ರಾಜ್ಯದಲ್ಲಿ 'ಮದಿರಾ' ಪ್ರವಾಸೋದ್ಯಮ ಪರಿಕಲ್ಪನೆಗೆ ಒಲವು: ಸರ್ಕಾರ ಮಹತ್ವದ ಹೆಜ್ಜೆ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯದಲ್ಲಿವೆ 47 ಡಿಸ್ಟ್ರಿಲರಿಗಳು
  • ಬೆಳಗಾವಿ, ಕಲಬುರಗಿ ಭಾಗದಲ್ಲಿ ಹೆಚ್ಚು
  • ಬೆಂಗಳೂರಿನಲ್ಲಿ ಬಾಟಲಿಂಗ್ ಘಟಕಗಳಿವೆ

| ಶ್ರೀಕಾಂತ್ ಶೇಷಾದ್ರಿ, ಬೆಂಗಳೂರು

ರಾಜ್ಯದಲ್ಲಿ ಆಲ್ಕೋಹಾಲ್ ಪ್ರವಾಸೋದ್ಯಮ ಪರಿಕಲ್ಪನೆಗೆ ಉತ್ತೇಜನ ನೀಡುವ ಹಾಗೂ ಮದ್ಯ ತಯಾರಿಕಾ ಘಟಕಗಳಲ್ಲೇ ಪ್ರವಾಸಿಗರಿಗೆ ಮದ್ಯ ಸವಿಯಲು ಮತ್ತು ಖರೀದಿಸಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.

ಕರ್ನಾಟಕ ಅಬಕಾರಿ (ಡಿಸ್ಟಿಲರಿ ಮತ್ತು ವೇರ್​ಹೌಸ್) ನಿಯಮಗಳು, 1967ಕ್ಕೆ ತಿದ್ದುಪಡಿ ಮಾಡಿ ಜಾರಿಗೆ ತರಲಾಗಿದೆ. ಹೊಸ ನಿಯಮಾವಳಿಗಳ ಪ್ರಕಾರ, ಡಿಸ್ಟಿಲರಿ ಸನ್ನದು (ಲೈಸೆನ್ಸ್) ಹೊಂದಿರುವವರು ಮದ್ಯ ಉತ್ಪಾದನಾ ಘಟಕದ ಆವರಣದೊಳಗೆ ಔಟ್​ಲೆಟ್​ಗಳನ್ನು ಸ್ಥಾಪಿಸಲು ಅವಕಾಶ ನೀಡಲಾಗಿದೆ. ಈ ಔಟ್​ಲೆಟ್​ಗಳು ಮುಖ್ಯ ಉತ್ಪಾದನಾ ಪ್ರದೇಶದಿಂದ ಪ್ರತ್ಯೇಕವಾಗಿರಬೇಕು ಹಾಗೂ ಆದಷ್ಟು ಮುಖ್ಯ ಪ್ರವೇಶ ಮತ್ತು ನಿರ್ಗಮನ ದ್ವಾರದಿಂದ ದೂರದಲ್ಲಿರಬೇಕು. ಇಲ್ಲಿ ಪ್ರವಾಸಿಗರಿಗೆ ಆಹಾರ ಪೂರೈಸಲು, ತಯಾರಿಸಿದ ಮದ್ಯದ ರುಚಿ ನೋಡಲು ಮತ್ತು ಸೀಲ್ ಮಾಡಿದ ಬಾಟಲಿಗಳಲ್ಲಿ ಮದ್ಯ ಮಾರಾಟ ಮಾಡಲು ಅವಕಾಶವಿರುತ್ತದೆ.

ಈ ಫ್ಯಾಕ್ಟರಿ ಔಟ್​ಲೆಟ್ ಲೈಸೆನ್ಸ್ ಪಡೆದುಕೊಳ್ಳಲು ಇಚ್ಛಿಸುವವರು ಅಬಕಾರಿ ಉಪ ಆಯುಕ್ತರ ಮೂಲಕ ಅಬಕಾರಿ ಆಯುಕ್ತರಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಜಿಯೊಂದಿಗೆ ಔಟ್​ಲೆಟ್​ನ ನೀಲಿನಕ್ಷೆ (ಬ್ಲೂ ಪ್ರಿಂಟ್), ಆಸನ ವ್ಯವಸ್ಥೆ, ಉಪಹಾರ ಕೊಠಡಿ ಹಾಗೂ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯಗಳ ವಿವರಗಳನ್ನು ಕಡ್ಡಾಯವಾಗಿ ಒದಗಿಸಬೇಕಾಗಿದೆ. ಅಬಕಾರಿ ಆಯುಕ್ತರು ಪರಿಶೀಲಿಸಿದ ನಂತರ ನಮೂನೆ 2-ಸಿಯಲ್ಲಿ ಲೈಸೆನ್ಸ್ ಮಂಜೂರು ಮಾಡಲಿದ್ದಾರೆ.

ಡಿಸ್ಟಿಲರಿ ಫ್ಯಾಕ್ಟರಿ ಔಟ್​ಲೆಟ್ ಲೈಸೆನ್ಸ್​ನ ವಾರ್ಷಿಕ ಶುಲ್ಕವನ್ನು 4 ಲಕ್ಷ ರೂಪಾಯಿಗಳೆಂದು ನಿಗದಿಪಡಿಸಲಾಗಿದೆ. ಇದರ ಜತೆಗೆ ಶೇ.15 ಹೆಚ್ಚುವರಿ ಸನ್ನದು ಶುಲ್ಕ ಪಾವತಿಸಬೇಕಾಗುತ್ತದೆ. ಈ ಲೈಸೆನ್ಸ್ ಒಮ್ಮೆ ಮಂಜೂರಾದರೆ ಮೂಲ ಡಿಸ್ಟಿಲರಿ ಲೈಸೆನ್ಸ್ ಚಾಲ್ತಿಯಲ್ಲಿರುವ ಅವಧಿಗೆ ಒಳಪಟ್ಟು ಗರಿಷ್ಠ 5 ಅಬಕಾರಿ ವರ್ಷಗಳವರೆಗೆ ಮಾನ್ಯತೆ ಹೊಂದಿರುತ್ತದೆ. ನವೀಕರಣಕ್ಕಾಗಿ ಅವಧಿ ಮುಗಿಯುವ ಕನಿಷ್ಠ ಒಂದು ತಿಂಗಳ ಮುಂಚಿತವಾಗಿ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ.

ಷರತ್ತು ಅನ್ವಯ: ಈ ಸೌಲಭ್ಯವು ಕೇವಲ ಆಲ್ಕೋಹಾಲ್ ಪ್ರವಾಸೋದ್ಯಮದಡಿ ಡಿಸ್ಟಿಲರಿಗೆ ಭೇಟಿ ನೀಡುವ ಸಂದರ್ಶಕರಿಗೆ ಮಾತ್ರ. ಸಗಟು ಮಾರಾಟಕ್ಕೆ ಅವಕಾಶ ಇರುವುದಿಲ್ಲ ಮತ್ತು ಸಂದರ್ಶಕರಲ್ಲದ ಹೊರಗಿನ ವ್ಯಕ್ತಿಗಳಿಗೆ ಮದ್ಯ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಲೈಸೆನ್ಸ್ ಹೊಂದಿರುವವರು ಪ್ರತಿದಿನ ಭೇಟಿ ನೀಡುವ ಸಂದರ್ಶಕರ ವಿವರಗಳನ್ನು ಕಡ್ಡಾಯವಾಗಿ ನಿರ್ವಹಿಸಬೇಕು. ಔಟ್​ಲೆಟ್​ಗಳಲ್ಲಿ ರುಚಿ ನೋಡಲು ಅಥವಾ ಮಾರಾಟ ಮಾಡಲು ಬಳಸುವ ಮದ್ಯವನ್ನು ಕಡ್ಡಾಯವಾಗಿ ‘ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತ’ ದಿಂದಲೇ ಪರ್ವಿುಟ್ ಆಧಾರದ ಮೇಲೆ ಪಡೆದುಕೊಳ್ಳಬೇಕು. ಸನ್ನದುದಾರರು ಪ್ರತಿದಿನದ ಶೇಖರಣೆ ಮತ್ತು ಮಾರಾಟದ ಲೆಕ್ಕಾಚಾರವನ್ನು ಸ್ಟಾಕ್ ಬುಕ್​ನಲ್ಲಿ ಕಾಯ್ದುಕೊಂಡು, ಪ್ರತಿ ತಿಂಗಳು ಸಂಬಂಧಪಟ್ಟ ಅಬಕಾರಿ ಅಧಿಕಾರಿಗೆ ವರದಿ ಸಲ್ಲಿಸಬೇಕಾಗುತ್ತದೆ.

ಸಂಜೆ 7ರವರೆಗೆ ಮಾತ್ರ!

ಫ್ಯಾಕ್ಟರಿ ಔಟ್​ಲೆಟ್​ಗಳಲ್ಲಿ ಸಂದರ್ಶಕರಿಗೆ ಸವಿಯಲು ನೀಡುವ ಮದ್ಯದ ಮಾದರಿ ಪ್ರಮಾಣವು ಒಬ್ಬರಿಗೆ ಗರಿಷ್ಠ 30 ಮಿಲಿಗಿಂತ ಹೆಚ್ಚಿರಬಾರದು ಎಂಬ ನಿಯಮ ವಿಧಿಸಲಾಗಿದೆ. ಮನೆಗೆ ಕೊಂಡೊಯ್ಯಲು ಬಯಸಿದರೆ ಕನಿಷ್ಠ 375 ಮಿಲಿ ಗಾತ್ರದ ಸೀಲ್ ಮಾಡಿದ ಬಾಟಲಿಗಳಲ್ಲಿ ಮಾರಾಟ ಮಾಡಬಹುದು. ಆದರೆ, ಒಬ್ಬ ವ್ಯಕ್ತಿಗೆ ಮಾರಾಟ ಮಾಡಬಹುದಾದ ಗರಿಷ್ಠ ಪ್ರಮಾಣವು ಅಬಕಾರಿ ನಿಯಮಗಳ ನಿಗದಿತ ಮಿತಿ ಮೀರಬಾರದು ಜತೆಗೆ, ಈ ಔಟ್​ಲೆಟ್​ಗಳ ವ್ಯವಹಾರದ ಸಮಯವನ್ನು ಬೆಳಗ್ಗೆ 10ರಿಂದ ಸಂಜೆ 7ಗಂಟೆಯವರೆಗೆ ನಿಗದಿಪಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net