ಪೊಲೀಸರಿಂದ ಭಯಪಟ್ಟು ಓಡುವುದು ಕರ್ತವ್ಯಕ್ಕೆ ಅಡ್ಡಿ ಅಲ್ಲ| High court

High court
High court
Published on

ಬೆಂಗಳೂರು: 

ಪೊಲೀಸರು ತಡೆದಾಗ ಓಡಿಹೋಗುವುದನ್ನೇ ಪೊಲೀಸರ ಕರ್ತವ್ಯಕ್ಕೆ ಅಡ್ಡಿ, ಕ್ರಿಮಿನಲ್​ ಬಲಪ್ರಯೋಗ ಅಥವಾ ಹಲ್ಲೆ ಎಂದು ಪರಿಗಣಿಸುವುದಾದರೆ, ಅದು ಕಾನೂನಿನ ದುರುಪಯೋಗಕ್ಕೆ ಸ್ಪಷ್ಟ ಉದಾಹರಣೆಯಾಗಲಿದೆ ಎಂದಿರುವ ಹೈಕೋರ್ಟ್​, ಯುವಕನೊಬ್ಬನ ಮೇಲೆ ದಾಖಲಾಗಿದ್ದ ಪ್ರಕರಣ ರದ್ದುಪಡಿಸಿ ಆದೇಶಿಸಿದೆ.

ರಾಮಮೂರ್ತಿ ನಗರ ಪೊಲೀಸ್​ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಪ್ರಶ್ನಿಸಿ ಎಸ್​.ಎಂ. ಗೌತಮ್​ ರಾಜ್​ ಎಂಬಾತ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಅರ್ಜಿದಾರ ಗೌತಮ್​ ಓಡಿಹೋಗಿದ್ದಾನೆ ಎಂಬ ಕಾರಣಕ್ಕೆ ಆತನ ವಿರುದ್ಧ ಐಪಿಸಿ ಸೆಕ್ಷನ್​ 353 (ಸರ್ಕಾರಿ ನೌಕರನ ಕರ್ತವ್ಯಕ್ಕೆ ಅಡ್ಡಿಪಡಿಸಲು ಹಲ್ಲೆ) ಅಡಿಯಲ್ಲಿ ಚಾರ್ಜ್​ಶೀಟ್​ ಸಲ್ಲಿಸಲಾಗಿತ್ತು. ಆದರೆ, ಈ ಸೆಕ್ಷನ್​ ಅಡಿಯಲ್ಲಿ ಪ್ರಕರಣ ದಾಖಲಾಗಲು ಭೌತಿಕ ಹಲ್ಲೆ ಅಥವಾ ಬಲಪ್ರಯೋಗದ ಅಗತ್ಯವಿದೆ. ಕೇವಲ ಭಯದಿಂದ ಓಡಿಹೋಗುವುದನ್ನು "ಹಲ್ಲೆ' ಎಂದು ಕರೆಯಲಾಗುವುದಿಲ್ಲ ಎಂದು ಹೇಳಿ ಪ್ರಕರಣ ರದ್ದುಗೊಳಿಸಿದೆ.

ಪ್ರಕರಣದ ಹಿನ್ನೆಲೆ:

2023ರ ಡಿಸೆಂಬರ್​ 15ರಂದು ರಾತ್ರಿ 1.30ರ ಸಮಯದಲ್ಲಿ ಕಸ್ತೂರಿ ನಗರದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರು ಅನುಮಾನಾಸ್ಪದವಾಗಿ ನಿಂತಿದ್ದ ರೋಹಿತ್​ ಹಾಗೂ ಗೌತಮ್​ ಎಂಬ ಯುವಕರನ್ನು ತಡೆದು ಬೈಕ್​ ದಾಖಲಾತಿಗಳನ್ನು ಕೇಳಿದ್ದರು. ದಾಖಲೆ ನೀಡದಿದ್ದಾಗ ಅವರನ್ನು ಠಾಣೆಗೆ ಕರೆದೊಯ್ಯಲು ಯತ್ನಿಸಿದಾಗ ಯುವಕರು ದ್ವಿಚಕ್ರ ವಾಹನಗಳಿಂದ ಜಿಗಿದು, ಪೊಲೀಸರ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ರಾಮಮೂರ್ತಿನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದರು.

ℹ️

ದಾಖಲೆಗಳಲ್ಲಿ ಗೊಂದಲ 

ಎಫ್​ಐಆರ್​ನಲ್ಲಿ ಇಬ್ಬರೂ ಯುವಕರ ಹೆಸರುಗಳನ್ನು ಸ್ಪಷ್ಟ ಉಲ್ಲೇಖಿಸಲಾಗಿತ್ತು. ಆದರೆ, ಆಸ್ಪತ್ರೆಯ ಗಾಯದ ಪ್ರಮಾಣಪತ್ರದಲ್ಲಿ ಅಪರಿಚಿತ ವ್ಯಕ್ತಿಗಳಿಂದ ಹಲ್ಲೆ ಎಂದು ನಮೂದಿಸಲಾಗಿದೆ. ಘಟನೆ ನಡೆದ ಸಮಯ ಮತ್ತು ಆಸ್ಪತ್ರೆಗೆ ದಾಖಲಾದ ಸಮಯವನ್ನು ಗಮನಿಸಿದರೆ ದೂರು ಮೊದಲು ಬಂದಿತೋ ಅಥವಾ ವೈದ್ಯಕಿಯ ಪ್ರಮಾಣಪತ್ರ ಮೊದಲು ಬಂದಿತೋ ಎಂಬುದು ಭಾರಿ ನಿಗೂಢವಾಗಿದೆ ಎಂದು ನ್ಯಾಯಪೀಠ ವಿಚಾರಣೆ ವೇಳೆ ಅಚ್ಚರಿ ವ್ಯಕ್ತಪಡಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net