

ಬೆಂಗಳೂರು: ಕಾಲಚಕ್ರನ ಓಟದಲ್ಲಿ ಮತ್ತೊಂದು ವರ್ಷ ಗತಿಸಿ ಹೋಗುತ್ತಿದೆ. 2025ರಲ್ಲಿ ಅನೇಕ ಸಾಧಕರನ್ನು ದೇಶ ಕಳೆದುಕೊಂಡಿದೆ. ಅಗಲಿ ಹೋದ ಖ್ಯಾತನಾಮರು ಈಗ ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಅವರ ಬದುಕು-ಸಾಧನೆ-ಸಂದೇಶಗಳು ಸದಾ ನಮ್ಮೊಂದಿಗಿರುತ್ತವೆ. 2025ರಲ್ಲಿ ಯಾವ್ಯಾವ ಮಹನೀಯರು ಮರೆಯಾಗಿಹೋದರು ಎಂಬುದರ ಸ್ಥೂಲ ಮಾಹಿತಿ ಇಲ್ಲಿದೆ.
ಭಾರತೀಯ ಸಿನಿಮಾ ರಂಗದ ‘ಹೀಮ್ಯಾನ್’ ಎಂದೇ ಖ್ಯಾತರಾಗಿದ್ದ ಧಮೇಂದ್ರ 89ನೇ ವಯಸ್ಸಿನಲ್ಲಿ ನ. 24ರಂದು ನಿಧನರಾದರು. ಆರು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಧಮೇಂದ್ರ, ಸುಮಾರು 300 ಸಿನಿಮಾಗಳಲ್ಲಿ ನಟಿಸಿದ್ದರು. ಒರಟು ಪಾತ್ರದಲ್ಲಿ (ಶೋಲೆ) ಮಿಂಚಿದಂತೆ, ಸಂವೇದನಾಶೀಲ ಪಾತ್ರದಲ್ಲಿಯೂ (ಸತ್ಯಕಾಮ್ ನಟನಾ ಪ್ರತಿಭೆಯನ್ನು ಪ್ರದರ್ಶಿಸಿದ್ದರು. ಶೋಲೆಯಲ್ಲಿನ ಅಮಿತಾಭ್ ಬಚ್ಚನ್- ಧಮೇಂದ್ರ ಜೋಡಿಯ ನಟನೆ ಭಾರತೀಯರು ಮರೆಯಲಾಗದಂಥದ್ದು.
ಇನ್ನೊಬ್ಬ ದಿಗ್ಗಜ ಸಿನಿ ಕಲಾವಿದ, ‘ಭಾರತ್ ಕುಮಾರ್’ ಎಂದೇ ಖ್ಯಾತರಾಗಿದ್ದ ಹಿರಿಯ ನಟ ಹಾಗೂ ನಿರ್ವಪಕ ಮನೋಜ್ ಕುಮಾರ್ (87) ಏ. 4ರಂದು ನಿಧನರಾದರು. ದೇಶಪ್ರೇಮಿ ಸಿನಿಮಾಗಳಲ್ಲೇ ಹೆಚ್ಚು ಮಿಂಚಿದವರು. ಉಪಕಾರ್ ಮತ್ತು ಪೂರಬ್ ಔರ್ ಪಶ್ಚಿಮ್ಂಥ ಕ್ಲಾಸಿಕ್ ಸಿನಿಮಾಗಳ ಸೃಷ್ಟಿಕರ್ತರು.
1940 ಮತ್ತು 50ರ ದಶಕದ ಪ್ರಸಿದ್ಧ ನಟಿ ಕಾಮಿನಿ ಕೌಶಲ್ ವಯೋಸಹಜ ಸಮಸ್ಯೆಗಳಿಂದಾಗಿ ಮುಂಬೈ ನಿವಾಸದಲ್ಲಿ ನವೆಂಬರ್ 13ರಂದು ನಿಧನರಾದರು. ಭಾರತೀಯ ಸಿನಿಮಾ ರಂಗದ ಸ್ವಾತಂತ್ರೊ್ಯೕತ್ತರ ಯುಗಕ್ಕೆ ಸಂಪರ್ಕ ಕಲ್ಪಿಸುವಲ್ಲಿ ಉಳಿದುಕೊಂಡಿದ್ದ ಕೆಲವೇ ಕೊನೆಯ ಕೊಂಡಿಗಳಲ್ಲಿ ಅವರೂ ಒಬ್ಬರಾಗಿದ್ದರು.
ಮಲಯಾಳಂ ಚಿತ್ರರಂಗದ ಹಿರಿಯ ನಟ, ಚಿತ್ರಸಾಹಿತಿ ಹಾಗೂ ನಿರ್ವಪಕ ಶ್ರೀನಿವಾಸನ್ 69ನೇ ವಯಸ್ಸಿನಲ್ಲಿ ಡಿ. 20ರಂದು ನಿಧನರಾದರು.
135ಕ್ಕೂ ಅಧಿಕ ಒಡಿಯಾ ಸಿನಿಮಾಗಳಲ್ಲಿ ನಟಿಸಿದ್ದ ಒಡಿಯಾ ಚಿತ್ರರಂಗದ ದಂತಕಥೆ ಉತ್ತಮ್ ಮೊಹಂತಿ ತಮ್ಮ 66ನೇ ವಯಸ್ಸಿನಲ್ಲಿ ಫೆ. 27ರಂದು ಇಹಲೋಕ ತ್ಯಜಿಸಿದರು.
ಐಕಾನಿಕ್ ಅಸ್ಸಾಮಿ ಗಾಯಕ ಹಾಗೂ ಸಂಗೀತ ನಿರ್ದೇಶಕ ಝುುಬಿನ್ ಗರ್ಗ್ 52ನೇ ವಯಸ್ಸಿನಲ್ಲಿ ಸಿಂಗಾಪುರದಲ್ಲಿ ಸೆ. 19ರಂದು ನಿಧನರಾದರು. ‘ಯಾ ಅಲಿ’ ಹಿಟ್ ಆಲ್ಬಂನಿಂದಾಗಿ ಅವರು ರಾಷ್ಟ್ರ ಮಟ್ಟದಲ್ಲಿ ಪ್ರಸಿದ್ಧರಾಗಿದ್ದರು. ಝುುಬಿನ್, ಈಶಾನ್ಯ ಭಾರತ ಮತ್ತು ಬಾಲಿವುಡ್ ನಡುವಿನ ಸಾಂಸ್ಕೃತಿಕ ಸೇತುವೆಯಾಗಿದ್ದರು. ಅವರದು ಆಕಸ್ಮಿಕ ಸಾವಲ್ಲ, ಕೊಲೆ ಎಂದು ಅಸ್ಸಾಂ ಮುಖ್ಯಮಂತ್ರಿ ಹೇಳಿದ್ದು, ತನಿಖೆ ನಡೆಯುತ್ತಿದೆ.
1970ರ ದಶಕದ ಖ್ಯಾತ ನಟಿ ಹಾಗೂ ಹಿನ್ನೆಲೆ ಗಾಯಕಿ ಸುಲಕ್ಷಣಾ ಪಂಡಿತ್ 71ನೇ ವಯಸ್ಸಿನಲ್ಲಿ ನ. 7ರಂದು ನಿಧನರಾದರು. ರಾಜೇಶ್ ಖನ್ನಾರಂಥ ಸ್ಟಾರ್ ನಟರೊಂದಿಗೆ ನಟನೆ ಹಾಗೂ ಸುಶ್ರಾವ್ಯ ಹಿನ್ನೆಲೆ ಗಾಯನದ ಅವಳಿ ಪ್ರತಿಭೆಯಿಂದ ಅವರು ಪ್ರಸಿದ್ಧರಾಗಿದ್ದರು.
‘ಅಸ್ರಾಣಿ’ ಎಂಬ ಹೆಸರಿನಿಂದಲೇ ಚಿರಪರಿಚಿತ ರಾಗಿದ್ದ ಲೆಜೆಂಡರಿ ಹಾಸ್ಯ ನಟ, 84ನೇ ವಯಸ್ಸಿನಲ್ಲಿ ಅ. 20ರಂದು ಕೊನೆಯುಸಿರೆಳೆದರು. ‘ಶೋಲೆ’ಯಲ್ಲಿನ ಅವರ ಜೈಲರ್ ಪಾತ್ರವು ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅತಿ ಹೆಚ್ಚು ನೆನಪಿನಲ್ಲಿ ಉಳಿಯುವಂಥ ನಟನೆಯಲ್ಲಿ ಒಂದಾಗಿ ದಾಖಲಾಗಿದೆ.
ಜಾಹೀರಾತು ಕ್ಷೇತ್ರದ ದಿಗ್ಗಜ, ‘ಆಡ್ವ್ಯಾನ್’ ಎಂದೇ ಚಿರಪರಿಚಿತರಾಗಿದ್ದ ಪಿಯೂಷ್ ಪಾಂಡೆ 70ನೇ ವಯಸ್ಸಿನಲ್ಲಿ ಅ. 24ರಂದು ನಿಧನರಾದರು. ಕ್ಯಾಡ್ಬರಿಯ ‘ಅಸ್ಲಿ ಸ್ವಾದ್’ ಮತ್ತು ‘ಅಬ್ಕೀ ಬಾರ್ ಮೋದಿ ಸರ್ಕಾರ್’ ಮುಂತಾದ ಭಾರತದ ಕೆಲವು ಐಕಾನಿಕ್ ಪ್ರಚಾರ ಅಭಿಯಾನಗಳ ಹಿಂದಿನ ಸೃಜನಶೀಲ ಪ್ರತಿಭೆಯಾಗಿದ್ದವರು.
ಬಿ.ಆರ್. ಚೋಪ್ರಾ ಅವರ ಜನಪ್ರಿಯ ‘ಮಹಾಭಾರತ’ ಧಾರಾವಾಹಿ ಯಲ್ಲಿ ನಿರ್ವಹಿಸಿದ ಕರ್ಣನ ಪಾತ್ರದಿಂದ ಜನಪ್ರಿಯರಾಗಿದ್ದ ಪಂಕಜ್ ಧೀರ್, ಕ್ಯಾನ್ಸರ್ನೊಂದಿಗೆ ಹೋರಾಡುತ್ತಾ 68ನೇ ವಯಸ್ಸಿನಲ್ಲಿ ಅ. 15ರಂದು ನಿಧನರಾದರು.
ಸಾರಾಭಾಯ್ ವರ್ಸಸ್ ಸಾರಾಭಾಯ್ ಮತ್ತು ಜಾನೇ ಭೀ ದೋ ಯಾರೋ ಮುಂತಾದ ಸಿನಿಮಾಗಳಲ್ಲಿನ ನಟನೆಯಿಂದ ಜನಪ್ರಿಯರಾಗಿದ್ದ ನಟ ಸತೀಶ್ ಷಾ ಅ. 25ರಂದು ಕಿಡ್ನಿ ವೈಫಲ್ಯದಿಂದಾಗಿ 74ನೇ ವಯಸ್ಸಿನಲ್ಲಿ ಇಹಲೋಕಕ್ಕೆ ವಿದಾಯ ಹೇಳಿದರು.
‘ಕಾಂಟಾ ಲಗಾ ಗರ್ಲ್’ ಎಂದೇ ಚಿರಪರಿಚಿತ ರಾಗಿದ್ದ ಮತ್ತು ಕಿರುತೆರೆಯಲ್ಲಿ ಪ್ರಸಿದ್ಧರಾಗಿದ್ದ ನಟಿ, ರೂಪದರ್ಶಿ ಶೆಫಾಲಿ ಜರಿವಾಲಾ, 42ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಜೂ. 27ರಂದು ಮರಣ ಹೊಂದಿದರು.
ವಂಶವೃಕ್ಷ, ಪರ್ವ, ದಾಟು, ತಂತು ಸೇರಿ ತಮ್ಮ ವೈಚಾರಿಕ ಕಾದಂಬರಿಗಳ ಮೂಲಕ ಸಾಹಿತ್ಯ ಲೋಕದಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದ ಸಾಹಿತಿ, ತತ್ವಜ್ಞಾನಿ ಎಸ್.ಎಲ್. ಭೈರಪ್ಪ ತಮ್ಮ 94ನೇ ವಯಸ್ಸಿನಲ್ಲಿ ವಯೋಸಹಜ ಅನಾರೋಗ್ಯದಿಂದಾಗಿ ಸೆ. 24ರಂದು ನಿಧನರಾದರು. ಅವರ ಕೃತಿಗಳು ಭಾರತದ ಹಲವು ಭಾಷೆಗಳಿಗೆ ಅನುವಾದಗೊಂಡಿವೆ. ಭೈರಪ್ಪ ಪದ್ಮಶ್ರೀ, ಪದ್ಮಭೂಷಣ, ಸರಸ್ವತಿ ಸಮ್ಮಾನ್ ಸೇರಿ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಅಪಾರ ಸಾಹಿತ್ಯಾಭಿ ಮಾನಿಗಳನ್ನು ಹಾಗೂ ಶಿಷ್ಯವರ್ಗವನ್ನು ಹೊಂದಿದ್ದರು.
ಹಿರಿಯ ಕಲಾವಿದ ಹಾಗೂ ಹಾಸ್ಯ ನಟ ಎಂ.ಎಸ್. ಉಮೇಶ್ ಹಾಸ್ಯ ಪ್ರಜ್ಞೆ ಹಾಗೂ ಸರಳ ವ್ಯಕ್ತಿತ್ವಕ್ಕೆ ಹೆಸರಾದವರು. ರಂಗಭೂಮಿಯತ್ತ ಆಕರ್ಷಿತರಾಗಿ ಬಾಲ್ಯ ದಲ್ಲೇ ಬಣ್ಣ ಹಚ್ಚಿದ ಅವರು 350ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು. ಕೊನೆಯ ದಿನಗಳಲ್ಲಿ ಕ್ಯಾನ್ಸರ್ನಿಂದ ಬಳಲಿದರು. ನ. 30ರಂದು ಸರ್ಕಾರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಅಭಿನಯ ಸರಸ್ವತಿ ಬಿ. ಸರೋಜಾ ದೇವಿ 87ನೇ ವಯಸ್ಸಿನಲ್ಲಿ ವಯೋಸಹಜ ಆರೋಗ್ಯ ಸಮಸ್ಯೆಯಿಂದ ಜು. 14ರಂದು ಇಹಲೋಕ ತ್ಯಜಿಸಿದರು. ಕನ್ನಡ, ಹಿಂದಿ, ತಮಿಳು, ತೆಲುಗು ಸೇರಿ ಬಹುಭಾಷೆಗಳಲ್ಲಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಅವರು ಕನ್ನಡ ಚಿತ್ರರಂಗದ ಮೊದಲ ಮಹಿಳಾ ಸೂಪರ್ಸ್ಟಾರ್ ಎಂಬ ಖ್ಯಾತಿ ಪಡೆದಿದ್ದರು. ಮಹಾಕವಿ ಕಾಳಿದಾಸ, ಕಿತ್ತೂರು ರಾಣಿ ಚೆನ್ನಮ್ಮ, ಮಲ್ಲಮ್ಮನ ಪವಾಡ ಪ್ರಸಿದ್ಧಿ ಪಡೆದ ಚಿತ್ರಗಳು.
ಹಾಸ್ಯ ನಟ ಬ್ಯಾಂಕ್ ಜನಾರ್ದನ್ ಹಲವು ಚಲನಚಿತ್ರಗಳಲ್ಲಿ ತಮ್ಮ ಹಾಸ್ಯ ನಟನೆಯಿಂದಲೇ ಪ್ರಖ್ಯಾತಿ ಗಳಿಸಿದ್ದರು. ಚಿತ್ರದ ಹೊರತಾಗಿ ಕಿರುತೆರೆಯಲ್ಲಿ ಧಾರಾವಾಹಿಗಳ ಮೂಲಕ ಹೆಚ್ಚು ಪ್ರಸಿದ್ಧಿ ಹೊಂದಿದ್ದರು. ತಮ್ಮ 76ನೇ ವರ್ಷ ವಯಸ್ಸಿನಲ್ಲಿ ಅನಾರೋಗ್ಯದಿಂದಾಗಿ ಏ. 14ರಂದು ನಿಧನರಾದರು.
ಹಿರಿಯ ರಾಜಕೀಯ ಮುತ್ಸದ್ದಿ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ 94ನೇ ವಯಸ್ಸಿನಲ್ಲಿ ಡಿ. 14ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಲಿಂಗೈಕ್ಯರಾದರು. ದಾವಣಗೆರೆ ದಣಿಯೆಂದೇ ಖ್ಯಾತರಾಗಿದ್ದ ಶಾಮನೂರು ಶಿವಶಂಕರಪ್ಪ ಅವರು, ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಯ ಜತೆಗೆ ಅದನ್ನು ಜ್ಞಾನಕಾಶಿಯನ್ನಾಗಿ ಪರಿವರ್ತಿಸಿದ್ದರು. ಜನಪರ ಕಾರ್ಯಗಳಿಂದಾಗಿಯೇ ಅಪಾರ ಸಂಖ್ಯೆಯಲ್ಲಿ ಅಭಿಮಾನಿ ಬಳಗ ಹೊಂದಿದ್ದರು.
ವೃತ್ತಿ ರಂಗಭೂಮಿ ಕಲಾವಿದರಾಗಿ, ಚಲನಚಿತ್ರ, ರಿಯಾಲಿಟಿ ಶೋ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಮನೆ ಮಾತಾಗಿದ್ದ ರಾಜು ತಾಳಿಕೋಟಿ ತಮ್ಮ 59ನೇ ವರ್ಷ ವಯಸ್ಸಿನಲ್ಲಿ ಹೃದಯಾಘಾತದಿಂದ ಅ. 13ರಂದು ನಿಧನರಾದರು. ಸಿನಿಮಾ ಶೂಟಿಂಗ್ಗಾಗಿ ಉಡುಪಿಗೆ ತೆರಳಿದ್ದ ಅವರು ಎದೆ ನೋವಿನಿಂದ ಆಸ್ಪತ್ರೆಗೆ ದಾಖಲಾದರೂ, ಚಿಕಿತ್ಸೆ ಫಲಿಸಲಿಲ್ಲ. ಮೂಲ ಹೆಸರು ರಾಜೇಸಾಬ ಮುಕ್ತುಮಸಾಬ್ ತಾಳಿಕೋಟಿ. ಹಾಸ್ಯ ಕಲಾವಿದರಾಗಿ ಜಾತಿ ಧರ್ಮ ಮೀರಿ ಬೆಳೆದ ಅವರು ರಾಜು ತಾಳಿಕೋಟಿ ಎಂಬ ಹೆಸರಿಂದ ಖ್ಯಾತರಾಗಿದ್ದರು.
ಕನ್ನಡ ರಂಗಭೂಮಿ ನಟರಾಗಿ ಹೆಚ್ಚು ಜನಪ್ರಿಯರಾಗಿದ್ದ ಯಶವಂತ ಸರದೇಶಪಾಂಡೆ ತಮ್ಮ 61ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಸೆ. 29ರಂದು ನಿಧನರಾದರು. ಅವರು ನಟಿಸಿ ನಿರ್ದೇಶಿಸಿರುವ ಆಲ್ ದಿ ಬೆಸ್ಟ್ ನಾಟಕ ಅಭೂತಪೂರ್ವ ಯಶಸ್ಸು ಕಂಡಿತ್ತು. ಕಿರುತೆರೆ ಮತ್ತು ಚಲನಚಿತ್ರಗಳಲ್ಲಿಯೂ ಪಾತ್ರ ನಿರ್ವಹಿಸಿದ್ದರು. ಪತ್ನಿ ಮಾಲತಿ ಸಹ ರಂಗಭೂಮಿ ಮತ್ತು ಕಿರುತೆರೆಯಲ್ಲಿ ಹೆಸರು ಮಾಡಿದ್ದರು. ನಟ, ನಿರ್ದೇಶಕ, ನಾಟಕಕಾರ, ಹಾಸ್ಯ ನಾಟಕಗಳ ಮುಖಾಂತರ ರಾಜ್ಯಾದ್ಯಂತ ಮನೆಮಾತಾಗಿದ್ದರು.
ರಿಯಾಲಿಟಿ ಶೋಗಳ ಮೂಲಕ ನಾಡಿನೆಲ್ಲೆಡೆ ಹೆಸರಾಗಿದ್ದ ಕಾಮಿಡಿ ಕಿಲಾಡಿ ಸೀಸನ್ 3ರ ವಿಜೇತ ಹಾಗೂ ಕಾಂತಾರ ಚಾಪ್ಟರ್ -1 ಸಿನಿಮಾದಲ್ಲಿ ಬಣ್ಣ ಹಚ್ಚಿದ್ದ ನಟ ರಾಕೇಶ್ ಪೂಜಾರಿ ತಮ್ಮ 35ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಮೇ 11ರಂದು ನಿಧನರಾದರು.
ವಚನ ಸಾಹಿತ್ಯವನ್ನು ಪ್ರಕಟಿಸುವ, ಪ್ರಚಾರ ಮಾಡುವ, ಅನುಷ್ಠಾನಗೊಳಿಸುವ, ಶಾಶ್ವತಗೊಳಿಸುವ ನಿಟ್ಟಿನಲ್ಲಿ ನಾಡಿನಲ್ಲಿ ಹಲವರ ಸೇವೆ ಗಣನೀಯ. ಈ ನಿಟ್ಟಿನಲ್ಲಿ ಬಸವಣ್ಣನವರ ಜನ್ಮಸ್ಥಳವಾದ ಇಂಗಳೇಶ್ವರದ ವಿರಕ್ತ ಮಠದ ಶ್ರೀ ಚನ್ನಬಸವ ಸ್ವಾಮಿಗಳ ಪಾತ್ರವೂ ಅತ್ಯಂತ ಹಿರಿದು. ವಚನ ಶಿಲಾಮಂಟಪವನ್ನು ಸ್ಥಾಪಿಸಿದ ಪೂಜ್ಯರು ತಮ್ಮ 97ನೇ ಇಳಿವಯಸ್ಸಿನಲ್ಲಿ ಡಿ.11ರಂದು ಲಿಂಗೈಕ್ಯರಾದರು.
ಹಸಿರನ್ನೇ ಉಸಿರಾಗಿಸಿಕೊಂಡು ಜೀವಿಸಿದ ಸಾಲುಮರದ ತಿಮ್ಮಕ್ಕ ಮಕ್ಕಳಿಲ್ಲದ ಕೊರಗು ನೀಗಿಸಿಕೊಳ್ಳಲು ರಸ್ತೆಯ ಬದಿಗಳಲ್ಲಿ ನೂರಾರು ಆಲದ ಸಸಿಗಳನ್ನು ನೆಟ್ಟು ಅವುಗಳಿಗೆ ನೀರು ಹಾಕಿ ಮಕ್ಕಳಂತೆ ಪೋಷಿಸಿ ಬೆಳೆಸಿದವರು. ಪರಿಸರ ಸಂರಕ್ಷಣೆಯ ಮಹತ್ತರ ಕಾರ್ಯಕ್ಕಾಗಿ ಪದ್ಮಶ್ರೀ ಸೇರಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದವರು. ವಯೋಸಹಜ ಅನಾರೋಗ್ಯ ದಿಂದಾಗಿ ನ. 14ರಂದು ತಮ್ಮ 114ನೇ ವಯಸ್ಸಿನಲ್ಲಿ ನಿಧನ ಹೊಂದಿದರು.