ಡಿಕೆಶಿ ಸಿಎಂ ಆದ್ರೂ ರಿಯಲ್ ಎಸ್ಟೇಟ್ ಧೋರಣೆಯಿಂದ ಹೊರಬಂದಿಲ್ಲ!... ಬಿಡದಿ ರೈತರ ಶಾಪಕ್ಕೆ ಗುರಿಯಾಗಬೇಡಿ ಎಂದ ವಿಜಯೇಂದ್ರ! | BY Vijayendra

BY Vijayendra | ಬಿಡದಿ ರೈತರ ಶಾಪಕ್ಕೆ ಗುರಿಯಾಗಬೇಡಿ ಎಂದ ವಿಜಯೇಂದ್ರ!
BY Vijayendra | ಬಿಡದಿ ರೈತರ ಶಾಪಕ್ಕೆ ಗುರಿಯಾಗಬೇಡಿ ಎಂದ ವಿಜಯೇಂದ್ರ!
Published on
ಗದಗ: ಬಿಡದಿ ಟೌನ್‌ಶಿಪ್ ಯೋಜನೆ ವಿಚಾರದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಪಟ ನಾಟಕವಾಡುತ್ತಿದ್ದಾರೆ. ಅವರು ಮುಖ್ಯಮಂತ್ರಿಯಾದರೂ ತಮ್ಮ ರಿಯಲ್ ಎಸ್ಟೇಟ್ ಧೋರಣೆಯಿಂದ ಹೊರಬಂದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಆರೋಪಿಸಿದ್ದಾರೆ.
ಇಂದು ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿವೈವಿ, ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ಹಿಂದೂಗಳ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದೆ. ಸರ್ಕಾರದ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣದಿಂದಾಗಿ ಮತೀಯ ಶಕ್ತಿಗಳಿಗೆ ಕರ್ನಾಟಕ ಸ್ವರ್ಗದಂತಾಗಿದ್ದು, ಕೊಲೆ, ದೌರ್ಜನ್ಯಗಳು ನಡೆದರೂ ಕಾಂಗ್ರೆಸ್ ಸರ್ಕಾರ ರಕ್ಷಣೆ ನೀಡುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದರು.

ಬಿಡದಿ ಟೌನ್‌ಶಿಪ್ ಯೋಜನೆಯಿಂದ ರೈತರಿಗೆ ಸಂಕಷ್ಟ

ಡಿ ಕೆ ಶಿವಕುಮಾರ್ ಸಿಎಂ ಆಗಿ ಅಧಿಕಾರ ವಹಿಸಿಕೊಂಡ 24 ಗಂಟೆಗಳಲ್ಲಿಯೇ ಬಿಡದಿಯ ರೈತರ ಫಲವತ್ತಾದ ಜಮೀನನ್ನು ಕಸಿದುಕೊಳ್ಳಲು ಮುಂದಾಗಿದ್ದಾರೆ. ಒಂದೆಡೆ ಬಲವಂತವಾಗಿ ಜಮೀನು ಕಸಿದುಕೊಳ್ಳುವುದಿಲ್ಲ, ಸ್ವ-ಇಚ್ಛೆಯಿಂದ ಮುಂದೆ ಬಂದ ರೈತರ ಜಮೀನನ್ನು ಮಾತ್ರ ತೆಗೆದುಕೊಳ್ಳುತ್ತೇವೆ ಎಂದು ಹೇಳುತ್ತಾರೆ. ಆದರೆ, ರಾತ್ರೋರಾತ್ರಿ ಗೂಂಡಾಗಳು ಮನೆ ಬಾಗಿಲಿಗೆ ಬಂದು ಜಮೀನು ಬಿಟ್ಟುಕೊಡುವಂತೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಸ್ವತಃ ಅಲ್ಲಿಯ ರೈತರೇ ಕಣ್ಣೀರಿಡುತ್ತಿದ್ದಾರೆ. ಸಿಎಂ ಹಾಗೂ ಅವರ ಬಂಧು ಬಳಗದ ಬಳಿ ನೂರಾರು, ಸಾವಿರಾರು ಎಕರೆ ಜಮೀನಿದೆ. ಅದನ್ನು ಬಿಟ್ಟು, ಬಡ ಹಾಗೂ ಸಣ್ಣ ರೈತರ ಹೊಟ್ಟೆಯ ಮೇಲೆ ಹೊಡೆಯುತ್ತಿದ್ದಾರೆ ಎಂದು ಸ್ಥಳೀಯ ರೈತರ ಆರೋಪವನ್ನು ವಿಜಯೇಂದ್ರ ಉಲ್ಲೇಖಿಸಿದರು.
ಬಿಡದಿ ಸಮಿತಿ ರಚನೆ ಮಾಡಿದರೂ ನಾವು ಯೋಜನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಸಿಎಂ ಸ್ಪಷ್ಟವಾಗಿ ಹೇಳಿದ್ದಾರೆ. ಭೂಮಿ ಬಿಟ್ಟುಕೊಡುವುದಿಲ್ಲ ಎಂಬ ರೈತರ ಸ್ಪಷ್ಟ ನಿಲುವಿದ್ದರೂ, ಸರ್ಕಾರ ಸಮಿತಿ ಮಾಡುತ್ತೇವೆ ಎನ್ನುವುದು ಶೋಭೆ ತರುವುದಿಲ್ಲ. ರೈತರ ನೆಮ್ಮದಿ ಕೆಡಿಸುವ ಈ ಸಮಿತಿಯ ಅಗತ್ಯವೇ ಇಲ್ಲ ಎಂದರು.

ರಾಹುಲ್ ಗಾಂಧಿ ಬಿಡದಿ ರೈತರ ಪರ ನಿಲ್ಲಲಿ

ಭಾರತ ಜೋಡೋ ಯಾತ್ರೆ ಮಾಡಿದ ರಾಹುಲ್ ಗಾಂಧಿ ಅವರು ಈಗ ಎಲ್ಲಿದ್ದಾರೆ..? ಅವರು ವಿದೇಶಿ ಪ್ರವಾಸದಲ್ಲಿದ್ದುಕೊಂಡು ಪ್ರಪಂಚದ ಬೇರೆ ಬೇರೆ ದೇಶಗಳಿಂದ ಫೋಟೋ ಅಪ್‌ಲೋಡ್ ಮಾಡುತ್ತಿದ್ದಾರೆ. ಅವರಲ್ಲಿ ನನ್ನ ಮನವಿಯೆಂದರೆ, ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಅವರು ಸರ್ಕಾರದ ಈ ಧೋರಣೆಯನ್ನು ಖಂಡಿಸಿ, ರೈತರ ಪರವಾಗಿ ನಿಲ್ಲಬೇಕು. ಬಿಡದಿ ಮಾತ್ರವಲ್ಲದೆ, ಇಡೀ ರಾಜ್ಯದ ರೈತರ ರಕ್ಷಣೆಗೆ ಅವರು ಧ್ವನಿಯಾಗಬೇಕು ಎಂದು ಒತ್ತಾಯಿಸಿದರು.

ಕುಮಾರಸ್ವಾಮಿ-ಡಿಕೆಶಿ ಜಟಾಪಟಿ

ನಾನು ಸಿಎಂ ಆಗಿರುವುದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಸಿಎಂ ಡಿಕೆಶಿ ಡೈಲಾಗ್‌ಗಳನ್ನು ಹೊಡೆಯುತ್ತಿದ್ದಾರೆ. ಮೊದಲು ಇಂತಹ ಡೈಲಾಗ್ ಹೊಡೆಯುವುದನ್ನು ಬಿಟ್ಟು ರೈತರ ನೆರವಿಗೆ ಬರಲಿ. ಸಿಎಂ ತಮ್ಮ ಚಾಣಾಕ್ಷತನದಿಂದ ರಾಮನಗರ ಜಿಲ್ಲೆಯ ಹೆಸರನ್ನು ಬದಲಾವಣೆ ಮಾಡಿದರು. ಈಗ ರೈತರ ಜಮೀನು ಕಸಿದುಕೊಳ್ಳಲು ಹೊರಟಿದ್ದಾರೆ. ಸಿಎಂ ಹಾಗೂ ಅವರ ಬಂಧುಬಳಗ ಸಾವಿರಾರು ಎಕರೆ ಜಮೀನು ಹೊಂದಿದ್ದಾರೆ, ಅಲ್ಲಿಯೇ ಟೌನ್‌ಶಿಪ್ ಮಾಡಲಿ ಎಂದು ರೈತರು ಹೇಳುತ್ತಿದ್ದಾರೆ. ಆದ್ದರಿಂದ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡಬೇಡಿ, ರೈತರ ಶಾಪಕ್ಕೆ ಗುರಿಯಾಗಬೇಡಿ ಎಂದು ಬಿ ವೈ ವಿಜಯೇಂದ್ರ ಎಚ್ಚರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net