ಗ್ರಾಮಕ್ಕೊಂದು ಅಂಗನವಾಡಿ ಕೇಂದ್ರ ಸ್ಥಾಪಿಸಿ

Establish an Anganwadi center in the village
Establish an Anganwadi center in the village
Published on
ಶಿರಾ : ನಮ್ಮೂರಲ್ಲಿರುವ ಮಕ್ಕಳಿಗೆ ಅಂಗನವಾಡಿ ಕೇಂದ್ರವಿಲ್ಲ. ಇದರಿಂದ ಮನೆಯಲ್ಲೇ ಮಕ್ಕಳು ಉಳಿಸಿಕೊಳ್ಳಬೇಕಿದೆ. ಜತೆಗೆ ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಸೌಲಭ್ಯ ಪಡೆದುಕೊಳ್ಳಲು ಕಷ್ಟವಾಗಿದೆ. ಕೂಡಲೇ ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ನಿರ್ಮಿಸಬೇಕೆಂದು ಶಿರಾ ತಾಲೂಕಿನ ಚಿಕ್ಕನಹಳ್ಳಿ ಗ್ರಾಪಂನಲ್ಲಿ ನಡೆದ ಮಹಿಳಾ ಗ್ರಾಮಸಭೆಯಲ್ಲಿ ಜಯಚಂದ್ರ ಬಡಾವಣೆ ಮಹಿಳೆಯರು ಮನವಿ ಮಾಡಿದರು.
ಗ್ರಾಮ ಸಭೆಯಲ್ಲಿ ಮಹಿಳೆಯರು ಗ್ರಾಮೀಣಾಭಿವೃದ್ಧಿ, ಮಹಿಳಾ ಸಬಲೀಕರಣ ಹಾಗೂ ಸಾಮಾಜಿಕ ಸಮಸ್ಯೆ ಕುರಿತು ಚರ್ಚಿಸಿದರು. ಗ್ರಾಮದ ಸಮಸ್ಯೆ ಗುರುತಿಸಿ, ಮಹಿಳೆಯರ ಧ್ವನಿಯನ್ನು ಆಡಳಿತದ ಗಮನಕ್ಕೆ ತರುವ ಮಹತ್ವದ ವೇದಿಕೆಯಾಗಿ ಮಹಿಳಾ ಗ್ರಾಮ ಸಭೆ ಪರಿಣಮಿಸಿತು. ಸಭೆಯಲ್ಲಿ ಅಕ್ರಮ ಮದ್ಯ ಮಾರಾಟ, ಅಂಗನವಾಡಿಗೆ ವಿದ್ಯುತ್​ ಸಂಪರ್ಕ ನೀಡುವುದು, ಗ್ರಾಮದ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಬಗ್ಗೆ, ಒಳಚರಂಡಿ ಸ್ವಚ್ಛತೆ, ಅಂಬೇಡ್ಕರ್​ ಭವನ ನಿರ್ಮಾಣ ಸೇರಿದಂತೆ ಪ್ರಮುಖ ಸಮಸ್ಯೆ ಬಗ್ಗೆ ಮಹಿಳೆಯರು ಪ್ರಶ್ನೆ ಕೇಳಿ ಪರಿಹಾರಕ್ಕೆ ಒತ್ತಾಯಿಸಿದರು.
ನವ್ಯದಿಶ ಸಂಸ್ಥೆಯ ಮಂಜುನಾಥ್​ ಅಮಲಗೊಂದಿ ಮಾತನಾಡಿ, ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಸ್ಥಳಿಯ ಆಡಳಿತದಲ್ಲಿ ಗ್ರಾಪಂ ಮತ್ತು ಗ್ರಾಮಸಭೆಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಒತ್ತು ನೀಡಬೇಕಾಗಿದೆ. ಮಹಿಳೆಯರು ವಾರ್ಡ್​ ಮತ್ತು ಗ್ರಾಮ ಸಭೆಗಳಲ್ಲಿ ಭಾಗವಹಿಸಿ ತಮ್ಮ ಸಮಸ್ಯೆ ಮತ್ತು ಬೇಡಿಕೆಗಳನ್ನು ಮಂಡಿಸಬೇಕಾಗಿದೆ ಎಂದರು.
ಇದಕ್ಕೆ ಪಿಡಿಒ ಎನ್​.ಮಂಜುನಾಥ್​ ಪ್ರತಿಕ್ರಿಯಿಸಿ, ಸಮಸ್ಯೆಯನ್ನು ತುರ್ತಾಗಿ ಬಗೆಹರಿಸುವಂತೆ ಭರವಸೆ ನೀಡಿದರು. ಜತೆಗೆ ಗ್ರಾಪಂನಿಂದ ದೊರೆಯುವ ವಿವಿಧ ಸೌಲಭ್ಯ, ನರೇಗಾ ಯೋಜನೆ ಹಾಗೂ ಇತರ ಸರ್ಕಾರಿ ಯೋಜನೆಗಳ ಕುರಿತು ಮಾಹಿತಿ ಹಂಚಿಕೊಂಡರು. ಸಂಜೀವಿನಿ ಒಕ್ಕೂಟದ ಪಶು ಸಖಿ ಮೇಘಶ್ರೀ, ಕೃಷಿ ಸಖಿ ಜಿ.ಮಮತಾ ಸೇರಿದಂತೆ ಹಲವು ಮಹಿಳಾ ಕಾರ್ಯಕರ್ತೆಯರು, ನವ್ಯದಿಶದ ಮೆಂಟರ್​ ಸಲ್ಮಾ, ಪಂಚಾಯಿತಿ ಸಿಬ್ಬಂದಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net