎಸ್​ ಮುಖಂಡರಾದ ಬಿ.ಮುನೇಗೌಡ, ಹುಸ್ಕೂರು ಆನಂದ್​, ಕಾಂಗ್ರೆಸ್​ ಮುಖಂಡರು ಅಂತಿಮ ದರ್ಶನ ಪಡೆದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net