ಪ್ರತಿಯೊಬ್ಬರೂ ಜ್ಞಾನ ಸಂಪಾದನೆಯತ್ತ ಹೆಚ್ಚಿನ ಗಮನಹರಿಸಿ

ಜಮಖಂಡಿ ತಾಲೂಕಿನ ಗೋಠೆ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪಂಚಲೋಹದ ಪುತ್ಥಳಿಯನ್ನು ಜ್ಞಾನಪ್ರಕಾಶ ಸ್ವಾಮೀಜಿ, ಮಾಜಿ ಶಾಸಕ ಆನಂದ ನ್ಯಾಮಗೌಡ ಅನಾವರಣಗೊಳಿಸಿದರು. ಬೆಳಗಾವಿ ವಲಯದ ಅಬಕಾರಿ ಆಯುಕ್ತ ಕೀರಪ್ಪ ಚಲವಾದಿ, ರ್ಜುನ ದಳವಾಯಿ, ಕಾಲೇಜ್ ಪ್ರಾಂಶುಪಾಲ ಎಸ್.ಎಂ. ಹಾದಿಮನಿ ಇದ್ದರು.
ಜಮಖಂಡಿ ತಾಲೂಕಿನ ಗೋಠೆ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪಂಚಲೋಹದ ಪುತ್ಥಳಿಯನ್ನು ಜ್ಞಾನಪ್ರಕಾಶ ಸ್ವಾಮೀಜಿ, ಮಾಜಿ ಶಾಸಕ ಆನಂದ ನ್ಯಾಮಗೌಡ ಅನಾವರಣಗೊಳಿಸಿದರು. ಬೆಳಗಾವಿ ವಲಯದ ಅಬಕಾರಿ ಆಯುಕ್ತ ಕೀರಪ್ಪ ಚಲವಾದಿ, ರ್ಜುನ ದಳವಾಯಿ, ಕಾಲೇಜ್ ಪ್ರಾಂಶುಪಾಲ ಎಸ್.ಎಂ. ಹಾದಿಮನಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಉರಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಅಭಿಮತ
  • ಡಾ.ಬಿ.ಆರ್.ಅಂಬೇಡ್ಕರ್ ಪಂಚಲೋಹ ಪುತ್ಥಳಿ ಅನಾವರಣ
ಜಮಖಂಡಿ: ಭಾರತದ ಏಕತೆ, ಅಖಂಡತೆ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗೆ ಸಂವಿಧಾನವೇ ರಕ್ಷಾಕವಚವಾಗಿದೆ ಎಂದು ಮೈಸೂರಿನ ಉರಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.
ತಾಲೂಕಿನ ಗೋಠೆ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಬುದ್ಧ ವಿಹಾರ ನಿರ್ಮಾಣ ಸಮಿತಿ, ಕಾಶೀಲಿಂಗೇಶ್ವರ ಕಮಿಟಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಮಂಡಳದ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್.ಅಂಬೇಡ್ಕರ್ ಅವರ ಪಂಚಲೋಹದ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪುತ್ಥಳಿ ಅನಾವರಣ ಮಾಡಿದರೆ ಮಾತ್ರ ಸಾಲದು. ಪ್ರತಿಯೊಬ್ಬರೂ ಶಿಕ್ಷಣವಂತರಾಗಿ ಉನ್ನತ ಹುದ್ದೆಗೇರಬೇಕು. ಇಲ್ಲದಿದ್ದರೆ ಬಾಬಾಸಾಹೇಬರಿಗೆ ದ್ರೋಹ ಬಗೆದಂತೆ ಎಂದರು.
ಪ್ರತಿಯೊಂದು ಊರು, ಗ್ರಾಮಗಳ ಯುವಕರು ಐಎಎಸ್, ಕೆಎಎಸ್, ಐಪಿಎಸ್‌ನಂತಹ ಉನ್ನತ ಹುದ್ದೆಗಳನ್ನು ತಲುಪುವ ಗುರಿ ಹೊಂದಬೇಕು. ದೇವಸ್ಥಾನಗಳಿಗೆ ಅಲೆಯುವುದನ್ನು ಬಿಟ್ಟು ಗ್ರಂಥಾಲಯಗಳ ಕಡೆಗೆ ಮುಖ ಮಾಡಬೇಕು. ಯಾವ ದೇವರೂ ನಿಮಗೆ ನೇರವಾಗಿ ಶಿಕ್ಷಣ, ಅಭಿವೃದ್ಧಿ ನೀಡಲಾರ. ನೀವು ಶಿಕ್ಷಣವಂತರಾದರೆ ಮಾತ್ರ ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಬೆಳೆಯಲು ಸಾಧ್ಯ. ಯುವಜನತೆ ಬಾಬಾಸಾಹೇಬರ ಬದುಕಿನ ಆದರ್ಶಗಳನ್ನು ಅಳವಡಿಸಿಕೊಂಡು ಶಿಕ್ಷಣ ಹಾಗೂ ಜ್ಞಾನ ಸಂಪಾದನೆಯತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಕರೆ ನೀಡಿದರು.
ಮಾಜಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ಅಂಬೇಡ್ಕರ್ ಅವರ ಚಿಂತನೆಗಳಿಂದಾಗಿ ಇಂದು ಸಮಾಜದ ಎಲ್ಲ ವರ್ಗಗಳಿಗೂ ಶಿಕ್ಷಣ, ಮತದಾನ ಹಾಗೂ ಸಮಾನ ಹಕ್ಕುಗಳು ದೊರಕಿವೆ. ಪ್ರತಿಯೊಬ್ಬ ಪೋಷಕರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅಂಬೇಡ್ಕರ ಅವರ ಕನಸನ್ನು ನನಸು ಮಾಡಲು ಶ್ರಮಿಸಬೇಕು ಎಂದರು.
ಬೆಳಗಾವಿ ವಲಯದ ಅಬಕಾರಿ ಆಯುಕ್ತ ಕೀರಪ್ಪ ಚಲವಾದಿ ಮಾತನಾಡಿ, ಜಾತಿ ನಿರ್ಮೂಲನೆ, ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ಸಂವಿಧಾನದ ಮೌಲ್ಯಗಳನ್ನು ಸಮಾಜದಲ್ಲಿ ಬಲಪಡಿಸುವುದು ಅಂಬೇಡ್ಕರ ಅವರ ಪ್ರಮುಖ ಆಶಯವಾಗಿತ್ತು. ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂಬ ಅವರ ಸಂದೇಶವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಗೋಪಿನಾಥ್ ಮೀಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿದ್ಧಾರ್ಥ ಡಿ. ಚಿಮ್ಮಾ ಇದ್ಲಾಯಿ ಅವರು ಅಂಬೇಡ್ಕರ್ ಗೀತೆ ಹಾಡಿ, ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು.
ಅರ್ಜುನ ದಳವಾಯಿ, ಕಾಲೇಜ್ ಪ್ರಾಂಶುಪಾಲ ಎಸ್.ಎಂ. ಹಾದಿಮನಿ ಸೇರಿ ವಿವಿಧ ಸಂಘಟನೆಗಳ ಮುಖಂಡರು, ಗ್ರಾಮಸ್ಥರು ಹಾಗೂ ಅಂಬೇಡ್ಕರ್ ಅಭಿಮಾನಿಗಳು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net