ಕೊಟ್ಟೂರು: ಚಪ್ಪರದಹಳ್ಳಿಯಲ್ಲಿ ರೈಲು ಅಂಡರ್‌ಪಾಸ್‌ನಲ್ಲಿ ಮಳೆ ನೀರು ನಿಲ್ಲುತ್ತಿರುವುದರಿಂದ ಜನರು ಸಂಚಾರಕ್ಕೆ ಸಮಸ್ಯೆ ಎದುರಿಸುವಂತಾಗಿದೆ. ವಿಶೇಷವಾಗಿ ಶವ ಸಂಸ್ಕಾರಕ್ಕೆ ತೆರಳಲು ಗ್ರಾಮಸ್ಥರು ಪರದಾಡಬೇಕಿದೆ.
ಕೊಟ್ಟೂರು-ಹರಿಹರ-ಬೆಂಗಳೂರು ಮಾರ್ಗದಲ್ಲಿ 166ನೇ ಬ್ರಿಡ್ಜ್ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂಬುದು ಸ್ಥಳೀಯರ ಆರೋಪವಾಗಿದೆ. ರೈಲು ಅಂಡರ್‌ಪಾಸ್ ಕೆಳಗಿನಿಂದ ಸ್ಮಶಾನಕ್ಕೆ ಶವ ಸಾಗಿಸಬೇಕಿದೆ.
ಮಳೆಯಿಂದಾಗಿ ಬ್ರಿಡ್ಜ್ ಕೆಳಗೆ ಅಪಾರ ಪ್ರಮಾಣದಲ್ಲಿ ನೀರು ನಿಂತು ಕೆಸರಾಗುತ್ತಿದೆ. ಹೀಗಾಗಿ ಮಳೆ ನೀರು ಇಲ್ಲವೇ ಕೆಸರಿನಲ್ಲಿಯೇ ಶವ ಸಾಗಿಸಬೇಕಾಗಿದೆ. ಮಂಗಳವಾರ ಶವವನ್ನು ತಳ್ಳುಗಾಡಿಯಲ್ಲಿ ಕೆಸರಿನಲ್ಲೇ ತೆಗೆದುಕೊಂಡು ಹೋಗಲಾಯಿತು.
ಕೆಲವೊಮ್ಮೆ ಎದೆ ಮಟ್ಟವರೆಗೂ ನಿಲ್ಲುವ ನೀರಿನಲ್ಲಿಯೇ ಶವ ಸಾಗಿಸಿದ್ದೇವೆ. ಈ ಕುರಿತು ರೈಲ್ವೆ ಇಲಾಖೆಗೆ ಮನವಿ ಕೊಟ್ಟಿದ್ದರೂ ಸ್ಪಂದನೆ ನೀಡಿಲ್ಲ. ಅಧಿಕಾರಿಗಳು ಸಮಸ್ಯೆ ಪರಿಹರಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
"
ಚಪರದಹಳ್ಳಿಯಲ್ಲಿ ರೈಲ್ವೆ 166 ಸೇತುವೆ ಕೆಳಗೆ ನೀರು ನಿಂತು ಸಾರ್ವಜನಿಕರಿಗೆ ಸಮಸ್ಯೆ ಆಗುತ್ತಿರುವ ಬಗ್ಗೆ ಸ್ಥಳೀಯ ರೈಲು ನಿಲ್ದಾಣದ ಮಾಸ್ಟರ್‌ಗೆ ಪತ್ರ ಬರೆದು ಒಂದು ವರ್ಷವಾಗಿದೆ. ನಾವು ಕೆಲಸ ಮಾಡಲು ಕೂಡ ಅವಕಾಶ ಕೊಡುತ್ತಿಲ್ಲ. ನಾವು ಕೆಲಸ ಮಾಡಿಸಲು ಮುಂದಾದರೆ ನಮ್ಮ ವಿರುದ್ಧ ಪ್ರಕರಣ ದಾಖಲಿಸುವುದಾಗಿ ರೈಲ್ವೆ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ಇದರಿಂದಾಗಿ ರೈಲ್ವೆ ಇಲಾಖೆಯೇ ಈ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು.