ಜಮಖಂಡಿ ನಗರದ ಬಿಡಿಸಿಸಿ ಬ್ಯಾಂಕ್ ಮುಂದೆ ಸೋಮವಾರ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ನಡೆದ ಪ್ರತಿಭಟನೆಯಲ್ಲಿ ರೈತ ಮುಖಂಡ ಚುನಪ್ಪ ಪೂಜಾರಿ ಮಾತನಾಡಿದರು. ರಾಜು ನದಾಫ್, ಯಲ್ಲಪ್ಪ ಹೆಗಡೆ, ಸುಶೀಲಕುಮಾರ ಬೆಳಗಲಿ, ಶ್ರೀಶೈಲ ಭೂಮಾರ, ಸಿ.ಆರ್. ಸುತಾರ, ಕಲ್ಲಪ್ಪ ಬಿರಾದಾರ, ಗೂಡುಸಾಬ ಹೊನವಾಡ ಇತರರಿದ್ದರು.
ಜಮಖಂಡಿ: ಪಿಕೆಪಿಎಸ್ ಮೂಲಕ ಶೂನ್ಯ ಬಡ್ಡಿದರದಲ್ಲಿ ರೈತರಿಗೆ ನೀಡುತ್ತಿರುವ ಸಾಲದ ಪ್ರಮಾಣ ಹೆಚ್ಚಿಸಬೇಕು ಹಾಗೂ ಪ್ರತಿ ಎಕರೆಗೆ ಒಂದು ಲಕ್ಷ ರೂ. ಸಾಲ ನೀಡಬೇಕು ಎಂದು ಒತ್ತಾಯಿಸಿ, ಎಪಿಎಂಸಿಯಲ್ಲಿರುವ ಬಿಡಿಸಿಸಿ ಬ್ಯಾಂಕ್ ಮುಂದೆ ಸೋಮವಾರ ರಾಜ್ಯ ರೈತ ಸಂಘ, ಹಸಿರು ಸೇನೆ ಮತ್ತು ರೈತ ಸಾಂತ್ವನ ಕೇಂದ್ರದ ಪದಾಧಿಕಾರಿಗಳು ಹಾಗೂ ರೈತರು ರಸ್ತೆ ಮೇಲೆ ಅಡುಗೆ ಮಾಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.
ರೈತ ಮುಖಂಡ ಚುನಪ್ಪ ಪೂಜಾರಿ ಮಾತನಾಡಿ, ಬೆಳಗಾವಿ ಜಿಲ್ಲೆಯಲ್ಲಿ ಪ್ರತಿ ಎಕರೆಗೆ 40 ಸಾವಿರ ರೂ. ನೀಡುತ್ತಿದ್ದರೆ, ಇಲ್ಲಿ ಖಾತೆಗೆ 50 ಸಾವಿರ ರೂ. ನೀಡುತ್ತಿದ್ದಾರೆ. ಈ ತಾರತಮ್ಯ ಕೂಡಲೇ ಹೋಗಲಾಡಿಸಿ, ಪ್ರತಿ ಎಕರೆಗೆ 1 ಲಕ್ಷ ರೂ. ಸಾಲ ನೀಡಬೇಕು ಎಂದು ಆಗ್ರಹಿಸಿದರು.
ರೈತ ಮುಖಂಡ ರಾಜು ನದಾಫ್ ಮಾತನಾಡಿ, ಸರ್ಕಾರ ಶೂನ್ಯ ಬಡ್ಡಿದರದಲ್ಲಿ ಖಾತೆಗೆ 5 ಲಕ್ಷ ರೂ. ನೀಡುತ್ತೇವೆ ಎಂದು ಹೇಳುತ್ತದೆ, ಆದರೆ ಬ್ಯಾಂಕಿನಲ್ಲಿ ಕೇವಲ 50 ಸಾವಿರ ರೂ. ನೀಡುತ್ತಾರೆ. ಬ್ಯಾಂಕಿನಲ್ಲಿ ಹಣ ನೀಡದೆ ಬಜೆಟ್‌ನಲ್ಲಿ ಯಾಕೆ ಘೋಷಣೆ ಮಾಡಬೇಕು? ರೈತರಿಗೆ ಇನ್ನು ಎಷ್ಟು ದಿನ ಮೋಸ ಮಾಡುತ್ತೀರಿ? ರೈತ ಮಳೆಯಿಲ್ಲದೆ ಬರಗಾಲಕ್ಕೆ ಸಿಲುಕಿ ನರಳುತ್ತಿದ್ದಾನೆ. ನಮ್ಮ ಜಮೀನಿನ ಕೆಲಸ ಕಾರ್ಯಗಳನ್ನು ಬಿಟ್ಟು ಹೋರಾಟ ಮಾಡಿ ಎಲ್ಲವನ್ನೂ ಪಡೆದುಕೊಳ್ಳಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ಮುಖಂಡ ಯಲ್ಲಪ್ಪ ಹೆಗಡೆ ಮಾತನಾಡಿ, ಶೇಕಡ 70ರಷ್ಟು ರೈತರಿಗೆ ಸಾಲ ನೀಡಬೇಕು. ಅದನ್ನು ಬಿಟ್ಟು ಬಿಡಿಸಿಸಿ ಬ್ಯಾಂಕ್ ನಿರ್ದೇಶಕರ ಸಕ್ಕರೆ ಕಾರ್ಖಾನೆ ಸೇರಿ ವಿವಿಧ ಉದ್ಯಮಗಳಿಗೆ ಸಾವಿರಾರು ಕೋಟಿ ರೂ. ನೀಡುತ್ತಿದ್ದಾರೆ. ಆದರೆ, ರೈತರಿಗೆ ನೀಡಲು ಲಕ್ಷ ರೂ. ಸಿಗುವುದಿಲ್ಲವೇ? ಬಿಡಿಸಿಸಿ ಬ್ಯಾಂಕಿನ ನಿರ್ದೇಶಕರನ್ನು ಆಯ್ಕೆ ಮಾಡುವಾಗ ಆಲೋಚಿಸಬೇಕು. ಅವರಿಗೆ ಯಾವುದೇ ರೈತರ ಕಾಳಜಿ ಇಲ್ಲ, ತಮ್ಮ ಉದ್ಯಮಗಳನ್ನು ಮಾತ್ರ ನೋಡಿಕೊಳ್ಳಲು ನಿರ್ದೇಶಕರಾಗುತ್ತಿದ್ದಾರೆ ಎಂದು ಆರೋಪಿಸಿದರು.