ರಸ್ತೆ ಬದಿ ಕಸ ಎಸೆದರೆ ದಂಡ / ANEKAL

ಹೆಬ್ಬಗೋಡಿ ನಗರಸಭೆ ವ್ಯಾಪ್ತಿಯಲ್ಲಿ ಬೀದಿಬದಿ ಕಸ ಹಾಕುವವರಿಗೆ ಅಧಿಕಾರಿಗಳು ದಂಡ ವಿಧಿಸಿದರು.
ಹೆಬ್ಬಗೋಡಿ ನಗರಸಭೆ ವ್ಯಾಪ್ತಿಯಲ್ಲಿ ಬೀದಿಬದಿ ಕಸ ಹಾಕುವವರಿಗೆ ಅಧಿಕಾರಿಗಳು ದಂಡ ವಿಧಿಸಿದರು.
Published on
ಆನೇಕಲ್​ : ನಗರಸಭೆ ಸೂಚನೆಯನ್ನು ಧಿಕ್ಕರಿಸಿ ರಸ್ತೆ ಬದಿಗಳಲ್ಲಿ ಕಸ ಎಸೆಯುತ್ತಿದ್ದವರಿಗೆ ಅಧಿಕಾರಿಗಳು ದಂಡ ಹಾಕುವ ಮೂಲಕ ಬಿಸಿ ಮುಟ್ಟಿಸಿದ್ದಾರೆ. ತಾಲೂಕಿನ ಹೆಬ್ಬಗೋಡಿಯಲ್ಲಿ ಹಸಿ ಮತ್ತು ಒಣ ಕಸ ವಿಂಗಡಿಸದೆ ಎಲ್ಲೆಂದರಲ್ಲಿ ಎಸೆಯುತ್ತಿದ್ದವರಿಗೆ ನಗರಸಭೆ ಅಧಿಕಾರಿಗಳು ಒಟ್ಟಾರೆ 25 ಸಾವಿರ ರೂ. ದಂಡ ವಿಧಿಸಿದ್ದಾರೆ.
ನಗರಸಭೆ ವ್ಯಾಪ್ತಿಯ 7ನೇ ವಾರ್ಡ್​ನಲ್ಲಿ ವಾಸವಿರುವ ಹೊರರಾಜ್ಯದವನೊಬ್ಬ ಕಸ ವಿಂಗಡಿಸದೆ ರಸ್ತೆ ಬದಿಯಲ್ಲಿ ಹಾಕಲು ಹೋಗುತ್ತಿದ್ದರು. ಈ ವೇಳೆ ನಗರಸಭೆ ಸಿಬ್ಬಂದಿ ಅವರನ್ನು ತಡೆದು ಅವರಿಂದಲೇ ಕಸ ಬೇರ್ಪಡಿಸಿ, ವಿಲೇ ಮಾಡಿಸಿದ್ದಲ್ಲದೇ ದಂಡ ಹಾಕಿಸಿದ್ದಾರೆ. ಈ ವೇಳೆ ಯುವಕನು ಅಧಿಕಾರಿಗಳ ಜತೆಗೆ ತಗಾದೆ ತೆಗೆದಿದ್ದಾನೆ. ನಾನು ಇಲ್ಲೆ ಕಸ ಹಾಕುತ್ತೇನೆ. ಏನು ಬೇಕಾದರೂ ಮಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಆವಾಜ್​ ಹಾಕಿದ್ದ. ನಗರಸಭೆ ಕಚೇರಿಗೆ ಬನ್ನಿ ಎಂದು ಅಧಿಕಾರಿಗಳು ಹೇಳಿದಾಗ ನಾನ್​ ಏಕೆ ಕಚೇರಿಗೆ ಬರಬೇಕು? ನೀವೇ ನನ್ನ ಮನೆ ಬಾಗಿಲಿಗೆ ಬನ್ನಿ ಎಂದು ಅಧಿಕಾರಿಗಳ ವಿರುದ್ಧವೇ ಎಗರಾಡಿದ್ದ. ಕೊನೆಗೆ ಅಧಿಕಾರಿಗಳು ಹೆಬ್ಬಗೋಡಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದು, ಪೊಲೀಸರು ಸ್ಥಳಕ್ಕೆ ಬಂದು ತಿಳಿಹೇಳಿದರು.
ಹೆಬ್ಬಗೋಡಿ ಪೌರಾಯುಕ್ತ ಬಿ.ಎಲ್​.ರಾಜೇಂದ್ರ ಮಾತನಾಡಿ, ಕಸವನ್ನು ಬೇರ್ಪಡಿಸಿ ನಗರಸಭೆ ವಾಹನ ಮನೆಗಳ ಬಳಿ ಬಂದಾಗ ನೀಡಬೇಕು. ಎಲ್ಲ ವಾರ್ಡ್​ಗಳಲ್ಲಿ ಜಾಗೃತಿ ಮೂಡಿಸಲಾಗಿದೆ. ಸಾರ್ವಜನಿಕರ ಸಹಕಾರ ಇಲ್ಲದೆ ಯಾವುದೇ ಕೆಲಸವನ್ನು ಸರಿಯಾದ ರೀತಿಯಲ್ಲಿ ಮಾಡಲು ಸಾಧ್ಯವಿಲ್ಲ. ಜನ ಮೊದಲು ಎಚ್ಚೆತ್ತುಕೊಳ್ಳಬೇಕು. ಕಸವನ್ನು ಪ್ರತ್ಯೇಕವಾಗಿ ವಿಂಗಡಿಸಿ ನಗರಸಭೆಯ ವಾಹನಕ್ಕೆ ನೀಡಬೇಕು. ಈ ಬಗ್ಗೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಲಾಗಿದೆ. ಆದರೂ ಸಹ ಸಾರ್ವಜನಿಕರು ಇದಕ್ಕೆ ಸಹಕಾರ ನೀಡದ ಕಾರಣ ದಂಡಹಾಕಲಾಗುತ್ತಿದೆ ಎಂದರು.
ಪೌರಕಾರ್ಮಿಕರಿಗೆ ಅನುಕೂಲ: ರಸ್ತೆ ಬದಿಯಲ್ಲಿ ಕಸ ಎಸೆಯುವುದರಿಂದ ಹೆಬ್ಬಗೋಡಿಯ ಸೌಂದರ್ಯಕ್ಕೆ ಧಕ್ಕೆ ಉಂಟಾಗಲಿದೆ. ಬೀದಿ ನಾಯಿಗಳ ಕಾಟ ಹೆಚ್ಚಾಗುವ ಬಗ್ಗೆ ದೂರುಗಳು ಬರುತ್ತವೆ. ಕಸ ವಿಂಗಡಣೆಯಿಂದ ಪೌರಕಾರ್ಮಿಕರಿಗೆ ಹೆಚ್ಚು ಸಹಕಾರಿಯಾಗುತ್ತದೆ. ಕಸ ವಿಂಗಡಿಸದವರ ವಿರುದ್ಧ ದಂಡ ಹಾಕುವುದು ಅನಿವಾರ್ಯ ಎಂದು ಪಾರಾಯುಕ್ತರು ಎಚ್ಚರಿಸಿದರು.
ಹೆಬ್ಬಗೋಡಿ ನಗರಸಭೆ ಸದಸ್ಯ ಮಂಜುನಾಥ್​ ರೆಡ್ಡಿ, ನಗರಸಭೆ ಪರಿಸರ ಇಂಜಿನಿಯರ್​ ಈರಣ್ಣ, ಆರೋಗ್ಯ ನಿರೀಕ ಜನ ಕುಮಾರ್​, ಸಿಬ್ಬಂದಿ ಮಂಗಳ ಗೌರಿ, ಸುಧಾ ಹಿರೇಮಠ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net