ತುರುವೇಕೆರೆ: ತಾಲೂಕಿನಲ್ಲಿ ಪ್ರತಿದಿನ 1.20 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ಇದರಿಂದ ತಿಂಗಳಿಗೆ ಬರುವ 13.50 ಕೋಟಿ ರೂ. ಹಣವನ್ನು ಹಾಲು ಉತ್ಪಾದಕರ ಖಾತೆಗೆ ನೇರವಾಗಿ ಹಾಕಲಾಗುತ್ತಿದೆ ಎಂದು ತುಮುಲ್ ನಿರ್ದೇಶಕ ಸಿ.ವಿ.ಮಹಲಿಂಗಯ್ಯ ಹೇಳಿದರು.
ಪಟ್ಟಣದ ಸಮೀಪದ ವಿಶ್ವನಾಥಪುರ ಮಾಳೆಯಲ್ಲಿ ಪ್ರಾರಂಭಗೊಂಡ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘವನ್ನು ಉದ್ಘಾಟಿಸಿ ಮಾತನಾಡಿ, ಜಿಲ್ಲೆಯಲ್ಲಿ ಪ್ರತಿದಿನ ಸುಮಾರು 12 ಲಕ್ಷ ಲೀಟರ್ ಹಾಲು ಶೇಖರಣೆಯಾಗುತ್ತಿದೆ. ಜಿಲ್ಲೆಯಲ್ಲಿ ಸಂಗ್ರಹಿಸುವ ಹಾಲನ್ನು ವಿವಿಧ ರಾಜ್ಯಗಳಿಗೂ ಮಾರಾಟ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಗುಣಮಟ್ಟದ ಹಾಲು ಶೇಖರಣೆಯಾಗುತ್ತಿದೆ. ಗುಣಮಟ್ಟದ ಹಾಲನ್ನು ಸಹಕಾರ ಸಂಘಗಳಿಗೆ ನೀಡಿದರೆ ಮಾತ್ರ ಉತ್ತಮ ದರ ಲಭಿಸಲಿದೆ ಎಂದರು.
ಜಿಲ್ಲೆಯ ಹಾಲು ಒಕ್ಕೂಟಕ್ಕೆ ಹಾಲು ಸರಬರಾಜು ಮಾಡುವ ರೈತರಿಗೆ ಉತ್ತಮ ಸೇವೆಯೂ ದೊರೆಯಲಿದೆ. ರೈತರಿಗೆ ಅಗತ್ಯವಿರುವ ಪರಿಕರಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗುವುದು ಎಂದು ಮಾಹಿತಿ ನೀಡಿದರು.