ಹನೂರು: ತಾಲೂಕಿನ ಮಂಗಲ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ವಿದ್ಯಾರ್ಥಿಗಳು ಚುನಾವಣೆ ಮಾದರಿಯಲ್ಲಿಯೇ ಮತ ಚಲಾಯಿಸುವುದರ ಮೂಲಕ ಶಾಲಾ ಮಂತ್ರಿಮಂಡಲವನ್ನು ರಚಿಸಲಾಯಿತು.
ಶಾಲಾ ಸಂಸತ್ ಚುನಾವಣೆಯಲ್ಲಿ 10ನೇ ತರಗತಿಯ 4 ಸ್ಥಾನಕ್ಕೆ 8, 9 ಹಾಗೂ 8ನೇ ತರಗತಿಯ ತಲಾ 3 ಸ್ಥಾನಕ್ಕೆ 14 ವಿದ್ಯಾರ್ಥಿಗಳು ಸ್ಪರ್ಧಿಸಿದ್ದರು. ಶಾಲೆಯ 90 ವಿದ್ಯಾರ್ಥಿಗಳು ಮತ ಚಲಾಯಿಸಿದರು. 10ನೇ ತರಗತಿಯಿಂದ ತಮನ್ನಾ, ದುರ್ಗೇಶ್, ಜೀವನ್, ವಿನುತಾ ಹೆಚ್ಚು ಮತ ಪಡೆದು ಜಯಗಳಿಸಿದರೆ, 9ನೇ ತರಗತಿಯ ಯಶವಂತ್, ಶ್ರವಂತ್, ಸಚಿನ್ ಹಾಗೂ 8ನೇ ತರಗತಿಯಿಂದ ಐಶ್ವರ್ಯಾ, ಅಮುದಾ, ಶಿವಕುಮಾರ್ ಆಯ್ಕೆಯಾದರು. ಇವರನ್ನು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದರು.
ಸಾರ್ವತ್ರಿಕ ಚುನಾವಣೆ ಮಾದರಿಯಲ್ಲಿಯೇ ಶಾಲಾ ಸಂಸತ್ ಚುನಾವಣೆ ನಡೆಸಲಾಯಿತು. ಮತದಾನಕ್ಕೆ ಪ್ರತ್ಯೇಕ ಕೊಠಡಿ ನಿಗದಿಪಡಿಸಲಾಗಿತ್ತು. ಮತಪಟ್ಟಿಯನ್ನು ಸಿದ್ಧಪಡಿಸಲಾಗಿತ್ತು. ಏಜೆಂಟರನ್ನು ನೇಮಕ ಮಾಡಲಾಗಿತ್ತು. ಸರದಿ ಸಾಲಿನಲ್ಲಿ ಆಧಾರ್ ಕಾರ್ಡ್ ಹಿಡಿದು ತೆರಳಿದ ವಿದ್ಯಾರ್ಥಿಗಳು ಶಿಕ್ಷಕರಿಂದ ಅನುಮತಿ ಪಡೆದು ಮತಪತ್ರದಲ್ಲಿ ತಮ್ಮ ಹಕ್ಕು ಚಲಾಯಿಸಿದರು. ವಿದ್ಯಾರ್ಥಿಗಳ ಬೆರಳಿಗೆ ಶಾಯಿ ಹಾಕಲಾಯಿತು. ಈ ಮೂಲಕ ವಿದ್ಯಾರ್ಥಿಗಳಲ್ಲಿ ಚುನಾವಣೆಯ ಪರಿಕಲ್ಪನೆಯನ್ನು ಮೂಡಿಸಲಾಯಿತು. ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳುವಂತೆ ತಿಳಿಸಲಾಯಿತು.
ಚುನಾವಣಾಧಿಕಾರಿಯಾಗಿ ಮುಖ್ಯಶಿಕ್ಷಕ ಮಹೇಶ್, ಸಹಾಯಕ ಚುನಾವಣಾಧಿಕಾರಿಯಾಗಿ ಮಹದೇವಸ್ವಾಮಿ ಕಾರ್ಯನಿರ್ವಹಿಸಿದರು. ಶಿಕ್ಷಕರಾದ ಶಂಭಯ್ಯ, ಸತೀಶ್, ವೆಂಕಟೇಶ್, ಸೂರ್ಯಕಾಂತ್, ಪುಟ್ಟಸ್ವಾಮಿ ಹಾಗೂ ಅಂಜಲಿ ಚುನಾವಣಾ ಕಾರ್ಯದಲ್ಲಿ ಭಾಗಿಯಾಗಿದ್ದರು.