ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜತೆ ಪ್ರಮಾಣ ವಚನ ಸ್ವೀಕರಿಸಿದ್ದ ಸಚಿವರಿಗೆ ಗುರುವಾರ ಖಾತೆ ಹಂಚಿಕೆಯಾಗಿದೆ. ಹಣಕಾಸು ಖಾತೆಯನ್ನು ಸಿಎಂ ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ಚರ್ಚೆಯಲ್ಲಿದ್ದಂತೆ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರಿಗೆ ಕಂದಾಯ ಹಾಗೂ ಯುವಜನ ಸೇವೆ, ಕ್ರೀಡಾ ಇಲಾಖೆ ಹಂಚಿಕೆ ಮಾಡಿದ್ದರೆ, ಪ್ರಿಯಾಂಕ್ ಖರ್ಗೆ ಅವರಿಗೆ ಐಟಿಬಿಟಿ ಜತೆಗೆ ಗೃಹ ಇಲಾಖೆ ಜವಾಬ್ದಾರಿ ನೀಡಲಾಗಿದೆ. ಈ ಹಿಂದೆ ಡಿ.ಕೆ.ಶಿವಕುಮಾರ್ ನಿಭಾಯಿಸುತ್ತಿದ್ದ ಜಲಸಂಪನ್ಮೂಲ ಖಾತೆಯನ್ನು ರಾಮಲಿಂಗಾ ರೆಡ್ಡಿ ಅವರಿಗೆ ಹಾಗೂ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಕೃಷ್ಣಬೈರೇಗೌಡರಿಗೆ ವಹಿಸಲಾಗಿದೆ. ಎಂ.ಬಿ.ಪಾಟೀಲ, ಕೆ.ಎಚ್. ಮುನಿಯಪ್ಪ, ಸತೀಶ್ ಜಾರಕಿಹೊಳಿ ಅವರಿಗೆ ಈ ಹಿಂದೆ ನಿಭಾಯಿಸುತ್ತಿದ್ದ ಖಾತೆಯಲ್ಲೇ ಮುಂದುವರಿಯಲು ಅವಕಾಶ ನೀಡಿದ್ದರೆ, ಪ್ರಿಯಾಂಕ್ ಖರ್ಗೆ ಹಾಗೂ ಕೆ.ಜೆ. ಜಾರ್ಜ್ ಅವರಿಗೆ ಹೆಚ್ಚುವರಿ ಖಾತೆ ಸಿಕ್ಕಿದೆ.