ನಾಲ್ಕು ಕಂಪನಿ ಹೊಂದಿದ್ದ ನಕಲಿ ಔಷಧ ಕಿಂಗ್‌ಪಿನ್

14 ಕೋಟಿಗೂ ಹೆಚ್ಚು ನಕಲಿ ಔಷಧ ಮಾರಾಟ , ಎಸ್‌ಐಟಿ ತನಿಖೆಯಿಂದ ಅಕ್ರಮ ಬಯಲಿಗೆ
Fake medicine
Fake medicine
Published on: 

ಬೆಂಗಳೂರು: ಬಿಡದಿ ಫಾರ್ಮ್‌ಹೌಸ್‌ನಲ್ಲಿ ತಯಾರಾಗುತ್ತಿದ್ದ ನಕಲಿ ಔಷಧ ಜಾಲದ ಪ್ರಮುಖ ಆರೋಪಿ ಪ್ರಶಾಂತ್ ರಾಜನ್ ವಿವಿಧ ಹೆಸರಿನಲ್ಲಿ ಕಂಪನಿಗಳನ್ನು ತೆರೆದು, ಅಂದಾಜು 14 ಕೋಟಿಗೂ ಹೆಚ್ಚು ಮೌಲ್ಯದ ನಕಲಿ ಔಷಧಗಳನ್ನು ಮಾರಾಟ ಮಾಡಿರುವುದನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಪತ್ತೆ ಮಾಡಿದೆ.

ಮೂರು ಕಂಪನಿಗಳನ್ನು ತೆರೆದು ಅವುಗಳ ಮೂಲಕ ನಕಲಿ ಔಷಧಗಳನ್ನು ಮಾರಾಟ ಮಾಡಿದ್ದ ಆರೋಪಿ, ನಂತರ ಯಾರಿಗೂ ಸಂಶಯ ಬಾರದಂತೆ ಆ ಕಂಪನಿಗಳನ್ನು ಮುಚ್ಚಿದ್ದ. ಕಂಪನಿಗಳ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವಹಿವಾಟು ನಡೆಸಿರುವ ಬಗ್ಗೆ ಎಸ್‌ಐಟಿ ನಡೆಸುತ್ತಿರುವ ತನಿಖೆ ವೇಳೆ ನಕಲಿ ಔಷಧ ದಂಧೆ ಜಾಲದ ಅಘಾತಕಾರಿ ಅಂಶಗಳು ಬಯಲಿಗೆ ಬರುತ್ತಿವೆ.

ನಾಲ್ಕನೇ ಕಂಪನಿ ವೇಳೆ ಕೃತ್ಯ ಬೆಳಕಿಗೆ:

ದೇಶ ವಿದೇಶಗಳಲ್ಲಿ ಕಡಿಮೆ ಬೆಲೆ ಔಷಧವನ್ನು ದುಬಾರಿ ಬೆಲೆಯ ಲೇಬಲ್ ಅಂಟಿಸಿ ಮಾರಾಟ ಮಾಲು 4ನೇ ಕಂಪನಿ ತೆರೆದಿದ್ದ ವೇಳೆ ಅಕ್ರಮ ಕೃತ್ಯ ಬೆಳಕಿಗೆ ಬಂದಿದೆ. ಈ ಕಂಪನಿ ಮೂಲಕವೂ ಕೋಟ್ಯಂತರ ರೂ.ಬೆಲೆಯ ಔಷಧವನ್ನು ಮಾರಾಟ ಮಾಡಿದ್ದ. ಬಹುರಾಷ್ಟ್ರೀಯ ಕಂಪನಿ ಹಾಗೂ ಬೇರೆ ಬೇರೆ ಬ್ರ್ಯಾಂಡ್ ಹೆಸರಿನ ಲೇಬಲ್ ಅಂಟಿಸಿ ಔಷಧ ಅಂಗಡಿ ಮತ್ತು ಆಸ್ಪತ್ರೆಗಳಿಗೆ ಮಾರಾಟ ಮಾಡಿದ್ದರು.

ತನಿಖೆ ಚುರುಕುಗೊಳಿಸಿರುವ ಎಸ್‌ಐಟಿ ಅಧಿಕಾರಿಗಳು, ತುರ್ತು ನಿಗಾ ಘಟಕಗಳಲ್ಲಿ ಗಂಭೀರ ಕಾಯಿಲೆಗಳಿಗೆ ಬಳಸುವ ಜೀವ ರಕ್ಷಕ ಔಷಧಗಳನ್ನು ನಕಲಿಯನ್ನಾಗಿ ಮಾಡಿಕೊಂಡು ಮಾರುಕಟ್ಟೆಗೆ ಹಾಗೂ ಪ್ರತಿಷ್ಠಿತ ಆಸ್ಪತ್ರೆಗಳಿಗೆ ಶೇ.50 ರಿಯಾಯಿತಿ ದರದಲ್ಲಿ ಪೂರೈಕೆ ಮಾಡುತ್ತಿದ್ದರು ಎನ್ನಲಾಗಿದೆ. ಆರೋಪಿಗಳ ಕೃತ್ಯ ಹಾಗೂ ನಕಲಿ ಔಷಧ ಸಾಮ್ರಾಜ್ಯ ದೊಡ್ಡ ಮಟ್ಟದಲ್ಲಿ ವಿಸ್ತಾರಗೊಂಡಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net