

ಹುಮನಾಬಾದ್: ದುಬಲಗುಂಡಿ ಗ್ರಾಮದಲ್ಲಿ ಸೂಕ್ತ ಸಮಯಕ್ಕೆ ಆರೋಗ್ಯ ಸೇವೆ ದೊರೆಯದೆ ಮೃತಪಟ್ಟ ತುಕಾರಾಮ ನಿಂಬೂರೆ ಅವರ ಕುಟುಂಬಕ್ಕೆ ಬಸವರಾಜ ಪಾಟೀಲ್ ಫೌಂಡೇಷನ್ ವತಿಯಿಂದ ಶನಿವಾರ 51 ಸಾವಿರ ರೂ. ಆರ್ಥಿಕ ನೆರವು ನೀಡಲಾಯಿತು ಪಟ್ಟಣದ ಗೃಹ ಕಚೇರಿಯಲ್ಲಿ ಮಾಜಿ ಸಚಿವ ರಾಜಶೇಖರ ಪಾಟೀಲ್ ಹಾಗೂ ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ್ ಮೃತರ ಕುಟುಂಬಕ್ಕೆ ಧನಸಹಾಯದ ಚೆಕ್ ವಿತರಿಸಿದರು. ಬಳಿಕ ಮಾತನಾಡಿದ ರಾಜಶೇಖರ ಪಾಟೀಲ್, ದುಬಲಗುಂಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಂಬುಲೆನ್ಸ್ ಚಾಲಕರನ್ನು ನೇಮಿಸಲಾಗಿದೆ. ಗ್ರಾಮೀಣ ಭಾಗದ ರೋಗಿಗಳಿಗೆ ತ್ವರಿತ ಚಿಕಿತ್ಸೆ ದೊರೆಯುವಂತೆ ಆರೋಗ್ಯ ಕೇಂದ್ರಕ್ಕೆ ಸರ್ಕಾರದಿಂದ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಾಗರಾಜ ಭೋಜಗುಂಡಿ, ಪ್ರಮುಖರಾದ ಪ್ರದಿಪ ಪಸಾರ್ಗಿ, ಅಶೋಕ ಚಳಕಾಪುರೆ, ಪ್ರಭು ನೇಳಗಿ, ದತ್ತು ಢಗೆ, ತಾನಾಜಿ ಪಾಟೀಲ, ವಿಠಲ ಡಾವರಗಾಂವ, ರಾಹುಲ್ ಉದ್ದಾ, ಕಿರಣ ಹಮೀಲಪುರಕರ್, ರಾಜಕುಮಾರ ಹಳ್ಳಿಖೇಡ, ಅನಿಲಕುಮಾರ ಸಿಂಧೆ ಇತರರಿದ್ದರು.