ಕೌಟುಂಬಿಕ ಕಲಹಕ್ಕೆ ಭೀಕರ ರಕ್ತಪಾತ; ಪತ್ನಿ, ನಾದಿನಿಯನ್ನು ಕಟುಕನಂತೆ ಕೊಂದ ಪತಿ!

ಕೊಲೆಯಾದ ಮಹಿಳೆಯರು, ಕೊಲೆಗೈದ ಆರೋಪಿ ಎಬಾಜ್​
ಕೊಲೆಯಾದ ಮಹಿಳೆಯರು, ಕೊಲೆಗೈದ ಆರೋಪಿ ಎಬಾಜ್​
Published on
ಚಿಂತಾಮಣಿ: ಕೌಟುಂಬಿಕ ಸಮಸ್ಯೆಗೆ ಬೇಸತ್ತ ಪತಿಯೊಬ್ಬ ತನ್ನ ಪತ್ನಿ ಹಾಗೂ ನಾದಿನಿಯನ್ನು ಅತ್ಯಂತ ಭೀಕರವಾಗಿ ಕೊಲೆಗೈದ ಘಟನೆ ನಗರದ ಜೆ.ಜೆ ಕಾಲೋನಿಯಲ್ಲಿ ಸೋಮವಾರ ಮುಂಜಾನೆ ಸಂಭವಿಸಿದೆ.
ಕೊಲೆ ಮಾಡಿದ ಆರೋಪಿಯನ್ನು ಕೋಲಾರ ಗಲ್‌ಪೇಟೆ ಮೂಲದ ನಿವಾಸಿ ಎಜಾಜ್ (30) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಆರೋಪಿಯ ಪತ್ನಿ ಶಮಾ (25) ಹಾಗೂ ಆಕೆಯ ತಂಗಿ (ನಾದಿನಿ) ರೇಷ್ಮಾ (18) ಧಾರುಣವಾಗಿ ಸಾವನ್ನಪ್ಪಿದ ದುರ್ದೈವಿಗಳು. ಇನ್ನು ಮೃತಳ ತಂದೆ ಸರ್ದಾರ್ ಪಾಷಾ ಮತ್ತು ತಾಯಿ ಕವಿತಾ ಅಂತರ್ಜಾತಿ ವಿವಾಹವಾಗಿದ್ದು, ಅವರಿಗೆ ಐದು ಮಂದಿ ಹೆಣ್ಣು ಮಕ್ಕಳು. ಈ ಪೈಕಿ ಕೊಲೆಯಾದ ಶಮಾ 2ನೇ ಮಗಳಾದರೆ, ರೇಷ್ಮಾ 5ನೇ ಪುತ್ರಿ ಎನ್ನಲಾಗಿದೆ.

ಕೊಲೆಗೆ ಕಾರಣವೇನು?

ಪೊಲೀಸ್ ಮೂಲಗಳ ಪ್ರಕಾರ, ಆರೋಪಿ ಎಜಾಜ್ ಹಾಗೂ ಮೃತ ಶಮಾ ದಂಪತಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಒಂದು ಹೆಣ್ಣು ಮಗುವಿದೆ. ಆದರೆ, ಕಳೆದ ಮೂರು ತಿಂಗಳಿನಿಂದ ದಂಪತಿಗಳ ನಡುವೆ ವಿಪರೀತ ಕೌಟುಂಬಿಕ ಕಲಹ ಹಾಗೂ ಗಲಾಟೆಗಳು ನಡೆಯುತ್ತಿತ್ತು ಎನ್ನಲಾಗಿದೆ. ಇದೇ ವಿರಸ ಮುಂದುವರಿದು, ಭಾನುವಾರ ರಾತ್ರಿ ಕೋಲಾರದಿಂದ ಚಿಂತಾಮಣಿಯಲ್ಲಿ ಪತ್ನಿ ಮನೆಗೆ ಬಂದಾಗ ಜಟಾಪಟಿ ನಡೆದಿದೆ.
ಸೋಮವಾರ ಮುಂಜಾನೆ ಮತ್ತೆ ಗಲಾಟೆ ನಡೆದು, 6 ಗಂಟೆಯ ಸುಮಾರಿಗೆ ಜಗಳ ವಿಕೋಪಕ್ಕೆ ತಿರುಗಿದೆ. ಕೋಪಕ್ಕೆ ತುತ್ತಾದ ಎಜಾಜ್, ಪತ್ನಿ ಶಮಾ ಹಾಗೂ ನಾದಿನಿ ರೇಷ್ಮಾ ಇಬ್ಬರನ್ನೂ ಭೀಕರವಾಗಿ ಹತ್ಯೆಗೈದು, ಮನೆಯಲ್ಲಿದ್ದ ಮೂವರು ಮಕ್ಕಳನ್ನು ತನ್ನೊಂದಿಗೆ ಕೋಲಾರಕ್ಕೆ ಕರೆದೊಯ್ದು ಪರಾರಿಯಾಗಿದ್ದ.

ಕೋಲಾರ ಠಾಣೆಯಲ್ಲಿ ಶರಣು

ಡಬಲ್ ಮರ್ಡರ್ ಮಾಡಿ ಸ್ಥಳದಿಂದ ಕೋಲಾರಕ್ಕೆ ತನ್ನ ಮೂರು ಮಕ್ಕಳ ಜೊತೆ ಪರಾರಿಯಾದ ಆರೋಪಿ ಏಜಾಜ್, ಮೂರು ಮಕ್ಕಳನ್ನು ತನ್ನ ಮನೆಯಲ್ಲಿ ಬಿಟ್ಟು ಕೋಲಾರದ ಗಲ್‌ಪೇಟೆ ಠಾಣೆಗೆ ಬಂದು ತಾನೇ ಕೊಲೆ ಮಾಡಿದ್ದಾಗಿ ಶರಣಾಗಿದ್ದಾನೆ. ಕೋಲಾರ ಪೊಲೀಸ್‌ರು ಚಿಂತಾಮಣಿ ನಗರ ಠಾಣೆಯ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಅರೋಪಿಯನ್ನು ತಮ್ಮ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ಸ್ಥಳಕ್ಕೆ ಹಿರಿಯ ಅಧಿಕಾರಿಗಳ ಭೇಟಿ

ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಎಸ್ಪಿ ಕುಶಲ್ ಚೌಕ್ಸೆ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಗನ್ನಾಥ್ ರೈ, ಚಿಂತಾಮಣಿ ಪ್ರಭಾರಿ ಡಿವೈಎಸ್ಪಿ ಪ್ರಕಾಶ್, ನಗರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ವಿ.ಜಿ. ಕುಮಾರ್, ಗ್ರಾಮಾಂತರ ಠಾಣೆಯ ಅಧಿಕಾರಿ ಶಿವರಾಜ್, ಕೆಂಚಾರ್ಲಹಳ್ಳಿ ಠಾಣೆಯ ನಾರಾಯಣಸ್ವಾಮಿ, ಶಿಡ್ಲಘಟ್ಟ ಇನ್ಸ್ಪೆಕ್ಟರ್ ಆನಂದ್, ಕೆಂಚರ‍್ಲಹಳ್ಳಿ ಪಿಎಸ್‌ಐ ಶ್ಯಾಮಲಾ, ನಗರ ಠಾಣೆಯ ಪಿಎಸ್‌ಐ ರಮೇಶ್ ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಒಂದೇ ಮನೆಯಲ್ಲಿ ಇಬ್ಬರು ಮಹಿಳೆಯರ ಭೀಕರ ಕೊಲೆ ಸದ್ಯ ಜೆ.ಜೆ ಕಾಲೋನಿಯ ನಿವಾಸಿಗಳಲ್ಲಿ ಆತಂಕದ ವಾತಾವರಣ ಸೃಷ್ಟಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net