ಸಿಂದಗಿ ನಗರದಲ್ಲಿ ರಜಪೂತ ಅಭಿವೃದ್ಧಿ ಮಂಡಳಿ ಸ್ಥಾಪಿಸುವಂತೆ ಪ್ರತಿಭಟನಾ ಜಾಥಾ ಮೂಲಕ ತಹಸೀಲ್ದಾರ್ ಕರೆಪ್ಪ ಬೆಳ್ಳಿ ಅವರಿಗೆ ಮನವಿ ಸಲ್ಲಿಸಲಾಯಿತು. ಶಿವಲಾಲಸಿಂಗ್ ರಜಪೂತ, ದಶರಥಸಿಂಗ್ ರಜಪೂತ, ಹೀರಾಸಿಂಗ್ ರಜಪೂತ ಸೇರಿ ಮತ್ತಿತರರಿದ್ದರು.
ಸಿಂದಗಿ: ರಜಪೂತ ಸಮಾಜದ ಏಳಿಗೆಗಾಗಿ ರಜಪೂತ ಅಭಿವೃದ್ಧಿ ಮಂಡಳಿ ಸ್ಥಾಪಿಸುವಂತೆ ಆಗ್ರಹಿಸಿ, ರಾಷ್ಟ್ರವೀರ ಮಹಾರಾಣಾ ಪ್ರತಾಪ್‌ಸಿಂಗ್ ರಜಪೂತ ಕ್ಷೇಮಾಭಿವೃದ್ಧಿ ಸಂಘ ಹಾಗು ತಾಲೂಕು ರಜಪೂತ ಸಮಾಜದ ವತಿಯಿಂದ ಮುಖ್ಯಮಂತ್ರಿಗಳಿಗೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರಿಗೆ ತಹಸೀಲ್ದಾರ್ ಕರೆಪ್ಪ ಬೆಳ್ಳಿ ಅವರ ಮುಖಾಂತರ ಶುಕ್ರವಾರ ಮನವಿ ಸಲ್ಲಿಸಿದರು.
ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ಜಾಥಾ ಟಿಪ್ಪು ಸುಲ್ತಾನ್ ವೃತ್ತ, ಸ್ವಾಮಿ ವಿವೇಕಾನಂದ ವೃತ್ತ ಮಾರ್ಗವಾಗಿ ತಾಲೂಕು ಆಡಳಿತ ಕಚೇರಿಗೆ ತಲುಪಿ ಸಮಾವೇಶಗೊಂಡಿತು.
ತಾಲೂಕು ಅಧ್ಯಕ್ಷ ಶಿವಾಲಾಲಸಿಂಗ ರಜಪೂತ ಮಾತನಾಡಿ, ರಾಜ್ಯದಲ್ಲಿ ಲಕ್ಷಾಂತರ ಜನಸಂಖ್ಯೆ ಹೊಂದಿರುವ ರಜಪೂತ ಸಮಾಜ ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ತೀವ್ರವಾಗಿ ಹಿಂದುಳಿದಿದೆ. ಸರ್ಕಾರಗಳ ನೆರವು ಸಿಗದೇ ಸಮಾಜ ಮುಖ್ಯ ವಾಹಿನಿಗೆ ಬರಲಾಗುತ್ತಿಲ್ಲ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸಮಾಜದ ಕೌಟುಂಬಿಕ ಸಮೀಕ್ಷೆ ಹಾಗೂ ಡಿಜಿಟಲ್ ನೋಂದಣಿ ಪ್ರಕ್ರಿಯೆ ಕಲಬುರ್ಗಿ ಜಿಲ್ಲಾಡಳಿತ ಅತ್ಯಂತ ಯಶಸ್ವಿಯಾಗಿ ನಡೆಸಿದೆ. ಸಮಾಜದ ಸಮಗ್ರ ದತ್ತಾಂಶಗಳ ವರದಿ ಬೆಂಗಳೂರಿನ ಹಿಂದುಳಿದ ವರ್ಗಗಳ ಕಲ್ಯಾಣ ಆಯೋಗದ ಪರಿಶೀಲನೆಯಲ್ಲಿದೆ. ಈ ಮಹತ್ವದ ಅಭಿಯಾನದ ಮೂಲಕ ಸಮಾಜ ಒಗ್ಗೂಡುತ್ತಿದೆ ಎಂದರು.
ಈ ಕೂಡಲೇ ರಜಪೂತ ಅಭಿವೃದ್ಧಿ ಮಂಡಳಿ ರಚಿಸುವ ಮೂಲಕ ಸಮಾಜದ ಜನರಿಗೆ ಸೂಕ್ತ ಸೌಲಭ್ಯ ಮತ್ತು ಉದ್ಯೋಗದ ಜತೆಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿದರು.
ದಶರಥಸಿಂಗ್ ರಜಪೂತ, ಹೀರಾಸಿಂಗ್ ರಜಪೂತ, ಕಲ್ಯಾಣಸಿಂಗ್ ರಜಪೂತ, ನೆಹರೂಸಿಂಗ್ ರಜಪೂತ, ದೀಪಕ ರಜಪೂತ, ಭಗವಾನ್ ರಜಪೂತ, ನಾರಾಯಣಸಿಂಗ್, ಸುಜೀತಸಿಂಗ್ ರಜಪೂತ ಸೇರಿ ತಾಲೂಕಿನ ವಿವಿಧ ಗ್ರಾಮಗಳ ರಜಪೂತ ಬಾಂಧವರು ಪಾಲ್ಗೊಂಡಿದ್ದರು.