ಎಸ್‌ಐಆರ್ ನಮೂನೆ ಭರ್ತಿ ನಿಖರವಾಗಿರಲಿ

ಹನೂರಿನ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಬಿಎಲ್‌ಒಗಳ ಸಭೆಯಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಸುದರ್ಶನ್ ಮಾತನಾಡಿದರು. ಆರ್.ನರೇಂದ್ರ, ಸಂದೀಪ್, ಮರಿಸ್ವಾಮಿ ಇತರರು ಇದ್ದಾರೆ.
ಹನೂರಿನ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಬಿಎಲ್‌ಒಗಳ ಸಭೆಯಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಸುದರ್ಶನ್ ಮಾತನಾಡಿದರು. ಆರ್.ನರೇಂದ್ರ, ಸಂದೀಪ್, ಮರಿಸ್ವಾಮಿ ಇತರರು ಇದ್ದಾರೆ.
Published on
ಹನೂರು: ಮತದಾರರ ಪಟ್ಟಿಯಲ್ಲಿ ಆರ್ಹ ಪ್ರತಿಯೊಬ್ಬರ ಹೆಸರು ಕೈ ಬಿಟ್ಟು ಹೋಗದಂತೆ ಅಗತ್ಯ ಮುಂಜಾಗ್ರತೆ ವಹಿಸಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಜಿಲ್ಲಾ ಉಸ್ತುವಾರಿ ಸುದರ್ಶನ್ ತಿಳಿಸಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಸಂಬಂಧ ಆಯೋಜಿಸಿದ್ದ ಬಿಎಲ್‌ಒಗಳ ಸಭೆಯಲ್ಲಿ ಮಾತನಾಡಿದರು.

ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ಅವರು 1951ರಲ್ಲಿ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಿದ್ದರು. ಪ್ರತಿ 10 ವರ್ಷಕ್ಕೊಮ್ಮೆ ಮತದಾರರ ಪಟ್ಟಿ ಪರಿಷ್ಕರಣೆಯಾಗಬೇಕು. ಆದರೆ ಕೇಂದ್ರದ ಬಿಜೆಪಿ ಸರ್ಕಾರ 20 ವರ್ಷಗಳ ಬಳಿಕ ಈ ಕಾರ್ಯವನ್ನು ಕೈಗೊಂಡಿದೆ. ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಮತ ಕಳ್ಳತನದ ವಿರುದ್ಧ ಧ್ವನಿ ಎತ್ತದಿದ್ದರೆೆ ಈ ಕಾರ್ಯ ಇಂದಿಗೂ ನಡೆಯುತ್ತಿರಲಿಲ್ಲ. ಈಗಾಗಲೇ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕಾರ್ಯ ಪ್ರಗತಿಯಲ್ಲಿದೆ. ಆದ್ದರಿಂದ ಪ್ರತಿಯೊಬ್ಬರೂ ಈ ಬಗ್ಗೆ ಎಚ್ಚರ ವಹಿಸಬೇಕು. ಗಣತಿ ನಮೂನೆಯನ್ನು ನಿಖರವಾಗಿ ಭರ್ತಿ ಮಾಡಿಸಬೇಕು. ಡಿಜಿಟಲ್ ಪಟ್ಟಿಯಲ್ಲಿಯೂ ಹೆಸರನ್ನು ಖಚಿತ ಪಡಿಸಿಕೊಳ್ಳುವುದರ ಮೂಲಕ ಎಲ್ಲ ಮತದಾರರು ಪಟ್ಟಿಯಲ್ಲಿರುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಮಾಜಿ ಶಾಸಕ ಆರ್.ನರೇಂದ್ರ ಮಾತನಾಡಿ, ಕ್ಷೇತ್ರದಲ್ಲಿ ಪರಿಷ್ಕರಣೆ ಕಾರ್ಯ ಶೇ.75ರಷ್ಟು ಮುಗಿದಿದ್ದು, ಬಾಕಿ ಇರುವ ಕಾರ್ಯಗಳನ್ನು ಪೂರ್ಣಗೊಳಿಸಲು ಪ್ರತಿಯೊಬ್ಬರೂ ಗಮನ ನೀಡಬೇಕು. ಕ್ಷೇತ್ರದಲ್ಲಿನ 72 ಸೋಲಿಗರ ಹಾಡಿಗಳಲ್ಲಿ ಸುಮಾರು 19 ಸಾವಿರಕ್ಕೂ ಹೆಚ್ಚು ಗಿರಿಜನರು ವಾಸಿಸುತ್ತಿದ್ದು, ಶೇ.93ರಷ್ಟು ಕಾರ್ಯ ಪೂರ್ಣಗೊಂಡಿದೆ ಎಂದರು. ಎಐಸಿಸಿ ಕಾರ್ಯದರ್ಶಿ ಸಂದೀಪ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರಿಸ್ವಾಮಿ, ಕ್ಷೇತ್ರ ಉಸ್ತುವಾರಿ ಬಸವರಾಜು, ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹನೂರಿನ ಮುಕುಂದವರ್ಮ, ರಾಮಾಪುರದ ಈಶ್ವರ್, ಬ್ಲಾಕ್ ಅಧ್ಯಕ್ಷ ಮಾದೇಶ್, ಮುಖಂಡರಾದ ಶಿವಕುಮಾರ್, ಕೊಪ್ಪಾಳಿ ಮಹದೇವನಾಯ್ಕ, ಚೇತನ್ ದೊರೆರಾಜು ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net