ಪವಿತ್ರ ಶ್ರಾವಣ ಮಾಸದ ಉತ್ಸವ ಇಂದಿನಿಂದ

ಎಸ್​.ಬಿ.ಟೆಂಪಲ್
ಎಸ್​.ಬಿ.ಟೆಂಪಲ್
Published on

ಪ್ರಮುಖ ಮುಖ್ಯಾಂಶಗಳು

  • ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ ಮಾಹಿತಿ
  • ಶರಣಬಸವೇಶ್ವರ ದೇವಸ್ಥಾನದಲ್ಲಿ ಆಯೋಜನೆ
ಕಲಬುರಗಿ: ಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿ 40 ದಿನದ ಪವಿತ್ರ ಶ್ರಾವಣ ಮಾಸ ಉತ್ಸವ ಬುಧವಾರ ಶುರುವಾಗಲಿದೆ. ಉತ್ಸವ ನಿಮಿತ್ತ ಸಾಮಾಜಿಕ ಹಾಗೂ ಧಾರ್ಮಿಕ ವಿಷಯ ಕುರಿತ ಪ್ರವಚನ, ವಿಶೇಷ ಉಪನ್ಯಾಸ ನಡೆಯಲಿದೆ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂದ ಅಧ್ಯಕ್ಷರೂ ಆದ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ ಹೇಳಿದರು.
ಶರಣಬಸವೇಶ್ವರ ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿ ಶ್ರೀ ಡಾ.ಶರಣಬಸವಪ್ಪ ಅಪ್ಪ ಅವರ ಪ್ರಥಮ ಪುಣ್ಯತಿಥಿ ಹಾಗೂ 7ನೇ ಮಹಾದಾಸೋಹ ಪೀಠಾಧಿಪತಿ ಶ್ರೀ ದೊಡ್ಡಪ್ಪ ಅಪ್ಪ ಅವರ 43ನೇ ಪುಣ್ಯಸ್ಮರಣೆ ನಿಮಿತ್ತ 40 ದಿನ ವಿಶೇಷ ಉಪನ್ಯಾಸ ಆಯೋಜಿಸಲಾಗಿದೆ. ನಿತ್ಯ ಸಂಜೆ ಒಂದು ಗಂಟೆಯ ಧಾರ್ಮಿಕ ಪ್ರವಚನಕ್ಕೂ ಮುನ್ನ ವಿಶೇಷ ಉಪನ್ಯಾಸ ಜರುಗಲಿದೆ. ಶರಣಬಸವೇಶ್ವರರ ಜೀವನ ಮತ್ತು ಸಾಧನೆ ಕುರಿತು ಸುಂಟನೂರಿನ ಖ್ಯಾತ ಪ್ರವಚನಕಾರ ಬಂಡಯ್ಯ ಶಾಸಿ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ನಿತ್ಯ ಪ್ರವಚನ ನೀಡಲಿದ್ದಾರೆ.
9ನೇ ಪೀಠಾಧಿಪತಿ ಶ್ರೀ ದೊಡ್ಡಪ್ಪ ಅಪ್ಪ ಅವರು ಸಾಂಪ್ರದಾಯಿಕ ಪಾದಪೂಜೆ, ತ್ರಿಕಾಲ ಪೂಜೆ ಮತ್ತು ವಿಶೇಷ ಪೂಜೆ ನೆರವೇರಿಸಿ ಪ್ರತಿ ಸೋಮವಾರದ ಶ್ರೀ ಶರಣಬಸವೇಶ್ವರರ ವಿಶೇಷ ಪಲ್ಲಕ್ಕಿ ಉತ್ಸವದಲ್ಲಿ ದಿವ್ಯ ಸಾನ್ನಿಧ್ಯ ವಹಿಸುವರು. ವಿವಿಧ ಮಂಡಳಿಗಳಿಂದ ಭಜನೆ, ಜಾಗತಿಕ ಲಿಂಗಾಯತ ಮಹಾಸಭಾ ಮಹಿಳಾ ಮಂಡಳದಿಂದ ವಚನಾಂಜಲಿ ಕಾರ್ಯಕ್ರಮ ಜರುಗಲಿದೆ ಎಂದು ಮಾತೋಶ್ರೀ ತಿಳಿಸಿದ್ದಾರೆ.

ಪೂಜ್ಯ ದೊಡ್ಡಪ್ಪ ಅಪ್ಪ ನೇತೃತ್ವ:

250ಕ್ಕೂ ಹೆಚ್ಚು ವರ್ಷಗಳಿಂದ ಪವಿತ್ರ ಶ್ರಾವಣದಲ್ಲಿ ಶರಣಬಸವೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಈ ಬೃಹತ್​ ಸಾಮಾಜಿಕ, ಧಾರ್ಮಿಕ ಉತ್ಸವ ಇದೇ ಮೊದಲ ಸಲ ಸಂಸ್ಥಾನದ 9ನೇ ಪೀಠಾಧಿಪತಿ ಪೂಜ್ಯ ದೊಡ್ಡಪ್ಪ ಅಪ್ಪ ನೇತೃತ್ವ ಹಾಗೂ ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ ಮಾರ್ಗದರ್ಶನದಲ್ಲಿ ನಡೆಯಲಿದೆ. ಶ್ರೀ ಡಾ.ಶರಣಬಸವಪ್ಪ ಅಪ್ಪ ಪ್ರಥಮ ಪುಣ್ಯತಿಥಿ ಅಂಗವಾಗಿ ಬುಧವಾರದಿಂದ 40 ದಿನ ಕ್ರೀಡಾಕೂಟ, ಮ್ಯಾರಥಾನ್​, ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ, ನಗರದ ವಿವಿಧ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಂದ ಸ್ವಚ್ಛತಾ ಮತ್ತು ಜಾಗೃತಿ ಅಭಿಯಾನ, ಶಿಕ್ಷಕಿಯರು ಮತ್ತು ವಿದ್ಯಾರ್ಥಿನಿಯರಿಂದ ಬೈಕ್​ ರ್ಯಾಲಿ ಸೇರಿ ಪೂಜ್ಯರ ಕೊಡುಗೆ ಬಿಂಬಿಸುವ ಹಲವು ಕಾರ್ಯಕ್ರಮ ನಡೆಯಲಿವೆ.

ಮಹಾಮಾನವ ಕೃತಿ ಬಿಡುಗಡೆ:

ಹಿಂದೂ ಪಂಚಾಂಗದ ಪ್ರಕಾರ ಶ್ರೀ ಡಾ.ಶರಣಬಸವಪ್ಪ ಅಪ್ಪ ಪ್ರಥಮ ಪುಣ್ಯತಿಥಿ ದಿನವಾದ ಸೆ.2ರಂದು ವಿವಿಧ ಮಠಾಧೀಶರು ಭಾಗವಹಿಸುವ ಬೃಹತ್​ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಪೂಜ್ಯರ ಜತೆ ನಿಕಟ ಸಂಪರ್ಕ ಹೊಂದಿದ್ದ ಗಣ್ಯರು ಬರೆದ ಲೇಖನ ಮತ್ತು ನೆನಪುಗಳನ್ನು ಒಳಗೊಂಡ ಡಾ.ನೀಲಾಂಬಿಕಾ ಶೇರಿಕಾರ್​ ಸಂಪಾದಿಸಿ ರಚಿಸಿರುವ ಮಹಾಮಾನವ ಎಂಬ ಕೃತಿ ಬಿಡುಗಡೆಗೊಳ್ಳಲಿದೆ. ತಮ್ಮ ತಮ್ಮ ಶಾಲಾ&ಕಾಲೇಜುಗಳಲ್ಲಿ ಉತ್ತಮ ಫಲಿತಾಂಶ ಸಾಧಿಸಲು ಶ್ರಮಿಸಿದ ಅತ್ಯುತ್ತಮ ಶಿಕ್ಷಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತದೆ. ಪುಣ್ಯತಿಥಿ ನಿಮಿತ್ತ ಏರ್ಪಡಿಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೂ ಬಹುಮಾನ ವಿತರಿಸಲಾಗುವುದು ಎಂದು ಮಾತೋಶ್ರೀ ತಿಳಿಸಿದ್ದಾರೆ.

ಅಪ್ಪಾಜಿ ಆಸಕ್ತಿ ಕ್ರೀಡೆ ವಾಲಿಬಾಲ್​ :

ಶರಣಬಸವೇಶ್ವರ ವಿದ್ಯಾವರ್ಧಕ ಸಂದಿಂದ ವಿವಿಧ ಸ್ಪರ್ಧೆ ಮತ್ತು ಕ್ರೀಡಾಕೂಟ ಆಯೋಜಿಸಲಾಗಿದೆ. ಪೂಜ್ಯ ಡಾ.ಅಪ್ಪಾಜಿ ಅವರಿಗೆ ಅತ್ಯಂತ ಪ್ರಿಯವಾಗಿದ್ದ ಕ್ರೀಡೆ ವಾಲಿಬಾಲ್​ಗೆ ಮಹತ್ವ ನೀಡಿದ್ದು, ಶರಣಬಸವೇಶ್ವರ ಆರ್ಟ್ಸ್​ ಕಾಲೇಜಿನ ಆಶ್ರಯದಲ್ಲಿ ಅಂತರ ಶಾಲಾ ಮತ್ತು ಅಂತರ ಕಾಲೇಜು ವಾಲಿಬಾಲ್​ ಪಂದ್ಯಾವಳಿ ನಡೆಯಲಿದೆ. ಶರಣಬಸವ ವಿಶ್ವವಿದ್ಯಾಲಯದ ವಿವಿಧ ವಿಭಾಗ ಹಾಗೂ ಸಂದ ಕಾಲೇಜು ವಿದ್ಯಾರ್ಥಿಗಳಿಂದ ಪೂಜ್ಯರ ಜೀವನದ ವಿವಿಧ ಆಯಾಮ ಆಧರಿಸಿ ಚರ್ಚಾ, ಭಾಷಣ, ಚಿತ್ರಕಲೆ, ಸಂಗೀತ ಸೇರಿ ವಿವಿಧ ಸ್ಪರ್ಧೆ ಹಮ್ಮಿಕೊಳ್ಳಲಾಗುವುದು ಎಂದು ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ ತಿಳಿಸಿದ್ದಾರೆ.
"

ಲಿಂ.ಶ್ರೀ ಡಾ.ಶರಣಬಸವಪ್ಪ ಅಪ್ಪ ಅವರ ಜೀವನ-ಸಾಧನೆ ಕುರಿತು ಅನೇಕ ವಿದ್ವಾಂಸರು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಶಿಕ್ಷಣ ಕ್ಷೇತ್ರ ಹಾಗೂ ಸಾಮಾಜಿಕ ಜೀವನಕ್ಕೆ ಪೂಜ್ಯರ ಕೊಡುಗೆ ಮತ್ತು ಕಲ್ಯಾಣ ಕರ್ನಾಟಕವನ್ನು ಶೈಕ್ಷಣಿಕ ಕೇಂದ್ರವಾಗಿ ರೂಪಿಸುವಲ್ಲಿ ವಹಿಸಿದ ಪಾತ್ರ ಕುರಿತು ಉಪನ್ಯಾಸಗಳು ಬೆಳಕು ಚೆಲ್ಲಲಿವೆ.

— > ಮಾತೋಶ್ರೀ ಡಾ.ದಾಕ್ಷಾಯಿಣಿ ಎಸ್​.ಅಪ್ಪ ಅಧ್ಯಕ್ಷರು, ಶರಣಬಸವೇಶ್ವರ ವಿದ್ಯಾವರ್ಧಕ ಸಂಘ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net