ಹಿರೇಮುರಾಳ ಹೆಸ್ಕಾಂ ವಿದ್ಯುತ್ ಉಪ ಕೇಂದ್ರದ ಕಚೇರಿ ಎದುರು ಪ್ರತಿಭಟನೆ
ಗುಣಮಟ್ಟದ ವಿದ್ಯುತ್ ಪೂರೈಕೆ ಒತ್ತಾಯ
ಹಿರೇಮುರಾಳ: ರೈತರಿಗೆ ಹಗಲು ವೇಳೆಯಲ್ಲಿ ನಿರಂತರ 7 ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿ ಸರೂರು, ಕೋಳೂರು ಭಾಗದ ರೈತರು ಹಿರೇಮುರಾಳ ಹೆಸ್ಕಾಂ ವಿದ್ಯುತ್ ಉಪ ಕೇಂದ್ರದ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ನಂತರ ಮಾತನಾಡಿದ ರೈತ ಮುಖಂಡ ಸಿದ್ಧಪ್ಪ ಬಪ್ಪರಗಿ, ಕೃಷಿ ಚಟುವಟಿಕೆಗಳಿಗೆ ಹಗಲು ಹೊತ್ತಿನ ವಿದ್ಯುತ್ ಅತ್ಯಗತ್ಯವಾಗಿದೆ. ಪ್ರಸ್ತುತ ರಾತ್ರಿ 3 ಗಂಟೆ ಹಾಗೂ ಹಗಲು 4 ಗಂಟೆಗಳ ಕಾಲ ಮಾತ್ರ ವಿದ್ಯುತ್ ಪೂರೈಸಲಾಗುತ್ತಿದೆ. ಈ ಅವಧಿಯಲ್ಲಿಯೂ ಪದೇಪದೆ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ಇದರಿಂದ ಬೆಳೆಗಳಿಗೆ ನೀರುಣಿಸಲು ರೈತರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದ ಹಗಲು ವೇಳೆಯಲ್ಲೇ ನಿರಂತರ 7 ಗಂಟೆಗಳ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದರು.
ರಾತ್ರಿ ವೇಳೆಯಲ್ಲಿ ವಿದ್ಯುತ್ ನೀಡುವುದರಿಂದ ರೈತರು ಜೀವ ಭಯದ ನಡುವೆ ಹೊಲಗಳಲ್ಲಿ ಕೆಲಸ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಹಗಲು ಹೊತ್ತಿನಲ್ಲಿ ಸಮರ್ಪಕ ವಿದ್ಯುತ್ ದೊರೆತರೆ ನೀರಾವರಿ ಸೇರಿ ಕೃಷಿ ಚಟುವಟಿಕೆಗಳನ್ನು ಸುಗಮವಾಗಿ ನಡೆಸಲು ಅನುಕೂಲವಾಗುತ್ತದೆ ಎಂದು ಪ್ರತಿಭಟನಾಕಾರರು ಹೇಳಿದರು.
ಈ ಕುರಿತು ಹಲವು ಬಾರಿ ಕೆಇಬಿ ಎಸ್‌ಒ ಅವರ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ರೈತರ ಸಮಸ್ಯೆಗಳಿಗೆ ಸ್ಪಂದಿಸದ ಸಂಬಂಧಪಟ್ಟ ಅಧಿಕಾರಿಗಳನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ಪ್ರತಿಭಟನಾ ನಿರತ ರೈತರು ಆಗ್ರಹಿಸಿದರು.
ರೈತರ ನ್ಯಾಯ ಸಮ್ಮತ ಬೇಡಿಕೆಗಳನ್ನು ಹೆಸ್ಕಾಂ ಅಧಿಕಾರಿಗಳು ತಕ್ಷಣ ಈಡೇರಿಸಬೇಕು. ಇಲ್ಲವಾದಲ್ಲಿ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ರೈತರು ಎಚ್ಚರಿಕೆ ನೀಡಿದರು.