

ಕಳ್ಳ ವ್ಯವಹಾರಕ್ಕೆ ಮದುವೆಯ ಮಾತು
ಕಡಿಮೆ ದರಕ್ಕೆ ಚಿನ್ನ ಖರೀದಿಸಿ ಲಾಭ ಗಳಿಸುವ ಉದ್ದೇಶದೊಂದಿಗೆ ಆಂಧ್ರದ ತಿರುಪತಿ ಮೂಲದ ಉಷಾ ರಮೇಶ್ ಎಂಬುವವರು ಕುಟುಂಬದ ಸದಸ್ಯರೊಂದಿಗೆ ಚಿಕ್ಕಬಳ್ಳಾಪುರ ತಾಲೂಕಿನ ಚೊಕ್ಕಹಳ್ಳಿಗೆ ಬಂದಿದ್ದರು. ಆದರೆ ಮದುವೆಗಾಗಿ ತಂದಿದ್ದ ಹಣವನ್ನು ಅಪರಿಚಿತರು ಕಿತ್ತುಕೊಂಡು ಹೋಗಿದ್ದಾರೆ ಎಂಬುದಾಗಿ ಮೊದಲು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸಹೋದರಿಯ ಮಗಳ ಮದುವೆಗೆ ಹಣ ಕೊಡಲು ಬೆಂಗಳೂರಿಗೆ ಕಾರಿನಲ್ಲಿ ತೆರಳಲಾಗುತ್ತಿತ್ತು. ಒಡವೆ ಅಡ ಇಟ್ಟಿರುವುದರ ಜತೆಗೆ ಎಲ್ಐಸಿ ವಿಮೆಯಿಂದ 6.50 ಲಕ್ಷ ರೂ. ಸಂಗ್ರಹಿಸಲಾಗಿತ್ತು. ಇದೇ ವೇಳೆ ಊಟ ಮಾಡಲು ಚೊಕ್ಕಹಳ್ಳಿ ಸಮೀಪದ ಡಾಬಾಗೆ ಹೋಗುವಾಗ ಕಟ್ಟಿನಲ್ಲಿದ್ದ ನೋಟನ್ನು ತೆಗೆಯುವುದನ್ನು ಕಳ್ಳರು ನೋಡಿದ್ದರು, ಆಗ ಹತ್ತಿರಕ್ಕೆ ಬಂದು ಹೊಡೆದು ಕಾರಿನಲ್ಲಿದ್ದ ಹಣವನ್ನು ಎತ್ತಿಕೊಂಡು ಪರಾರಿಯಾಗಿದ್ದಾರೆ ಎಂದು ಉಷಾ ರಮೇಶ್ ಅಳಲು ತೋಡಿಕೊಂಡಿದ್ದರು. ಹಾಗೆಯೇ ಠಾಣೆಗೆ ದೂರು ನೀಡಿದ್ದರು.
ಕಂಬಕ್ಕೆ ಕಟ್ಟಿ ಹಾಕಿದ್ದ ಜನ
ಕಕ್ಕಾಬಿಕ್ಕಿಯಾದ ಮಹಿಳೆ ಕೂಗಿ ಕಳ್ಳತನದ ಬಗ್ಗೆ ಅಳಲು ತೋಡಿಕೊಳ್ಳುತ್ತಿದ್ದಂತೆ ಸ್ಥಳದಲ್ಲಿದ್ದ ರೈತರು, ವರ್ತಕರು ಮೂವರ ಪೈಕಿ ಇಬ್ಬರು ಕಳ್ಳರನ್ನು ಹಿಡಿದುಕೊಂಡಿದ್ದರು. ಕೋಪದಲ್ಲಿ ಎಳೆದುಕೊಂಡು ಬಂದು ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ್ದರು. ಹಣ ಕಳುವಿನ ಮಾಹಿತಿ ಪಡೆಯಲು ಯತ್ನಿಸಿದ್ದರು. ಇದರ ನಡುವೆ ನಂದಿ ಗಿರಿಧಾಮ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.
ಚಿಕ್ಕಬಳ್ಳಾಪುರ ತಾಲೂಕಿನ ಚೊಕ್ಕಹಳ್ಳಿ ಸಮೀಪ ತಿರುಪತಿ ಮೂಲದ ಉಷಾ ಎಂಬುವವರಿಂದ ಹಣ ಕಸಿದುಕೊಂಡು ಹೋಗಿದ್ದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿತ್ತು. ಇದರ ತನಿಖೆ ನಡೆಸಿ ಮೂವರನ್ನು ಬಂಧಿಸಲಾಗಿದೆ. ಇವರು ಕಡಿಮೆ ದರಕ್ಕೆ ಚಿನ್ನ ಮಾರಾಟದ ಹೆಸರಿನಲ್ಲಿ ವ್ಯವಹಾರ ಕುದುರಿಸಿದ ಬಳಿಕ ಹಣ ಪಡೆದು ವಂಚಿಸಿದ್ದಾರೆ. ಹಣವನ್ನು ವಶಕ್ಕೆ ಪಡೆಯಲಾಗಿದೆ.
> ಕುಶಾಲ್ ಚೌಕ್ಸೆಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ