ನಗರಸಭೆಯಲ್ಲಿ ಇ-ಸ್ವತ್ತು ನವೀಕರಣ ಮಾಡದಿರುವ ಹಿನ್ನೆಲೆಯಲ್ಲಿ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದು, ಇದು ಮುಂದುವರಿದರೆ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿ ವರ್ತಕರು ನಗರಸಭೆ ಪ್ರಭಾರ ಪೌರಾಯುಕ್ತ ನಟರಾಜುಗೆ ಗುರುವಾರ ಮನವಿ ಸಲ್ಲಿಸಿದರು.
ಕೊಳ್ಳೇಗಾಲದ ಡಾ.ರಾಜ್ ಕುಮಾರ್ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯಲ್ಲಿ ಸುಮಾರು 250ರಿಂದ 300 ಅಂಗಡಿಗಳಿದ್ದು ನಾಲ್ಕೈದು ದಶಕಗಳಿಂದ ಇಲ್ಲಿಯೇ ಹಲವರು ವ್ಯಾಪಾರ ಮಾಡುತ್ತಿದ್ದಾರೆ. 2026-2027ರವರೆಗೂ ಆಸ್ತಿ ತೆರಿಗೆ ಪಾವತಿ ಮಾಡಲಾಗಿದೆ. ಹೀಗಿದ್ದರೂ ನಗರಸಭೆ ವರ್ಷಗಳಿಂದಲೂ ಇ-ಸ್ವತ್ತನ್ನು ನವೀಕರಿಸದೆ ಸತಾಯಿಸುತ್ತಿದೆ. ಬ್ಯಾಂಕ್ ಸಾಲಗಳ ನವೀಕರಣ, ಬಾಡಿಗೆಗಳ ನವೀಕರಣಕ್ಕೆ, ವ್ಯಾಪಾರ ಲೈಸೆನ್ಸ್ ಪಡೆಯಲು, ಆಸ್ತಿ ಖರೀದಿ ಮತ್ತು ಮಾರಾಟ ಮಾಡಲು ಮತ್ತು ಆಸ್ತಿ ವಿಭಾಗ ಪತ್ರದ ನೋಂದಣಿ ಮಾಡಲು ಇ-ಸ್ವತ್ತು ಅವಶ್ಯಕ ಎಂದರು.
ಸಮಸ್ಯೆ ಪರಿಹಾರಕ್ಕೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ರೀತಿಯ ಪ್ರತಿಕ್ರಿಯೆ ಆಗಿಲ್ಲ. ಇನ್ನಾದರೂ ಇ-ಆಸ್ತಿ ನವೀಕರಣ ಹಾಗೂ ಖಾತೆ ಬದಲಾವಣೆ ಮಾಡಿಕೊಡಲು ಸೂಚಿಸಬೇಕು ಎಂದು ಮನವಿ ಮಾಡಿದರು.
ಸಮಸ್ಯೆ ತಕ್ಷಣಕ್ಕೆ ಪರಿಹಾರವಾಗದಿದ್ದರೆ ಉಪವಾಸ ಸತ್ಯಾಗ್ರಹದ ಮಾರ್ಗ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ವರ್ತಕರಾದ ಎ.ಡಿ ಕುಮಾರ ಕೃಷ್ಣ, ಸೂರಜ್, ಸುಮನ್, ಸಂಜಯ್ ಇದ್ದರು.