ಹೆಣ್ಣು ಮಕ್ಕಳಿಗೆ ಶಿಕ್ಷಣ, ಸುರಕ್ಷಿತ ವಾತಾವರಣ ಹಾಗೂ ಆರೋಗ್ಯಕರ ಜೀವನ ಕಲ್ಪಿಸುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿ ಎಂದು ಜಿಲ್ಲಾ ರಕ್ಷಣಾ ಘಟಕದ ಅಧಿಕಾರಿ ರಮೇಶ್ ತಿಳಿಸಿದರು.
ಬಿಳ್ಳೂರಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬೇಟಿ ಬಚಾವೂ ಬೇಟಿ ಪಡಾವೂ ಕಾರ್ಯಕ್ರಮದಲ್ಲಿ ಮಾತನಾಡಿ, ಹೆಣ್ಣು ಮಕ್ಕಳು ಶಿಕ್ಷಣವಂತರಾದಾಗ ಕುಟುಂಬ, ಸಮಾಜ ಹಾಗೂ ದೇಶದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಾರೆ.
ಆದ್ದರಿಂದ ಪಾಲಕರು ಅವರ ಶಿಕ್ಷಣಕ್ಕೆ ಆದ್ಯತೆ ನೀಡಿ, ತಾರತಮ್ಯ, ಶೋಷಣೆ ಹಾಗೂ ಬಾಲ್ಯ ವಿವಾಹದಂತಹ ಅನಿಷ್ಠ ಪದ್ಧತಿ ನಿಮೂರ್ಲನೆ ಮಾಡಲು ಶ್ರಮಿಸಿ, ಸರ್ಕಾರ ಹಲವು ಯೋಜನೆ ಜಾರಿಗೆ ತಂದಿದ್ದು, ಅವುಗಳ ಸದುಪಯೋಗ ಪಡೆಯಿರಿ ಎಂದರು.
ತಾಲೂಕು ರಕ್ಷಣಾ ಘಟಕದ ಅಧಿಕಾರಿ ಸುಜಾತಮ್ಮ ಮಾತನಾಡಿ, ಬಾಲ್ಯ ವಿವಾಹದಿಂದ ಹೆಣ್ಣು ಮಕ್ಕಳ ಆರೋಗ್ಯ, ಶಿಕ್ಷಣ, ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಆದ್ದರಿಂದ ಜಲಗಾರರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಇಂತಹ ಪ್ರಕರಣ ತಡೆಗಟ್ಟಲು ಮುಂದಾಗಬೇಕು. 1098ಕ್ಕೆ ಮಾಹಿತಿ ನೀಡಿ ಎಂದರು.
ಸರ್ಕಾರಿ ಪ್ರೌಢಶಾಲೆ ಪ್ರಭಾರ ಮುಖ್ಯಶಿಕ್ಷಕ ಎನ್.ಆರ್.ಕುಮಾರ್ ಮಾತನಾಡಿ, ಸ್ವಾತಂತ್ಯ ಪೂರ್ವದಲ್ಲಿ ಹೆಣ್ಣು ಮಕ್ಕಳು ಬಂದಿಯಾಗಿರಬೇಕಾಗಿತ್ತು. ಶಾಲೆ, ಉದ್ಯೋಗ ಎಲ್ಲವೂ ಕನಸಾಗಿತ್ತು. ಮಹನೀಯರ ಪ್ರಗತಿಪರ ಚಿಂತನೆಯ ಕಾರಣಕ್ಕೆ ಹೆಣ್ಣು ಮಕ್ಕಳಿಗೆ ಅಕ್ಷರ ಕಲಿಯಲು ಅವಕಾಶ ಸಿಕ್ಕಿತು. ಲಿಂಗ ಆಧರಿಸಿದ ಶ್ರೇಷ್ಠ -ಕನಿಷ್ಠ ಎಂದು ಗುರುತಿಸಬಾರದು ಎಂದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಭಾರ ಮುಖ್ಯಶಿಕ್ಷಕ ಎನ್.ನಾಗರಾಜ್, ಆರೋಗ್ಯ ಸುರಕ್ಷಣ ಅಧಿಕಾರಿ ಶ್ಯಾಮಲಾ, ಎಲ್.ನಾಗರಾಜ, ಆರ್.ಸುರೇಶ್ ಇದ್ದರು.