ಹುಲಸೂರು: ಸಮರ್ಪಕವಾಗಿ ಸೋಯಾಬೀನ್ ವಿತರಣೆಗೆ ಆಗ್ರಹಿಸಿ ಮಂಗಳವಾರ ರೈತರು ಹಾಗೂ ರೈತ ಮಹಿಳೆಯರು ರಸ್ತೆತಡೆದು ಮಿಂಚಿನ ಪ್ರತಿಭಟನೆ ನಡೆಸಿದರು.
ಪಟ್ಟಣದ ಬೀದರ್-ಲಾತೂರ್ ರಾಷ್ಟ್ರೀಯ ಹೆದ್ದಾರಿ ಬಸವೇಶ್ವರ ವೃತ್ತದ ಹತ್ತಿರದ ರೈತ ಸಂಪರ್ಕ ಕೇಂದ್ರದ ಎದುರು ಬೆಳಗ್ಗೆಯಿಂದ ಸಂಜೆವರೆಗೆ ಬೀಜ ವಿತರಣೆ ಮಾಡದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬೀಜ ವಿತರಣೆ ಕೇಂದ್ರದ ಮುಂದೆ ಸರಿಯಾದ ನೆರಳಿನ ವ್ಯವಸ್ಥೆ ಇಲ್ಲದೆ ವಿವಿಧ ಗ್ರಾಮದ ರೈತರು ಸುಡು ಬಿಸಿಲಿನಲ್ಲಿ ಗಂಟೆಗಟ್ಟಲೇ ನಿಲ್ಲಬೇಕಾದ ಪರಿಸ್ಥಿತಿ ಉಂಟಾಗಿದೆ. ಕುಡಿಯಲು ನೀರು ಸಹ ಇಲ್ಲ. ಕೃಷಿ ಅಧಿಕಾರಿಗಳ ನೀರ್ಲಕ್ಷ್ಯದಿಂದ ರೈತರು ಅನೇಕ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದರು.
ಸುದ್ದಿ ತಿಳಿದು ಧಾವಿಸಿದ ಪೊಲೀಸರು ರೈತರನ್ನು ಸಮಾಧಾನಪಡಿಸಿ, ಕೃಷಿ ಅಧಿಕಾರಿಗಳು ಬೀಜ ವಿತರಣೆಗೆ ಭರವಸೆ ನೀಡಿದ್ದು, ಎಲ್ಲರೂ ಸಹಕರಿಸಬೇಕು ಎಂದು ತಿಳಿಸಿದರು.
ಕಳೆದ ಕೆಲ ದಿನಗಳ ಹಿಂದೆ ಗ್ರಾಮ ಪಂಚಾಯಿತಿ ಹಳೆಯ ಕಟ್ಟಡದಲ್ಲಿ ಬೀಜ ವಿತರಣೆ ಮಾಡಲಾಗಿತ್ತು. ಅವು ಬೇರೆ ಕಂಪನಿ ಬೀಜ ಇರುವುದರಿಂದ ಅದರ ಸಂಪೂರ್ಣ ಲೆಕ್ಕ ಮಾಡಿ ಹಣ ಬ್ಯಾಂಕ್ಗೆ ತುಂಬಿ ಬರಲು ಸ್ವಲ್ಪ ವಿಳಂಬವಾಗಿದೆ. ಈಗ ಎಲ್ಲ ರೈತರಿಗೆ ಬೀಜ ಸಿಗುವ ವ್ಯವಸ್ಥೆ ಮಾಡಿದ್ದೇವೆ.
— > ಆನಂದ ಕೃಷಿ ಅಧಿಕಾರಿ ಹುಲಸೂರು.
"
ನಾವು ಬೆಳಗ್ಗೆ 10ಕ್ಕೆ ಬೀಜ ಪಡೆಯಲು ರೈತ ಸಂಪರ್ಕ ಕೇಂದ್ರಕ್ಕೆ ಬಂದಿದ್ದು, ಬೀಜ ವಿತರಣೆ ಮಾಡಲು ಸಿಬ್ಬಂದಿ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಸರದಿ ಸಾಲಿನಲ್ಲಿ ನಿಂತುಕೊಳ್ಳಲು ಟೆಂಟ್ ವ್ಯವಸ್ಥೆ ಇಲ್ಲ. ಕನಿಷ್ಠ ಕುಡಿಯುವ ನೀರಿನ ವ್ಯವಸ್ಥೆ ಸಹ ಅಧಿಕಾರಿಗಳು ಮಾಡಿಲ್ಲ.