ನಗರದ ಕ್ಲಬ್‌ಗಳ ಮೇಲೆ ಆಹಾರ ಸುರಕ್ಷತೆ ಅಧಿಕಾರಿಗಳಿಂದ ದಾಳಿ

Food safety officers inspection club kitchen
Food safety officers inspection club kitchen
Published on

ಪ್ರಮುಖ ಮುಖ್ಯಾಂಶಗಳು

  • - ಗುಣಮಟ್ಟದ ನಿಯಮ ಪಾಲಿಸದವರಿಗೆ ನೋಟಿಸ್ ಜಾರಿ
  • - ಒಳಚರಂಡಿ ಅವ್ಯವಸ್ಥೆ, ಜಿರಳೆ, ಅಶುಚಿತ್ವ ಬಹಿರಂಗ

ಬೆಂಗಳೂರು:

ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಅಧಿಕಾರಿಗಳು ನಗರದ ಪ್ರಮುಖ 8 ಕ್ಲಬ್‌ಗಳ ಮೇಲೆ ದಿಢೀರ್ ದಾಳಿ ನಡೆಸಿದ ವೇಳೆ ಆಹಾರ ಸಂಗ್ರಹಣಾ ಸ್ಥಳದಲ್ಲಿ ನೈರ್ಮಲ್ಯ ಕಾಯ್ದುಕೊಳ್ಳದಿರುವುದು, ಜಿರಳೆ ಸೇರಿ ಕೀಟಗಳ, ಅಸಮರ್ಪಕ ಆಹಾರ ಉತ್ಪನ್ನಗಳ ಸಂಗ್ರಹಣೆ, ಅವಧಿ ಮೀರಿದ ಆಹಾರ ಪದಾರ್ಥಗಳು ಪತ್ತೆಯಾಗಿವೆ.

ನಗರದ ಕ್ಲಬ್‌ಗಳಲ್ಲಿನ ಆಹಾರ ಗುಣಮಟ್ಟ ಪರಿಶೀಲಿಸಲು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006, ನಿಯಮಗಳು 2011ರ ಅನ್ವಯ ಆಹಾರ ಸುರಕ್ಷತಾ ಇಲಾಖೆಯು ಅಧಿಕಾರಿಗಳ ತಂಡಗಳನ್ನು ರಚಿಸಿತ್ತು. ಈ ತಂಡಗಳು ಮಂಗಳವಾರ ನಗರದ ವಿವಿಧ ಕ್ಲಬ್‌ಗಳ ಮೇಲೆ ದಾಳಿ ನಡೆಸಿ, ನಿಯಮ ಉಲ್ಲಂಘನೆ ಮಾಡಿರುವವರಿಗೆ ನೋಟಿಸ್ ಜಾರಿಗೊಳಿಸಿದೆ.
ಬೌರಿಂಗ್ ಕ್ಲಬ್, ಸೆಂಚುರಿ ಕ್ಲಬ್, ಕೆಎಸ್‌ಸಿಎ ಕ್ಲಬ್, ಕ್ಯಾಥೋಲಿಕ್ ಕ್ಲಬ್, ಟೆನ್ನಿಸ್ ಕ್ಲಬ್, ವಿಜಯನಗರ ಕ್ಲಬ್, ಮಹಾಲಕ್ಷ್ಮಿ ಲೇಔಟ್ ಕ್ಲಬ್ ಹಾಗೂ ಮಲ್ಲೇಶ್ವರ ಕ್ಲಬ್‌ಗಳಲ್ಲಿ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದೆ.

ನಿಯಮ ಉಲ್ಲಂಸಿದವರಿಗೆ ನೋಟಿಸ್:

ಬೌರಿಂಗ್ ಕ್ಲಬ್‌ನಲ್ಲಿ ಪರಿಶೀಲನೆ ವೇಳೆ ಬೇಳೆಕಾಳುಗಳಲ್ಲಿ ಹುಳುಗಳು ಕಾಣಿಸಿಕೊಂಡಿವೆ. ದಾಸ್ತಾನು ಕೇಂದ್ರದಲ್ಲಿ ಅಶುಚಿತ್ವ ಹಾಗೂ ಜಿರಳೆಗಳು ಕಂಡುಬಂದಿವೆ. ಅದೇ ರೀತಿ ಸೆಂಚುರಿ ಕ್ಲಬ್‌ನಲ್ಲಿಯೂ ಜಿರಳೆ ಸೇರಿ ಕೀಟಗಳು ಪತ್ತೆಯಾಗಿದ್ದು, ನೈರ್ಮಲ್ಯದ ಕೊರತೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಎರಡೂ ಕ್ಲಬ್‌ಗಳಿಗೂ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.
ಕೆಎಸ್‌ಸಿಎ ಕ್ಲಬ್‌ನಲ್ಲಿ ವೈಯಕ್ತಿಕ ಸ್ವಚ್ಛತೆ ಹಾಗೂ ಆಹಾರ ಪೊಟ್ಟಣಗಳ ಲೇಬಲ್‌ಗೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸಿರುವುದು ಗಮನಕ್ಕೆ ಬಂದಿದ್ದು, ಅಸಮರ್ಪಕ ಒಳಚರಂಡಿ ವ್ಯವಸ್ಥೆ, ಶೀತಲೀಕರಣ ಘಟಕದಲ್ಲಿ ಅನೈರ್ಮಲ್ಯ, ಸಸ್ಯಹಾರಿ ಮತ್ತು ಮಾಂಸಾಹಾರಿ ಆಹಾರ ಪದಾರ್ಥವನ್ನು ಪ್ರತ್ಯೇಕವಾಗಿ ಸಂಗ್ರಹಿಸದಿರುವುದು, ಪಾತ್ರೆ ತೊಳೆಯುವಲ್ಲಿ ಬಿಸಿನೀರಿನ ವ್ಯವ್ಯವಸ್ಥೆಯ ಕೊರತೆ ಕಂಡುಬಂದಿದ್ದು, ನೋಟಿಸ್ ನೀಡಲಾಗಿದೆ.
ಕ್ಯಾಥೋಲಿಕ್ ಕ್ಲಬ್‌ನಲ್ಲಿ ಅವಧಿ ಮೀರಿದ 10 ಪ್ಯಾಕೇಟ್ ಅಣಬೆಗಳು ಪತ್ತೆಯಾಗಿವೆ. ಆಹಾರ ಪದಾರ್ಥಗಳ ಮೇಲೆ ಲೇಬಲ್ ಇಲ್ಲದಿರುವುದು, ಸ್ವಚ್ಛತೆ ಕೊರತೆಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. ಟೆನ್ನಿಸ್ ಕ್ಲಬ್‌ನಲ್ಲಿ ಆಹಾರ ನಿರ್ವಹಣಾ ಸಿಬ್ಬಂದಿ ವೈದ್ಯಕೀಯ ಪ್ರಮಾಣಪತ್ರಗಳನ್ನು ಹೊಂದಿರಲಿಲ್ಲ. ವಿಜಯನಗರ ಕ್ಲಬ್, ಮಹಾಲಕ್ಷ್ಮಿ ಲೇಔಟ್ ಕ್ಲಬ್ ಮತ್ತು ಮಲ್ಲೇಶ್ವರಂ ಕ್ಲಬ್‌ಗಳಲ್ಲಿ ಪದಾರ್ಥಗಳ ಮೇಲೆ ಅವಧಿ ಕುರಿತು ಲೇಬಲಿಂಗ್ ಇಲ್ಲದಿರುವುದು, ಸ್ವಚ್ಛತೆ ಮತ್ತು ನೈರ್ಮಲ್ಯದ ಕೊರತೆ ಕಾರಣ ನೋಟಿಸ್ ನೀಡಲಾಗಿದೆ.

ಹೋಟೆಲ್ ಪ್ರತಿನಿಧಿಗಳ ಜತೆಗೆ ಸಭೆ

ಹೋಟೆಲ್ ಸೇರಿ ಆಹಾರ ಉದ್ದಮೆಗಳ ಮೇಲೆ ದಾಳಿ ನಡೆಸಿದ ಸಂದರ್ಭ ಲೋಪದೋಷಗಳು ಕಂಡುಬಂದ ಹೋಟೆಲ್‌ಗಳಿಗೆ ಆಹಾರ ಸುರಕ್ಷತೆ ಇಲಾಖೆ ನೋಟಿಸ್ ನೀಡಿದೆ. ಮಾರ್ಗಸೂಚಿ ಸಹ ಹೊರಡಿಸಲಾಗಿದೆ. ಈ ನಿಟ್ಟಿನಲ್ಲಿ ಮುಂದಿನ 15 ದಿನಗಳಲ್ಲಿ ಹೋಟೆಲ್ ಅಸೋಸಿಯೇಷನ್, ರೆಸ್ಟೋರೆಂಟ್ ಅಸೋಸಿಯೇಷನ್ ಹಾಗೂ ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರ ಜತೆಗೆ ಸಭೆ ನಡೆಸಲಾಗುವುದು. ಕಳೆದೊಂದು ತಿಂಗಳಲ್ಲಿ ನಡೆಸಿದ ತಪಾಸಣೆಯಲ್ಲಿ ಕಂಡುಬಂದ ಲೋಪದೋಷಗಳ ಬಗ್ಗೆ ಅವರೊಂದಿಗೆ ಚರ್ಚೆ ನಡೆಸಿ, ಅಡುಗೆ ಕೊಠಡಿ ನಿರ್ವಹಣೆ, ಆಹಾರ ತಯಾರಿ ಸೇರಿ ವಿವಿಧ ವಿಷಯಗಳ ಬಗ್ಗೆ ನಿರ್ದೇಶನ ನೀಡಲಾಗುವುದು. ಅಸೋಸಿಯೇಷನ್ ಪ್ರಮುಖರಿಗೆ ತರಬೇತಿ ಒದಗಿಸುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ. ಜತೆಗೆ ಇಂದಿರಾ ಕ್ಯಾಂಟೀನ್ ಅನ್ನು ಇನ್ನಷ್ಟು ಸರಿಪಡಿಸಬೇಕಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದರು.

ಕೋಟ್ಕ್ಲಬ್‌ಗಳಲ್ಲಿ ತಪಾಸಣೆ ವೇಳೆ ಕುಡಿಯುವ ನೀರು ಹಾಗೂ ಬಳಸಿದ ಅಡುಗೆ ಎಣ್ಣೆ ಮಾದರಿಗಳನ್ನೂ ಸಂಗ್ರಹಿಸಿ, ಹೆಚ್ಚಿನ ವಿಶ್ಲೇಷಣೆಗೆ ಸರ್ಕಾರಿ ಆಹಾರ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ. ವರದಿಗಳನ್ನು ಸ್ವೀಕರಿಸಿದ ನಂತರ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು.

— ಕೆ. ಶ್ರೀನಿವಾಸ, ಆಹಾರ ಇಲಾಖೆ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net