ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತ ಸಮಾವೇಶ

ಚಾಮರಾಜನಗರದ ಜಿಲ್ಲಾಡಳಿತ ಭವನದ ಮುಂಭಾಗ ಆಯೋಜಿಸಿದ್ದ ರೈತ ಸಮಾವೇಶದಲ್ಲಿ ರಾಷ್ಟ್ರೀಯ ರೈತ ನಾಯಕ ರಾಕೇಶ್ ಟಿಕಾಯತ್ ರೈತರೊಂದಿಗೆ ಭಾಗವಹಿಸಿರುವುದು.
ಚಾಮರಾಜನಗರದ ಜಿಲ್ಲಾಡಳಿತ ಭವನದ ಮುಂಭಾಗ ಆಯೋಜಿಸಿದ್ದ ರೈತ ಸಮಾವೇಶದಲ್ಲಿ ರಾಷ್ಟ್ರೀಯ ರೈತ ನಾಯಕ ರಾಕೇಶ್ ಟಿಕಾಯತ್ ರೈತರೊಂದಿಗೆ ಭಾಗವಹಿಸಿರುವುದು.
Published on
ಚಾಮರಾಜನಗರ: ರೈತ ಚೇತನ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ 90 ನೇ ಜನ್ಮದಿನಾಚರಣೆ ಅಂಗವಾಗಿ ರೈತರನ್ನು ಒಕ್ಕಲೆಬ್ಬಿಸಲು ಮುಂದಾಗಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಸಾಮೂಹಿಕ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಶುಕ್ರವಾರ ಬೃಹತ್ ಜಾಥಾ ಹಾಗೂ ಸಮಾವೇಶವನ್ನು ನಡೆಸಲಾಯಿತು.
ನಗರದ ಎಪಿಎಂಸಿ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಅಲ್ಲಿಂದ ಮೆರವಣಿಗೆ ಹೊರಟು ಸುಲ್ತಾನ್ ಷರ್ೀ ವೃತ್ತ, ದೊಡ್ಡಂಗಡಿ, ಚಿಕ್ಕಂಗಡಿ ಬೀದಿ, ಸಂತೇಮರಹಳ್ಳಿ ವೃತ್ತ, ಡಿವಿಯೇಷನ್ ರಸ್ತೆ, ಶ್ರೀ ಭುವನೇಶ್ವರಿ ವೃತ್ತ ಹಾಗೂ ಬಿ.ರಾಚಯ್ಯ ಜೋಡಿರಸ್ತೆ ಮಾರ್ಗವಾಗಿ ಜಿಲ್ಲಾಡಳಿತ ಭವನಕ್ಕೆ ತೆರಳಿ ಸಮಾವೇಶಗೊಂಡರು. ಬಳಿಕ ಜಿಲ್ಲಾಧಿಕಾರಿ ಶ್ರೀರೂಪಾ ಅವರ ಮೂಲಕ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಪ್ರತಿ ಎರಡು ಗಂಟೆಗೆ ಮೂವರು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಅನ್ನದಾತರ ಆತ್ಮಹತ್ಯೆಯನ್ನು ನಿಲ್ಲಿಸಬೇಕು. ಅಭಿವೃದ್ಧಿ ಹೆಸರಿನಲ್ಲಿ ಕೈಗಾರಿಕೆ, ವಿಮಾನ ನಿಲ್ದಾಣ ನಿರ್ಮಾಣ, ಹೆದ್ದಾರಿ ಯೋಜನೆಗಳಿಗಾಗಿ ರೈತರ ಲವತ್ತಾದ ಕೃಷಿ ಭೂಮಿಯನ್ನು ರೈತರ ಅನುಮತಿ ಪಡೆಯದೆ ಸ್ವಾಧೀನಪಡಿಸಿಕೊಳ್ಳಲು ನೋಟಿಸ್ ನೀಡುವುದನ್ನು ಕೈಬಿಡಬೇಕು. ಡಾ.ಎಂ.ಎಸ್.ಸ್ವಾಮಿನಾಥನ್ ಶಿಾರಸಿನಂತೆ ಎಲ್ಲ ಕೃಷಿ ಉತ್ಪನ್ನಗಳಿಗೂ ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿ ಮಾಡಬೇಕು. ಕೇಂದ್ರ ಸರ್ಕಾರ ಹೊರತರುತ್ತಿರುವ ಸ್ಮಾರ್ಟ್ ಮೀಟರ್ ಯೋಜನೆ, ವಿದ್ಯುಚ್ಛಕ್ತಿ ಮಸೂದೆ-2025, ಬೀಜ ಮಸೂದೆಯನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ರೈತರಿಗೆ ಸುಲಭವಾಗಿ ಸಾಲ ಸಿಗುವಂತೆ ಯೋಜನೆ ರೂಪಿಸಬೇಕು. ಕೃಷಿಯನ್ನು ಸಿಬಿಲ್‌ನಿಂದ ಹೊರಗಿಡಬೇಕು. ದೇಶವು ಅಮೆರಿಕ ಇತರ ವಿದೇಶಗಳೊಂದಿಗೆ ಕೃಷಿಗೆ ಸಂಬಂಧಿಸಿದ ಮುಕ್ತ ವಾಣಿಜ್ಯ ಒಪ್ಪಂದಗಳಿಗೆ ಸಹಿ ಹಾಕಬಾರದು. ರಾಜ್ಯದಲ್ಲಿ ಯುವ ರೈತರಿಗೆ ಆತ್ಮಗೌರವದ ಬದುಕನ್ನು ಕಟ್ಟಿಕೊಳ್ಳಲು ನಮ್ಮ ಬೆಲೆ, ನಮ್ಮ ಮಾರುಕಟ್ಟೆ ರೈತ ಉತ್ಪಾದಕ ಕಂಪನಿಯ ಮೂಲಕ ಅನುಕೂಲ ಕಲ್ಪಿಸಬೇಕು. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರೈತ ನಾಯಕ ರಾಕೇಶ್ ಟಿಕಾಯತ್, ಯುದ್ದವೀರ್ ಸಿಂಗ್, ರೈತ ಚಳವಳಿಯ ಹಿರಿಯ ಸಂಸ್ಥಾಪಕ ಸದಸ್ಯ ಪ್ರೊ.ರವಿವರ್ಮ ಕುಮಾರ್, ಚಿತ್ರನಟ ಅಶೋಕ್, ಸಂಯುಕ್ತ ಹೋರಾಟ ಕರ್ನಾಟಕದ ಸಂಯೋಜಕ ಯಶವಂತ್, ರೈತ ಸಂಘದ ಚುಕ್ಕಿ ನಂಜುಂಡಸ್ವಾಮಿ, ಅನಸೂಯಮ್ಮ, ಹೊನ್ನೂರು ಪ್ರಕಾಶ್, ಕೆ.ಟಿ.ಗಂಗಾಧರ್, ರಾಮಣ್ಣ ಕೆಂಚಲೇರ, ಗ್ಯಾರಂಟಿ ರಾಮಣ್ಣ, ಮಲ್ಲಿಕಾರ್ಜುನ್, ಮಂಜು ಕಿರಣ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net