ಮನರೇಗಾ ಉಳಿಸಲು ಗ್ರಾಪಂ ಮಟ್ಟದಲ್ಲೂ ಹೋರಾಟ / DODDABALLAPUR
ಚಿಕ್ಕಬಳ್ಳಾಪುರದಲ್ಲಿ ಹಮ್ಮಿಕೊಂಡಿರುವ ಮನರೇಗಾ ಯೋಜನೆ ಉಳಿಸಿ ಬೃಹತ್ ಹೋರಾಟಕ್ಕೆ ದೊಡ್ಡಬಳ್ಳಾಪುರದ ಬಸವ ಭವನದಿಂದ ಕಾರ್ಯಕರ್ತರು ಕಾಂಗ್ರೆಸ್ ಎಸ್ಟಿ ಘಟಕದ ಅಧ್ಯಕ್ಷ ಮುನಿಕೃಷ್ಣಪ್ಪ ನೇತೃತ್ವದಲ್ಲಿ ತೆರಳಿದರು. ಗ್ರಾಪಂ ಮಾಜಿ ಅಧ್ಯಕ್ಷ ರಾಮೇಗೌಡ, ನರಸಿಂಹ, ಎಂಪಿಸಿಎಸ್ ಅಧ್ಯಕ್ಷ ಕೆಂಪಣ್ಣ, ಮುಖಂಡರಾದ ಹನುಮಂತಣ್ಣ, ಮನೋಹರ್, ರಾಮಾಂಜಿನಪ್ಪ, ಮಂಜುನಾಥ, ಸತೀಶ್, ಪಿಳ್ಳವಿರಣ್ಣ ಹಾಗೂ ಇತರರಿದ್ದರು.
ದೊಡ್ಡಬಳ್ಳಾಪುರ : ತಾಲೂಕು ಕೇಂದ್ರವಷ್ಟೆ ಅಲ್ಲದೇ ಗ್ರಾಪಂ ಮಟ್ಟದಲ್ಲಿ ಮನರೇಗಾ ಯೋಜನೆ ಉಳಿಸಲು ಹೋರಾಟ ನಡೆಸಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ಎಸ್ಟಿ ಘಟಕದ ಅಧ್ಯಕ್ಷ ಮುನಿಕೃಷ್ಣ ಹೇಳಿದರು.
ಚಿಕ್ಕಬಳ್ಳಾಪುರದಲ್ಲಿ ಸೋಮವಾರ ಹಮ್ಮಿಕೊಂಡಿರುವ ಮನರೇಗಾ ಯೋಜನೆ ಉಳಿಸಿ ಬೃಹತ್ ಹೋರಾಟಕ್ಕೆ ನಗರದ ಬಸವ ಭವನದಿಂದ ಕಾರ್ಯಕರ್ತರೊಂದಿಗೆ ತೆರಳುವ ಬಸ್ಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಗ್ರಾಮೀಣ ಭಾಗದಲ್ಲಿ ಗುಳೆ ತಪ್ಪಿಸಲು 2005ರಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ(ಮನರೇಗಾ) ಜಾರಿಗೆ ತಂದಿದೆ. ಹಳ್ಳಿಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ ಎಂಬ ಗಾಂಧೀಜಿ ಕನಸನ್ನು ಉದ್ಯೋಗ ಖಾತ್ರಿ ಯೋಜನೆ ಮೂಲಕ ಯುಪಿಎ ಸರ್ಕಾರ ನನಸು ಮಾಡಿತ್ತು. ಇದರಿಂದ ಗ್ರಾಮೀಣ ಜನರ ಜೀವನದ ಜತೆಗೆ ಗ್ರಾಮಗಳು ಸಾಕಷ್ಟು ಸುಧಾರಣೆಯಾಗಿದ್ದವು. ಆದರೆ, ಕೇಂದ್ರ ಸರ್ಕಾರ ಯೋಜನೆಯ ಹೆಸರು ಬದಲಾವಣೆ ಮೂಲಕ ಯೋಜನೆಯ ಮೂಲ ಉದ್ದೇಶವನ್ನೇ ಬದಲಾಯಿಸಿ ಜನರ ದುಡಿಯುವ ಹಕ್ಕು ಕಿತ್ತುಕೊಂಡಿದೆ.
ವಿಬಿ ಜಿ ರಾಮ್ಜಿ ಯೋಜನೆ ಜನರಿಗೆ ಉದ್ಯೋಗ ಒದಗಿಸದೆ ರಾಜ್ಯ ಸರ್ಕಾರದ ಮೇಲೆ ಆರ್ಥಿಕ ಹೊರೆ ಹೊರಿಸುತ್ತಿದೆ. ರಾಜ್ಯಗಳಿಗೆ ಸಿಗಬೇಕಾದ ಅನುದಾನ ನೀಡದೇ ಕೇಂದ್ರ ಸರ್ಕರ ವಂಚಿಸುತ್ತಿದೆ. ಮನರೇಗಾ ಯೋಜನೆಯ ಮರು ಜಾರಿಗಾಗಿ ತಾಲೂಕಿನ ಎಲ್ಲ ಗ್ರಾಪಂಗಳಲ್ಲೂ ಹೋರಾಟ ಮಾಡಲಾಗುವುದು ಎಂದರು.