ಪ್ರತಿನಿಧಿತ್ವದ ಮೂಲಕ ಪ್ರಜಾಪ್ರಭುತ್ವದ ವಿಸ್ತರಣೆ

Women Reservation Bill
Women Reservation Bill
Published on

(ಲೇಖಕರು, ವಿಧಾನಸಭೆ ವಿರೋಧ ಪಕ್ಷದ ನಾಯಕರು)

ಒಂದು ಸಮಾಜದ ಪ್ರಗತಿಯನ್ನು ಅಳೆಯುವ ಅತ್ಯಂತ ನಿಖರ ಮಾನದಂಡವೆಂದರೆ ಅದರ ಮಹಿಳೆಯರ ಸ್ಥಾನಮಾನ. ಭಾರತದ ಸಂವಿಧಾನದ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರೇ ಹೇಳಿರುವಂತೆ, ಒಂದು ಸಮುದಾಯದ ಪ್ರಗತಿಯನ್ನು ಅದರ ಮಹಿಳೆಯರು ಸಾಧಿಸಿರುವ ಪ್ರಗತಿಯಿಂದಲೇ ಅಳೆಯಬೇಕು.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಈಗ ತರಲು ಹೊರಟಿರುವ ನಾರಿ ಶಕ್ತಿ ವಂದನಾ ಮಸೂದೆ ಅಂಬೇಡ್ಕರ್ ಅವರ ಆಶಯದಂತೆ ಭಾರತದ ಪ್ರಜಾಪ್ರಭುತ್ವದ ಆತ್ಮವನ್ನೇ ವಿವರಿಸುವ ಮಹತ್ವದ ಹೆಜ್ಜೆಯಾಗಿದೆ. ಭಾರತದ ಪ್ರಜಾಪ್ರಭುತ್ವವು ವಿಶ್ವದಲ್ಲೇ ಅತಿದೊಡ್ಡದಾದರೂ, ಅದರ ಪ್ರತಿನಿಧಿತ್ವದ ರಚನೆಯಲ್ಲಿ ಇನ್ನೂ ಕೆಲವು ಅಸಮತೋಲನಗಳಿವೆ. ದೇಶದ ಜನಸಂಖ್ಯೆಯ ಅರ್ಧಭಾಗ ಮಹಿಳೆಯರಾಗಿದ್ದರೂ, ಲೋಕಸಭೆ ಮತ್ತು ವಿಧಾನಸಭೆಗಳಂತಹ ನಿರ್ಧಾರಕ ವೇದಿಕೆಗಳಲ್ಲಿ ಅವರ ಪಾಲು ದೀರ್ಘಕಾಲದಿಂದ ಕಡಿಮೆಯೇ ಇದೆ. ಮಹಿಳೆಯರಿಗೆ ಸಮಾನ ಅವಕಾಶ ಮತ್ತು ಸಮಾನ ಪ್ರತಿನಿಧಿತ್ವ ದೊರಕಿದಾಗ ಮಾತ್ರ ಸಮಾಜದ ಅಭಿವೃದ್ಧಿ ಸಮಗ್ರವಾಗುತ್ತದೆ.
ಪ್ರಜಾಪ್ರಭುತ್ವವು ಕೇವಲ ಮತದಾನದ ಹಕ್ಕಿನಿಂದ ಪೂರ್ಣವಾಗುವುದಿಲ್ಲ; ನಿರ್ಧಾರ ಮಾಡುವ ವೇದಿಕೆಗಳಲ್ಲಿಯೂ ಸಮಾನ ಪಾಲ್ಗೊಳ್ಳುವಿಕೆ ಇದ್ದಾಗ ಮಾತ್ರ ಅದು ಸಂಪೂರ್ಣವಾಗುತ್ತದೆ. ಈ ಅಸಮತೋಲನವನ್ನು ಸರಿಪಡಿಸುವ ಅಗತ್ಯವೇ ಮಹಿಳಾ ಮೀಸಲಾತಿಯ ಮೂಲಭೂತ ತತ್ವ. ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿ ಮಹಿಳಾ ಮೀಸಲಾತಿಯ ಯಶಸ್ಸು ಇದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ. ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಿದ ನಂತರ ಲಕ್ಷಾಂತರ ಮಹಿಳೆಯರು ಸಾರ್ವಜನಿಕ ಜೀವನದಲ್ಲಿ ನಾಯಕತ್ವ ತೋರಿದ್ದಾರೆ. ಗ್ರಾಮ ಪಂಚಾಯತ್ ಅಧ್ಯಕ್ಷರಿಂದ ಹಿಡಿದು ಜಿಲ್ಲಾ ಪಂಚಾಯತ್ ಸದಸ್ಯರತನಕ ಮಹಿಳೆಯರು ಆಡಳಿತದಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.
ಡಾ. ಅಂಬೇಡ್ಕರ್ ಅವರು ಮತ್ತೊಂದು ಮಹತ್ವದ ವಿಚಾರವನ್ನು ಒತ್ತಿ ಹೇಳಿದ್ದರು- ‘ರಾಜಕೀಯ ಪ್ರಜಾಪ್ರಭುತ್ವದ ಜತೆಗೆ ಸಾಮಾಜಿಕ ಪ್ರಜಾಪ್ರಭುತ್ವವೂ ಬಲವಾಗಿರಬೇಕು. ಅಂದರೆ ಸಮಾಜದ ಎಲ್ಲ ವರ್ಗಗಳಿಗೂ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಸಮಾನ ಅವಕಾಶ ಇರಬೇಕು.’ ಮಹಿಳೆಯರ ರಾಜಕೀಯ ಪ್ರಾತಿನಿಧ್ಯವನ್ನು ಹೆಚ್ಚಿಸುವುದು ಈ ದೃಷ್ಟಿಕೋನದ ಸಹಜ ವಿಸ್ತರಣೆಯಾಗಿದೆ. ಇದನ್ನೇ ದೇಶದ ಉನ್ನತ ಶಾಸನಾಂಗಗಳಾದ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿಯೂ ವಿಸ್ತರಿಸುವ ಅಗತ್ಯ ಬಹುಕಾಲದಿಂದ ಚರ್ಚೆಯಲ್ಲಿತ್ತು. ಆದರೆ ಹಲವು ದಶಕಗಳ ಕಾಲ ಈ ವಿಚಾರ ಚರ್ಚೆಯಲ್ಲೇ ಉಳಿದುಕೊಂಡಿತ್ತು. ರಾಜಕೀಯ ಇಚ್ಛಾಶಕ್ತಿ ಇದ್ದಾಗ ಮಾತ್ರ ಸುಧಾರಣೆಗಳು ಕಾನೂನಾಗಿ ರೂಪುಗೊಳ್ಳುತ್ತವೆ. ಹಲವು ದಶಕಗಳಿಂದ ಸಾಧ್ಯವಾಗದ ಈ ಸುಧಾರಣೆ ಈಗ ಸಾಧ್ಯವಾಗುತ್ತಿದೆ ಎಂದರೆ ಅದಕ್ಕೆ ಮೋದಿ ಸರ್ಕಾರದ ರಾಜಕೀಯ ಇಚ್ಛಾಶಕ್ತಿ, ಬದ್ಧತೆಯೇ ಕಾರಣ.
ಈ ಹಿನ್ನೆಲೆಯಲ್ಲೇ ನಾರಿ ಶಕ್ತಿ ವಂದನಾ ಅಧಿನಿಯಮ ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಮಹತ್ವದ ಮೈಲುಗಲ್ಲಾಗಿದೆ. ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಭಾಗದಷ್ಟು ಮೀಸಲಾತಿ ಒದಗಿಸುವ ಈ ಕಾಯ್ದೆ ಭವಿಷ್ಯದಲ್ಲಿ ಭಾರತದ ರಾಜಕೀಯದ ಸ್ವರೂಪವನ್ನೇ ಬದಲಾಯಿಸುವ ಸಾಮರ್ಥ್ಯ ಹೊಂದಿದೆ. ಕೆಲವರು ಈ ವಿಚಾರದಲ್ಲಿ ಕ್ರೆಡಿಟ್ ರಾಜಕೀಯ ನಡೆಸಲು ಪ್ರಯತ್ನಿಸುತ್ತಿದ್ದಾರೆ. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿ ನೀಡಿದ ಕ್ರಮವನ್ನು ಕಾಂಗ್ರೆಸ್ ತನ್ನ ಸಾಧನೆ ಎಂದು ಹೇಳುತ್ತದೆ. ಆದರೆ ಒಂದು ಪ್ರಶ್ನೆ ಇಲ್ಲಿ ಸಹಜವಾಗಿ ಉದ್ಭವಿಸುತ್ತದೆ. ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ನೀಡಲು ಸಾಧ್ಯವಾಗಿದ್ದರೆ, ಸಂಸತ್ ಮತ್ತು ವಿಧಾನಸಭೆಗಳಲ್ಲಿ ಅದೇ ಕ್ರಮವನ್ನು ಜಾರಿಗೆ ತರಲು ಮೂರು ದಶಕಗಳು ಏಕೆ ಬೇಕಾಯಿತು?
2010ರಲ್ಲಿ ಮಹಿಳಾ ಮೀಸಲಾತಿ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರವಾದುದು ಸತ್ಯ. ಆದರೆ ಅದೇ ಸರ್ಕಾರ ಲೋಕಸಭೆಯಲ್ಲಿ ಅದನ್ನು ಮಂಡಿಸಲು ಸಾಧ್ಯವಾಗಲಿಲ್ಲ. ರಾಜಕೀಯ ಸಮೀಕರಣಗಳ ಮುಂದೆ ಮಹಿಳಾ ಪ್ರತಿನಿಧಿತ್ವದ ಪ್ರಶ್ನೆಯೇ ಬಲಿಯಾಗಿದ್ದುದನ್ನು ಇತಿಹಾಸವೇ ಹೇಳುತ್ತದೆ. ಇಂದು ಕೆಲವರು ಈ ಕಾಯ್ದೆಯನ್ನು ಚುನಾವಣಾ ತಂತ್ರ ಎಂದು ಟೀಕಿಸುತ್ತಿದ್ದಾರೆ. ಇನ್ನೂ ಕೆಲವರು ಜನಗಣತಿ ಮತ್ತು ಕ್ಷೇತ್ರ ಮರುವಿಂಗಡಣೆಯನ್ನು ನೆಪವಾಗಿಸಿ ಜಾರಿ ವಿಳಂಬವಾಗುತ್ತದೆ ಎಂದು ಹೇಳುತ್ತಿದ್ದಾರೆ. ಆದರೆ ಇಲ್ಲಿ ಒಂದು ಮೂಲಭೂತ ಸತ್ಯವನ್ನು ಗಮನಿಸಬೇಕು.
ಲೋಕಸಭೆ ಮತ್ತು ವಿಧಾನಸಭೆಗಳ ಪ್ರತಿನಿಧಿತ್ವವನ್ನು ಮರುಸಂರಚಿಸುವಂತಹ ಮಹತ್ವದ ಕ್ರಮಗಳು ಜನಗಣತಿ ಮತ್ತು ಕ್ಷೇತ್ರ ಮರುವಿಂಗಡಣೆ ಎಂಬ ಸಂವಿಧಾನಾತ್ಮಕ ಪ್ರಕ್ರಿಯೆಗಳೊಂದಿಗೆ ಜೋಡಿಸಿಕೊಂಡಿರುತ್ತವೆ. ಇದನ್ನು ವಿಳಂಬ ಎಂದು ಕರೆಯುವುದು ಸರಿಯಲ್ಲ; ಅದು ವ್ಯವಸ್ಥೆಯ ನ್ಯಾಯಸಮ್ಮತತೆಯನ್ನು ಕಾಪಾಡುವ ಕ್ರಮವಾಗಿದೆ. ಭವಿಷ್ಯದಲ್ಲಿ ಲೋಕಸಭೆಯ ಸ್ಥಾನಗಳ ಸಂಖ್ಯೆ ಹೆಚ್ಚಾದಾಗ ಮಹಿಳೆಯರಿಗೆ ಸಿಗುವ ಪ್ರತಿನಿಧಿತ್ವವೂ ಗಣನೀಯವಾಗಿ ಏರಲಿದೆ. ಅಂದರೆ, ಈ ಕಾಯ್ದೆ ಕೇವಲ ಸಂಖ್ಯಾತ್ಮಕ ಮೀಸಲಾತಿಯಲ್ಲ; ಅದು ಭಾರತೀಯ ಪ್ರಜಾಪ್ರಭುತ್ವದ ಒಳಗೊಳ್ಳುವಿಕೆಯನ್ನು ವಿಸ್ತರಿಸುವ ವ್ಯವಸ್ಥೆಯಾಗಿದೆ.
ಹಿಂದುಳಿದ ವರ್ಗಗಳ ಮಹಿಳೆಯರ ಒಳ ಮೀಸಲಾತಿಯ ಬಗ್ಗೆ ಕೇಳಿಬರುವ ಟೀಕೆಗಳೂ ಗಮನಾರ್ಹ. ಆದರೆ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ರಾಜಕೀಯ ಸಬಲೀಕರಣದ ಬಗ್ಗೆ ಯಾರು ಯಾವ ಕ್ರಮ ಕೈಗೊಂಡರು ಎಂಬುದನ್ನು ದೇಶದ ಜನತೆ ಚೆನ್ನಾಗಿ ಅರಿತಿದ್ದಾರೆ. ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಂವಿಧಾನಾತ್ಮಕ ಮಾನ್ಯತೆ ನೀಡಿದ ಕ್ರಮವೂ ಇದೇ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಮಹಿಳಾ ಸಬಲೀಕರಣವು ಕೇವಲ ರಾಜಕೀಯ ಪ್ರತಿನಿಧಿತ್ವಕ್ಕೆ ಸೀಮಿತವಾಗಿರಬಾರದು. ಅದು ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿಯೂ ಬಲವಾಗಿರಬೇಕು. ಕಳೆದ ಕೆಲವು ವರ್ಷಗಳಲ್ಲಿ ಜಾರಿಯಾದ ಹಲವಾರು ಯೋಜನೆಗಳು ಮಹಿಳೆಯರ ಬದುಕಿನಲ್ಲಿ ನೇರ ಬದಲಾವಣೆ ತಂದಿವೆ.
ಉಜ್ವಲಾ ಯೋಜನೆಯಡಿ ಕೋಟ್ಯಂತರ ಕುಟುಂಬಗಳಿಗೆ ಗ್ಯಾಸ್ ಸಂಪರ್ಕ ದೊರೆತಿದ್ದು, ಗ್ರಾಮೀಣ ಮಹಿಳೆಯರು ಹೊಗೆ ತುಂಬಿದ ಅಡುಗೆಮನೆಯ ಕಷ್ಟದಿಂದ ಮುಕ್ತರಾಗಿದ್ದಾರೆ. ಮುದ್ರಾ ಯೋಜನೆಯಡಿ ಲಕ್ಷಾಂತರ ಮಹಿಳೆಯರು ಉದ್ಯಮಿಗಳಾಗಿ ಹೊರಹೊಮ್ಮಿದ್ದಾರೆ. ಸ್ವಚ್ಛ ಭಾರತ ಅಭಿಯಾನದಡಿ ನಿರ್ವಿುಸಲಾದ ಶೌಚಾಲಯಗಳು ಮಹಿಳೆಯರ ಗೌರವ ಮತ್ತು ಸುರಕ್ಷತೆಯನ್ನು ಹೆಚ್ಚಿಸಿವೆ. ಈ ಎಲ್ಲ ಕ್ರಮಗಳು ಮಹಿಳಾ ಸಬಲೀಕರಣದ ವಿವಿಧ ಆಯಾಮಗಳನ್ನು ಬಲಪಡಿಸುತ್ತಿವೆ. ರಾಜಕೀಯ ಪ್ರತಿನಿಧಿತ್ವದ ಮೂಲಕ ಈ ಪ್ರಕ್ರಿಯೆ ಇನ್ನಷ್ಟು ಬಲವಾಗಲಿದೆ.
ನಾರಿ ಶಕ್ತಿ ವಂದನಾ ಅಧಿನಿಯಮ ಕೇವಲ ಒಂದು ಕಾನೂನು ಅಲ್ಲ. ಇದು ಭಾರತದ ಪ್ರಜಾಪ್ರಭುತ್ವದ ರಚನೆಯಲ್ಲಿ ಒಂದು ಮಹತ್ವದ ಮೈಲಿಗಲ್ಲು. ಮಹಿಳೆಯರಿಗೆ ಕೇವಲ ಮತದಾನದ ಹಕ್ಕು ಕೊಡುವುದಷ್ಟೇ ಸಾಕಾಗುವುದಿಲ್ಲ; ಶಾಸನ ರಚನೆಯಲ್ಲೂ ಅವರಿಗೆ ಸಮಾನ ಸ್ಥಾನ ನೀಡಬೇಕಾಗಿದೆ. ಇದೇ ಅಂಬೇಡ್ಕರ್ ಅವರ ಸಮಾನತೆಯ ಭಾರತ ಕನಸಿನ ನಿಜವಾದ ಅರ್ಥ. ಭಾರತದ ಪ್ರಜಾಪ್ರಭುತ್ವದ ಮುಂದಿನ ಅಧ್ಯಾಯದಲ್ಲಿ ಮಹಿಳೆಯರ ಧ್ವನಿ ಇನ್ನಷ್ಟು ಪ್ರಬಲವಾಗಲಿದೆ. ಅದು ಕೇವಲ ಮಹಿಳೆಯರ ಜಯವಲ್ಲ. ಅದು ಭಾರತೀಯ ಪ್ರಜಾಪ್ರಭುತ್ವವು ಇನ್ನಷ್ಟು ಸಮಗ್ರ, ಸಮಾನ ಮತ್ತು ಪ್ರತಿನಿಧಿತ್ವಪೂರ್ಣವಾಗುತ್ತಿರುವುದರ ಸಂಕೇತವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net