ಶತಮಾನಗಳಿಂದಲೂ ಕರ್ನಾಟಕದ ಮಣ್ಣು ಯೋಗವನ್ನು ಉಳಿಸಿಕೊಂಡು ಬಂದು, ಶ್ರೀಮಂತಗೊಳಿಸಿದೆ: ಪ್ರಧಾನಿ ಮೋದಿ | PM Modi

ಕರ್ನಾಟಕದ ಮಣ್ಣು ಶತಮಾನಗಳಿಂದಲೂ ಯೋಗವೆಂಬ ಶಿಸ್ತಿನ ಮೂಲತತ್ವವನ್ನು ಉಳಿಸಿಕೊಂಡು ಬಂದಿದ್ದು, ಅದನ್ನು ಶ್ರೀಮಂತಗೊಳಿಸಿದೆ. ಇಂದು(ನ. 13) ಬೆಂಗಳೂರಿನಲ್ಲಿ ನನಗೆ ಯೋಗದ ಶಕ್ತಿ ಅನುಭವಕ್ಕೆ ಬರುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಶತಮಾನಗಳಿಂದಲೂ ಕರ್ನಾಟಕದ ಮಣ್ಣು ಯೋಗವನ್ನು ಉಳಿಸಿಕೊಂಡು ಬಂದು, ಶ್ರೀಮಂತಗೊಳಿಸಿದೆ: ಪ್ರಧಾನಿ ಮೋದಿ | PM Modi
Published on: 

ಬೆಂಗಳೂರು: ಕರ್ನಾಟಕದ ಮಣ್ಣು ಶತಮಾನಗಳಿಂದಲೂ ಯೋಗವೆಂಬ ಶಿಸ್ತಿನ ಮೂಲತತ್ವವನ್ನು ಉಳಿಸಿಕೊಂಡು ಬಂದಿದ್ದು, ಅದನ್ನು ಶ್ರೀಮಂತಗೊಳಿಸಿದೆ. ಇಂದು(ನ. 13) ಬೆಂಗಳೂರಿನಲ್ಲಿ ನನಗೆ ಯೋಗದ ಶಕ್ತಿ ಅನುಭವಕ್ಕೆ ಬರುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಶುಕ್ರವಾರ(ನ. 13) ಜಿಗಣಿಯಲ್ಲಿರುವ ಎಸ್-ವ್ಯಾಸ ವಿಶ್ವವಿದ್ಯಾಲಯದ 'ಪ್ರಶಾಂತಿ ಕುಟೀರಂ' ಆವರಣದಲ್ಲಿ ನಡೆದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿರುವ ಅವರು, ಡಾ. ರಾಜ್‌ಕುಮಾರ್ ಅವರು ತಮ್ಮ ಕಲೆಗೆ ಎಷ್ಟು ಸೇವೆ ಸಲ್ಲಿಸಿದ್ದರೋ, ಅಷ್ಟೇ ಸೇವೆಯನ್ನು ಯೋಗಕ್ಕೂ ಸಲ್ಲಿಸಿದ್ದಾರೆ ಎಂದಿದ್ದಾರೆ.

ಕರ್ನಾಟಕದ ಇತಿಹಾಸದಲ್ಲಿ ಪ್ರಶಾಂತಿ ಕುಟೀರಂಗೆ ಸ್ಥಾನವಿದ್ದು, ಇದೊಂದು ಸಾಮಾನ್ಯ ಯೋಗ ಕೇಂದ್ರದಿಂದ ಹೇಗೆ ಒಂದು ದೊಡ್ಡ ಚಳುವಳಿಯಾಗಿ ರೂಪಾಂತರಗೊಂಡಿತು ಎಂಬುದು ಪ್ರತಿಯೊಬ್ಬ ಭಾರತೀಯರಿಗೂ ತಿಳಿಯಬೇಕಾದ ವಿಷಯ. ಇದು ಸ್ಪೂರ್ತಿದಾಯಕ ಎಂದು ತಿಳಿಸಿದ್ದಾರೆ.

ಇದೇ ವೇಳೆ ಬೆಂಗಳೂರು ಮೂಲದ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಪ್ರಮುಖ ಚಿಂತಕ ಎಚ್.ವಿ. ಶೇಷಾದ್ರಿ ಅವರ ಜನ್ಮದಿನವನ್ನೂ ಸ್ಮರಿಸಿರುವ ಅವರು, ರಾಷ್ಟ್ರವೊಂದನ್ನು ಯಶಸ್ಸಿನ ಉತ್ತುಂಗಕ್ಕೆ ಕೊಂಡೊಯ್ಯಲು ಸಮರ್ಪಣಾಭಾವವುಳ್ಳ, ಸಮರ್ಥ ಮತ್ತು ಶಿಸ್ತುಬದ್ಧ ನಾಗರಿಕರ ಅಗತ್ಯವಿದೆ ಎಂಬುದನ್ನು ಅವರು ಅರಿತಿದ್ದರು. ಅಂತಹ ವ್ಯಕ್ತಿಗಳನ್ನು ರೂಪಿಸುವುದಕ್ಕಾಗಿಯೇ ಅವರು ತಮ್ಮ ಜೀವನವನ್ನು ಮೀಸಲಿಟ್ಟರು ಎಂದು ತಿಳಿಸಿದ್ದಾರೆ.

Also Read
ಉದಯನಿಧಿ ಸ್ಟಾಲಿನ್ ಗೆಲುವು ಪ್ರಶ್ನಿಸಿ ಸಲ್ಲಿಸಿದ ಅರ್ಜಿ ವಜಾಗೊಳಿಸಲು ನಿರಾಕರಿಸಿದ ಮದ್ರಾಸ್ ಹೈಕೋರ್ಟ್ | Udhayanidhi Stalin
ಶತಮಾನಗಳಿಂದಲೂ ಕರ್ನಾಟಕದ ಮಣ್ಣು ಯೋಗವನ್ನು ಉಳಿಸಿಕೊಂಡು ಬಂದು, ಶ್ರೀಮಂತಗೊಳಿಸಿದೆ: ಪ್ರಧಾನಿ ಮೋದಿ | PM Modi

ಸ್ವಾಮಿ ವಿವೇಕಾನಂದರಂತಹ ಋಷಿಗಳಿಂದ ಪಡೆದ ಸ್ಫೂರ್ತಿಯು 'ಪ್ರಶಾಂತಿ ಕುಟೀರಂ'ನಂತಹ ಸಂಸ್ಥೆಗಳ ಸ್ಥಾಪನೆಗೆ ಕಾರಣವಾಯಿತು. ಇಲ್ಲಿ ಯೋಗವನ್ನು ಜನಸಾಮಾನ್ಯರಿಗೆ ತಲುಪಿಸುವ ಆಂದೋಲನವೊಂದನ್ನು ಆರಂಭಿಸಿದ್ದು ಮಾತ್ರವಲ್ಲದೆ, ಆಧುನಿಕ ವಿಜ್ಞಾನದ ಮಾನದಂಡಗಳಿಗೆ ಅನುಗುಣವಾಗಿ ಕಠಿಣ ಪರೀಕ್ಷೆಗಳಿಗೆ ಒಳಪಡುವಂತಹ ಹೊಸ ಸಂಶೋಧನೆಗಳನ್ನೂ ನಡೆಸಲಾಯಿತು. ಒತ್ತಡ ಮತ್ತು ಜೀವನಶೈಲಿ ಸಂಬಂಧಿತ ಕಾಯಿಲೆಗಳ ಸವಾಲುಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ಇಲ್ಲಿ ನಡೆಸಲಾದ ಸಂಶೋಧನೆಗಳು ಇಡೀ ಜಗತ್ತಿಗೇ ಉಪಯುಕ್ತವಾಗಿವೆ ಎಂದು ಹೇಳಿದ್ದಾರೆ.

ಕಳೆದ 12 ವರ್ಷಗಳಲ್ಲಿ, ಭಾರತವು ತನ್ನ ಪರಂಪರೆ ಮತ್ತು ವಿಜ್ಞಾನವನ್ನು ಜಗತ್ತಿನ ಮುಂದೆ ಹೆಮ್ಮೆಯಿಂದ ಪ್ರದರ್ಶಿಸುತ್ತಾ ಬಂದಿದೆ. ಭಾರತದ ಕಾರಣದಿಂದಲೇ ಇಡೀ ಜಗತ್ತು ಇಂದು ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸುತ್ತಿದೆ. ಸೌದಿ ಅರೇಬಿಯಾದಲ್ಲಿ ಯೋಗವನ್ನು ಒಂದು ಕ್ರೀಡಾ ಚಟುವಟಿಕೆಯಾಗಿ ಗುರುತಿಸಲಾಗಿದೆ ಎಂದಿದ್ದಾರೆ.

ನಾನು ಜಗತ್ತಿನಲ್ಲಿ ಎಲ್ಲಿಗೆ ಹೋದರೂ, ಊಟದ ಸಮಯದಲ್ಲಿ ನನ್ನ ಪಕ್ಕದಲ್ಲಿ ಕುಳಿತವರು ಯೋಗದ ಬಗ್ಗೆ ಮಾತನಾಡುತ್ತಾರೆ. ಆಗ ನಾನು, 'ನಾನು ಕೇವಲ ಯೋಗಾಭ್ಯಾಸಿ, ಪರಿಣತನಲ್ಲ' ಎಂದು ಅವರಿಗೆ ಹೇಳಬೇಕಾಗುತ್ತದೆ. ಯೋಗವು ಭಾರತವನ್ನು ಎಲ್ಲೆಡೆ ಪರಿಚಯಿಸಿದೆ. ಇದು ಭಾರತಕ್ಕೆ ಒಂದು ಹೆಬ್ಬಾಗಿ ಗುರುತಿಸಿಕೊಂಡಿದೆ. ವಿದೇಶಿ ಪ್ರಜೆಗಳು ಯೋಗಕ್ಕೆ ಸಂಪೂರ್ಣವಾಗಿ ಸಮರ್ಪಿಸಿಕೊಂಡಿರುವುದನ್ನು ನಾನು ಗಮನಿಸಿದ್ದೇನೆ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).