ಸಿಎಂ ಡಿಕೆಶಿ ಸಂಪುಟದ ಮೊದಲ ವಿಕೆಟ್ ಪತನ: ಕಣ್ಣೀರಿಡುತ್ತಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಾಗೇಂದ್ರ! | B Nagendra Resign

B Nagendra Resign | ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಾಗೇಂದ್ರ!
B Nagendra Resign | ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಾಗೇಂದ್ರ!
Published on

ಬೆಂಗಳುರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಆರೋಪ ಹೊತ್ತು ವಿರೋಧ ಪಕ್ಷಗಳ ತೀವ್ರ ಆಕ್ರೋಶಕ್ಕೆ ತುತ್ತಾಗಿದ್ದ ಸಚಿವ ಬಿ. ನಾಗೇಂದ್ರ ಅವರು ಕೊನೆಗೂ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ (

B Nagendra Resign)

 ಘೋಷಿಸಿದ್ದಾರೆ. ಈ ಮೂಲಕ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್​ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮೊದಲ ವಿಕೆಟ್ ಪತನಗೊಂಡಂತಾಗಿದೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿ. ನಾಗೇಂದ್ರ ಅವರು, ತಮ್ಮ ವಿರುದ್ಧದ ಆರೋಪಗಳನ್ನು ತೀವ್ರವಾಗಿ ನಿರಾಕರಿಸಿದ್ದಲ್ಲದೆ ಸ್ವಇಚ್ಛೆಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಘೋಷಿಸಿದರು.

ಸದನ ನಡೆಯಲು ಬಿಡದ ವಿರೋಧ ಪಕ್ಷದವರು ಮನುಸ್ಮೃತಿಯನ್ನೇ ಸಂವಿಧಾನ ಎಂದು ಭಾವಿಸಿದ್ದಾರೆ. ಆದರೆ ಇದು ಸಂವಿಧಾನದ ಕಾಲ, ಅಂಬೇಡ್ಕರ್ ಯುಗ. ಈ ಯುಗದಲ್ಲಿ ಶಂಬೂಕನ ಹತ್ಯೆ ಆಗುವುದಿಲ್ಲ, ನ್ಯಾಯದೇವತೆ ನಮ್ಮ ರಕ್ಷಣೆಗಿದೆ. ಶೂದ್ರರು, ಮಹಿಳೆಯರು ಹಾಗೂ ಅಲ್ಪಸಂಖ್ಯಾತರು ಬದುಕಲೇಬಾರದು ಎನ್ನುವ ಮನೋಭಾವವನ್ನು ಬಿಜೆಪಿ ಹೊಂದಿದೆ. ಕೆಪಿಎಸ್‌ಸಿ ಹಗರಣ, ಕಾವೇರಿ ನೀರು ಹಾಗೂ ಕಸ್ತೂರಿ ರಂಗನ್ ವರದಿ ಸೇರಿದಂತೆ ಪ್ರಮುಖ ವಿಚಾರಗಳ ಕುರಿತು ಚರ್ಚೆಗೆ ಬನ್ನಿ ಎಂದು ಹಲವು ಬಾರಿ ಮನವಿ ಮಾಡಿದರೂ ವಿಪಕ್ಷಗಳು ಅವಕಾಶ ನೀಡಲಿಲ್ಲ. ಬದಲಿಗೆ ಮುಗ್ಧ ಜನರ ಮೇಲೆ ಪ್ರಭಾವ ಬೀರಲು ಪಾದಯಾತ್ರೆ ನಡೆಸುತ್ತಿದ್ದಾರೆ. ಮಾಧ್ಯಮಗಳ ಮೂಲಕ ಸತ್ಯ ಹೊರತರಲು ಯತ್ನಿಸಿದರೂ ಅದಕ್ಕೂ ಅವಕಾಶ ನೀಡಲಿಲ್ಲ. ದಲಿತರು ಸಚಿವರಾಗಬಾರದು ಎಂದು ಮನುವಾದಿಗಳು ಸಂಚು ರೂಪಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಮ್ಮ ಮೇಲಿನ ತನಿಖೆಯ ಬಗ್ಗೆ ವಿವರ ನೀಡಿದ ನಾಗೇಂದ್ರ, ಎಸ್ಐಟಿ ಮತ್ತು ಸಿಒಡಿ ತನಿಖೆ ಸರಿಯಾಗಿಯೇ ನಡೆದಿದೆ. ತನಿಖೆಯ ಭಾಗವಾಗಿ ಮೂರು ತಿಂಗಳು ಜೈಲಿಗೆ ಹೋಗಿದ್ದೆ. ಮೊದಲ ಚಾರ್ಜ್‌ಶೀಟ್‌ನಲ್ಲಿ ನನ್ನ ಹೆಸರಿರಲಿಲ್ಲ, ಆದರೆ ಎರಡನೇ ಚಾರ್ಜ್‌ಶೀಟ್‌ನಲ್ಲಿ ನನ್ನ ಹೆಸರನ್ನು ಸೇರಿಸಲಾಯಿತು. ಈ ಮುಂಚೆಯೂ ಸ್ಪಷ್ಟಪಡಿಸಿದಂತೆ ವಾಲ್ಮೀಕಿ ನಿಗಮದ ಹಣ ದುರುಪಯೋಗದಲ್ಲಿ ನನ್ನ ಯಾವುದೇ ಪಾತ್ರವಿಲ್ಲ. ಶೇಕಡಾ 100 ರಷ್ಟು ಹಣ ಈಗಾಗಲೇ ವಾಪಸ್ ಆಗಿದೆ. ರಾಜಭವನದಲ್ಲಿ ನಮಗೆ ಪ್ರಮಾಣ ವಚನ ಬೋಧಿಸಿದ ರಾಜ್ಯಪಾಲರು, ತಮ್ಮದೇ ಪಕ್ಷದ ನಾಯಕರ ವಿರುದ್ಧದ ತನಿಖೆಗೆ ಏಕೆ ಸಮ್ಮತಿ ನೀಡುತ್ತಿಲ್ಲ..? ಕುಮಾರಸ್ವಾಮಿ ಅವರ ಪ್ರಕರಣವನ್ನು ಏಕೆ ಕಳುಹಿಸಲಿಲ್ಲ..? ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪ್ರಕರಣಕ್ಕೆ ಒಂದು ನ್ಯಾಯ, ನನಗೊಂದು ನ್ಯಾಯವೇ..? ಎಂದು ಪ್ರಶ್ನಿಸಿದರು.

ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಲು ಸಿದ್ಧ!

ಸುದ್ದಿಗೋಷ್ಠಿಯ ವೇಳೆ ಭಾವುಕರಾಗಿ ಕಣ್ಣೀರಿಟ್ಟ ನಾಗೇಂದ್ರ, ನನ್ನಿಂದ ಪಕ್ಷಕ್ಕೆ ಹಾಗೂ ವರಿಷ್ಠ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮುಜುಗರ ಆಗಬಾರದು, ಸಮಾಜಕ್ಕೆ ತಪ್ಪು ಸಂದೇಶ ಹೋಗಬಾರದು ಎಂಬ ಕಾರಣಕ್ಕೆ ಸ್ವಇಚ್ಛೆಯಿಂದ ಮುಖ್ಯಮಂತ್ರಿಗಳಿಗೆ ಸಚಿವ ಸ್ಥಾನದ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ಖರ್ಗೆ ಅವರಂತಹ ಹಿರಿಯರನ್ನೇ ಬಿಡದವರು, ನಮ್ಮಂತಹ ಶೋಷಿತರು ಮತ್ತು ಅಲ್ಪಸಂಖ್ಯಾತರನ್ನು ಬಿಡುತ್ತಾರೆಯೇ..? ಆದರೆ ನಾನು ಪುರಾಣ ಕಾಲದ ಶಂಬೂಕನಲ್ಲ, ಶಂಬೂಕನಾಗಲು ತಯಾರೂ ಇಲ್ಲ. ಸಿಎಂ, ಸಿಎಲ್‌ಪಿ ನಾಯಕರು ಹಾಗೂ ದೆಹಲಿ ವರಿಷ್ಠರು ನಾಗೇಂದ್ರ ತಪ್ಪು ಮಾಡಿಲ್ಲ ಎಂದು ನನ್ನ ಬೆನ್ನಿಗೆ ನಿಂತಿದ್ದಾರೆ. ಕೋಮುವಾದಿ ಪಕ್ಷಗಳ ವಿರುದ್ಧ ನನ್ನ ಹೋರಾಟ ಮುಂದುವರಿಯಲಿದೆ. ಸವಾಲು ಹಾಕುತ್ತಿದ್ದೇನೆ, ಬೇಕಿದ್ದರೆ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಲು ಸಿದ್ಧ, ಬನ್ನಿ ಜನತಾ ನ್ಯಾಯಾಲಯಕ್ಕೆ ಹೋಗೋಣ ಎಂದು ವಿಪಕ್ಷಗಳ ನಾಯಕರಿಗೆ ಸವಾಲು ಹಾಕಿದರು.

ನಾನು ಆರೋಪಮುಕ್ತನಾಗಿ ಹೊರಬರುತ್ತೇನೆ!

ಬಳ್ಳಾರಿಯ ಮುಗ್ಧ ಜನರನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ವಿಪಕ್ಷದಲ್ಲಿರುವವರೆಲ್ಲ ರಿಜೆಕ್ಟ್ ಪೀಸ್‌ಗಳು. ನಾನು ಅವರ ವಿರುದ್ಧ ಅಖಾಡಕ್ಕೆ ಇಳಿಯಲು ಸಂಪೂರ್ಣ ಸಿದ್ಧನಾಗಿದ್ದೇನೆ. ಈ ದೇಶದಲ್ಲಿ ಜನತಾ ನ್ಯಾಯಾಲಯಕ್ಕಿಂತ ದೊಡ್ಡ ನ್ಯಾಯಾಲಯ ಮತ್ತೊಂದಿಲ್ಲ. ವಾಲ್ಮೀಕಿ ಹಗರಣದ ಈ ಪ್ರಕರಣದಲ್ಲಿ ನಾನು ಸಂಪೂರ್ಣವಾಗಿ ಆರೋಪಮುಕ್ತನಾಗಿ ಹೊರಬರುತ್ತೇನೆ. ನನ್ನನ್ನು ವಾಲ್ಮೀಕಿ ಸಮುದಾಯದಲ್ಲಿ ವಿಲನ್ ಮಾಡಲು ಸಂಚು ರೂಪಿಸಲಾಗಿದೆ. ಆದರೆ ನಮ್ಮದು ಮಹಾಕಾವ್ಯ ರಾಮಾಯಣವನ್ನು ಬರೆದ ಪವಿತ್ರ ಸಮುದಾಯ ಎಂಬುದು ನೆನಪಿರಲಿ. ಈ ರೀತಿಯ ಸಂಚಿನಿಂದ ವಿಪಕ್ಷಗಳಿಗೆ ಎಂದಿಗೂ ಒಳ್ಳೆಯದಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಪಕ್ಷದ ನಾಯಕರ ನೀಡಿದ ಬೆಂಬಲವನ್ನು ನೆನಪಿಸಿಕೊಂಡ ನಾಗೇಂದ್ರ, ಮುಖ್ಯಮಂತ್ರಿಗಳು ಸದನದಲ್ಲಿ ಪ್ರತಿಯೊಂದು ಸಂದರ್ಭದಲ್ಲೂ ನನ್ನ ಪರವಾಗಿ ನಿಂತು ಬೆಂಬಲಿಸಿದ್ದಾರೆ. ವರಿಷ್ಠರಾದ ಕೆ ಸಿ ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲಾ, ಮಾಜಿ ಸಿಎಂ ಸಿದ್ದರಾಮಯ್ಯ, ನಾಸಿರ್ ಹುಸೇನ್, ಜಿ ಸಿ ಚಂದ್ರಶೇಖರ್, ಸಚಿವರಾದ ಜಮೀರ್ ಅಹ್ಮದ್, ಪ್ರಿಯಾಂಕ್ ಖರ್ಗೆ ಸಂಸದ ಈ. ತುಕಾರಾಂ ಹಾಗೂ ಶಾಸಕ ಭರತ್ ರೆಡ್ಡಿ ಸೇರಿದಂತೆ ಪಕ್ಷದ ಪ್ರತಿಯೊಬ್ಬ ಶಾಸಕರು ನನಗೆ ಧೈರ್ಯ ಹಾಗೂ ನೈತಿಕ ಬೆಂಬಲ ನೀಡಿದ್ದಾರೆ. ಆದಾಗ್ಯೂ, ನನ್ನಿಂದ ಸರ್ಕಾರಕ್ಕೆ ಮತ್ತು ಪಕ್ಷಕ್ಕೆ ಯಾವುದೇ ಮುಜುಗರ ಉಂಟಾಗಬಾರದು ಎಂಬ ಒಂದೇ ಕಾರಣಕ್ಕೆ, ಸಂಪೂರ್ಣ ಸ್ವಇಚ್ಛೆಯಿಂದ ನನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಪುನರುಚ್ಛರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net