

ದಾಬಸ್ಪೇಟೆ :
ನವಜಾತ ಶಿಶು ಸಹ ವಿಜ್ಞಾನಿ ಎಂಬುದನ್ನು ನಾವೆಲ್ಲರೂ ತಿಳಿದುಕೊಳ್ಳಬೇಕು. ಭೂಮಿಯ ಮೇಲೆ ಬದುಕಲು ಪ್ರತಿ ಜೀವಿಗೂ ಹಕ್ಕಿದೆ. ಭೂಮಿ ಕೇವಲ ಮನುಷ್ಯನ ಆಸ್ತಿಯಲ್ಲ ಎಂದು ವಿಜ್ಞಾನಿ ಬೈರೇಗೌಡ ತಿಳಿಸಿದರು.
ಸೋಂಪುರ ಹೋಬಳಿ ಮರಳಕುಂಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ "ಪರಿಸರದಲ್ಲಿ ನಾನು' ಕಾರ್ಯಕ್ರಮದಲ್ಲಿ ಮಾತನಾಡಿದರು.
ಮರಳಕುಂಟೆ ಭಾಗದಲ್ಲಿ ಕಾಡುಬೆಕ್ಕು, ಅಪರೂಪದ ಜೇಡ ಇದೆ. ಗ್ರಾಮದ ಸುನಿಲ್ ಮತ್ತು ಮಂಜುನಾಥ್ ಎಂಬುವವರು ಪರಿಸರ ಸಂರಕ್ಷಣೆ ಬಗ್ಗೆ ಅಪಾರ ಸಂಶೋಧನೆ ಮಾಡಿದ್ದಾರೆ. ಇರುವುದೊಂದೆ ಭೂಮಿ ಅದನ್ನು ಮನುಷ್ಯರಿಂದ ರಕ್ಷಿಸಿ. ಪ್ಲಾಸ್ಟಿಕ್ ಮನುಷ್ಯನ ದೇಹ ಸೇರಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಭೂಮಿಯಲ್ಲಿ ಯಾವುದೇ ವಸ್ತು ತ್ಯಾಜ್ಯವಾಗುವುದಿಲ್ಲ, ಈ ತ್ಯಾಜ್ಯವನ್ನು ಸಂಪನ್ಮೂಲ ಎಂದು ಭಾವಿಸಿ ಅದನ್ನು ಪುನ@ ಪರಿವರ್ತಿಸಿ ಉಪಯೋಗಕ್ಕೆ ತರುವ ಕಾರ್ಯವನ್ನು ವಿಜ್ಞಾನ ಕ್ಷೇತ್ರ ಹೆಚ್ಚು ಸಂಶೋಧನೆ ಮಾಡುತ್ತಿದೆ ಎಂದರು.
ಪ್ಲಾಸ್ಟಿಕ್ ಸಮುದ್ರ ಸೇರುತ್ತಿದ್ದು, ಜಲಚರಗಳು ಸಾಯುತ್ತಿವೆ. ಒಂದು ವೇಳೆ ಪ್ಲಾಸ್ಟಿಕ್ ಬಳಸುವ ಅನಿವಾರ್ಯತೆ ಬಂದರೆ ಕಡಿಮೆ ಮಾಡಿ ಎಂದು ಮಕ್ಕಳಿಗೆ ಕರೆ ನೀಡಿದರು.
ಪ್ಲಾಸ್ಟಿಕ್ ಸುಟ್ಟರೆ ಡಾಯಾಕ್ಸೀನ್ ಎಂಬ ಅಂಶ ಉತ್ಪತಿಯಾಗುತ್ತದೆ. ಆ ಗಾಳಿ ಸೇವಿಸಿದರೆ ಅದು ಕ್ಯಾನ್ಸರ್ಗೆ ದಾರಿ ಮಾಡುತ್ತದೆ. ಒಂದು ವೇಳೆ ಯಾರಾದರೂ ಪ್ಲಾಸ್ಟಿಕ್ ಸುಡುತ್ತಿರುವುದು ಕಂಡುಬಂದರೆ ಪ್ರಶ್ನೆ ಮಾಡಿ. ನಿಮ್ಮ ಜೀವಿತಾವಧಿಯಲ್ಲಿ ಎಂದಿಗೂ ಪ್ಲಾಸ್ಟಿಕ್ ಸುಡಬೇಡಿ ಎಂದರು.
ವಿದ್ಯಾರ್ಥಿಗಳಾದ ಯಶ್ವಂತ್, ಪ್ರಣವ್ ಎಸ್.ರಾವ್, ಹೊನ್ನೇಶ್ ಪರಿಸರ ಕುರಿತು ಮಾತನಾಡಿ, ಕುಡಿಯುವ ನೀರು, ಗಾಳಿ, ಮತ್ತು ಪರಿಸರವನ್ನು ಹಿರಿಯರು ದೇವರೆಂದು ಪೂಜಿಸುತ್ತಿದ್ದರು. ಪರಿಸರ ಸಂರಕ್ಷಣೆಯ ಮಹತ್ವ ಮರಗಳ ಬೆಳೆಸುವಿಕೆ, ನೀರಿನ ಸಂರಕ್ಷಣೆ, ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು ಹಾಗೂ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಶಿಕ್ಷಕಿ ಗಗನಾ ಮಾತನಾಡಿ, ಪರಿಸರ ರಕ್ಷಣೆ ಕೇವಲ ಸರ್ಕಾರದ ಕರ್ತವ್ಯವಲ್ಲ, ಪ್ರತಿಯೊಬ್ಬರ ಜವಾಬ್ದಾರಿ. ಒಬ್ಬ ವಿದ್ಯಾರ್ಥಿ ಒಂದು ಗಿಡ ಎಂಬ ಸಂಕಲ್ಪ ಕೈಗೊಂಡು ಯಾವುದನ್ನೇ ಆಗಲಿ ಪ್ರಶ್ನಿಸದೇ ನಂಬುವುದು ಸರಿಯಲ್ಲ. ಮೌಢ್ಯತೆಗೆ ನಾವು ತುತ್ತಾಗಬಾರದು ಎಂದರು.